ಜೆಎಂ ಸ್ಕ್ರಿಪ್ಟ್

ಬೆಳ್ಳೆತೆರೆಯಲ್ಲಿ ದುಡಿದು ಕಣ್ಮರೆಯಾಗುವ ನಕ್ಷತ್ರಗಳು ಅನೇಕ. ಅಂಥವರಲ್ಲಿ ಒಬ್ಬರು ಜೆ.ಎಂ. ಪ್ರಹ್ಲಾದ್. ಕನ್ನಡ ಚಿತ್ರರಂಗಕ್ಕೆ ಹಲವು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ತಂದುಕೊಟ್ಟ ಕಥೆ, ಚಿತ್ರಕಥೆ, ಸಂಭಾಷಣೆಕಾರ ಇವರು.
ಮಂಡ್ಯದ ಟಿ. ನರಸೀಪುರದವರಾದರೂ ಓದಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ. ಕಾಲೇಜಿನ 'ಆಂತರಿಕ' ಪತ್ರಿಕೆ ನಡೆಸುತ್ತಾ, ಅಕ್ಷರ ಜಗತ್ತಿಗೆ ಕಾಲಿಟ್ಟರು. ಚಿತ್ರಕಲಾ ತರಬೇತಿ ಪಡೆದು ಹಲವು ಗುಂಪು ಕಲಾ ಪ್ರದರ್ಶನಗಳನ್ನು ನಡೆಸಿದರು. ಕಲೆ ಮತ್ತು ಸಾಹಿತ್ಯಗಳನ್ನು ರೂಢಿಸಿಕೊಂಡು ನಂತರ 'ಪಂಚಾಯ್ತಿ ವಾಣಿ' ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದರು. ಇವರ 'ವೇಷಗಳು' ನಾಟಕಕ್ಕೆ ಬಹುಮಾನ ಬಂತು. ನಂತರ 'ಪ್ರವಾಹ' ಎಂಬ ಕಾದಂಬರಿಯನ್ನೂ ರಚಿಸಿದರು. ಮುಂದೆ ಕನ್ನಡ ವಾಕ್‌ಚಿತ್ರದ ಮೊದಲ ನಿರ್ದೇಶಕ 'ವೈ.ವಿ. ರಾವ್'ರ ವ್ಯಕ್ತಿಚಿತ್ರದ ಪುಸ್ತಕ ಬರೆದರು. 'ಅರಗಿಣಿ' ಪತ್ರಿಕೆಗೂ ಅತ್ಯದ್ಭುತ ಕೊಡುಗೆ ಸಲ್ಲಿಸಿದರು.
ಡಾ. ಮೋಹನ್‌ಕುಮಾರ್‌ರ 'ನಿರೀಕ್ಷೆಯ ನೋಂಪಿ' ನಾಟಕದಲ್ಲಿ ಪುಂಡರೀಕನ ಪಾತ್ರದಲ್ಲಿ ಅಭಿನಯಿಸುವಾಗ ಹಂಸಲೇಖರ ಪರಿಚಯ. 'ಇದು ನನ್ನ ಜೀವನದ ತಿರುವು' ಎನ್ನುತ್ತಾರೆ ಪ್ರಹ್ಲಾದ್.ನೃತ್ಯ ನಾಟಕ ಹಾಗೂ ಜಾನಪದ ರೂಪಕ ಹೀಗೆ ವಿವಿಧ ನಾಟಕಗಳಲ್ಲಿ ಅಭಿನಯಿಸಿದರು. ಧಾರಾವಾಹಿ, ಟೆಲಿಫಿಲ್ಮ್ ಮತ್ತು ಸಾಕ್ಷ್ಯಚಿತ್ರಗಳಿಗೂ ಕೊಡುಗೆ ಕೊಟ್ಟರು. ಇದನ್ನು ಅರಿತ ಹಂಸಲೇಖ ಇವರಲ್ಲಿನ ಸಾಹಿತ್ಯದ ಬೀಜಕ್ಕೆ ನೀರೆರೆದು ರವಿಚಂದ್ರನ್‌ರ 'ಸಿಪಾಯಿ' ಚಿತ್ರದಲ್ಲಿನ ಕಥಾ ಕೆಲಸಕ್ಕೆ ಹಚ್ಚಿ ಬೆಳ್ಳೆತೆರೆಗೆ ಪರಿಚಯಿಸಿದರು. ಪೂರ್ಣ ಪ್ರಮಾಣದ ಚಿತ್ರಕಥೆ, ಸಂಭಾಷಣೆಯನ್ನು ಶಿವಮಣಿಯವರ ನಿರ್ದೇಶನದ 'ಶಿವಸೈನ್ಯ' ಚಿತ್ರಕ್ಕೆ ರಚಿಸಿದರು. 'ನೋಡು ಬಾ ನಮ್ಮೂರ' ಚಿತ್ರಕ್ಕಾಗಿ ಬರೆದ ಗೀತೆಗೆ 'ಉತ್ತಮ ಗೀತರಚನೆಕಾರ' ಗೌರವ ಲಭಿಸಿತು. ಟಿ.ಎನ್. ಸೀತಾರಾಂ ಅವರ 'ಕಾಮನಬಿಲ್ಲು' ಮತ್ತು 'ಮಾಯಾಮೃಗ' ಧಾರಾವಾಹಿಗೆ ಸಂಭಾಷಣೆ ಬರೆದಿದ್ದೂ ಇವರೇ.
ರಾಷ್ಟ್ರಪ್ರಶಸ್ತಿ ಪಡೆದ ಪಿ. ಶೇಷಾದ್ರಿ ನಿರ್ದೇಶನದ 'ಅತಿಥಿ' ಚಿತ್ರಕ್ಕೆ ಕಥೆ ಹೆಣೆದಿದ್ದು ಇವರೇ. ನಂತರದ 'ಬೇರು', 'ತುತ್ತೂರಿ' ಚಿತ್ರಗಳೂ ರಾಷ್ಟ್ರಪ್ರಶಸ್ತಿಯ ಪಟ್ಟಿಗೆ ಸೇರ್ಪಡೆಯಾದವು. ಸ್ವರ್ಣ ಕಮಲ ಪಡೆದ ರಾಮದಾಸ್ ನಾಯ್ಡು ಅವರ 'ಹೆಜ್ಜೆಗಳು' ಚಿತ್ರದ ಕಥೆಯೂ ಇವರದ್ದೇ. ಶಿವರಾಜ್ ದಂಡಿನಶಿವರ ನಿರ್ದೇಶನದ 'ಚೈತನ್ಯ' ಹಾಗೂ ಸುನಿಲ್ ಪುರಾಣಿಕ್ ಅವರ 'ಗುರುಕುಲ' ಮಕ್ಕಳ ಚಿತ್ರ ಪ್ರಶಸ್ತಿ ಹಾಗೂ ಕೋಡ್ಲು ರಾಮಕೃಷ್ಣರ 'ಮಾನಸ' ಚಿತ್ರಕ್ಕೆ ಸಿಕ್ಕಿದ್ದು ರಾಜ್ಯ ಪ್ರಶಸ್ತಿ. ಜಗ್ಗೇಶ್ ಅಭಿನಯದ ಕೆಲವು ಚಿತ್ರಗಳಿಗೆ ಸಂಭಾಷಣೆ ಒದಗಿಸಿದ್ದಾರೆ.
ಸಿದ್ಧಲಿಂಗಯ್ಯರಂಥ ದಿಗ್ಗಜರ ಚಿತ್ರಕ್ಕೆ ಶೀರ್ಷಿಕೆ ಗೀತೆಯನ್ನು ರಚಿಸಿ, ಸೈ ಎನಿಸಿಕೊಂಡರು ಪ್ರಹ್ಲಾದ್. ಭಾರ್ಗವ ನಿರ್ದೇಶನದ, ವಿಷ್ಣು ಅಭಿನಯದ 'ಜನನಿ ಜನ್ಮಭೂಮಿ' ಚಿತ್ರಕ್ಕೆ ಕಥೆ, ಸಂಭಾಷಣೆ ಮತ್ತು ಹಾಡನ್ನು ನೀಡಿದ್ದಾರೆ. ರಾಜೇಂದ್ರಸಿಂಗ್ ಬಾಬು ಹಾಗೂ ಚಂದ್ರಹಾಸ ಆಳ್ವರ ಚಿತ್ರಗಳಿಗೂ ಸಾಹಿತ್ಯದ ರುಚಿ ಸೇರಿಸಿದ್ದಾರೆ. ರೆಹಮಾನ್ ಅವರ ಸಂಗೀತ ನಿರ್ದೇಶನದ 'ಸಜಿನಿ' ಚಿತ್ರಕ್ಕೆ 2 ಗೀತೆಗಳನ್ನು ರಚಿಸಿದ್ದಲ್ಲದೇ ಇಳಯರಾಜ ಸಂಗೀತ ನಿರ್ದೇಶನದ ಚಿತ್ರಕ್ಕೂ ಹಾಡು ಬರೆದಿದ್ದಾರೆ.
ಸದಾಶಿವ ಶೆಣೈ ಅವರ 'ಪ್ರಾರ್ಥನೆ', ಕೆ. ಪಾರ್ಥಸಾರಥಿ ಅವರ 'ಸಂಸ್ಕಾರವಂತ' ಚಿತ್ರಕ್ಕೆ ಕಥೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆದಿದ್ದಾರೆ. ಹಾಸ್ಯ, ಪೌರಾಣಿಕ, ಐತಿಹಾಸಿಕ ಹೀಗೆ ಎಲ್ಲವನ್ನೂ ಆಪೋಶನೆಗೆ ತೆಗೆದುಕೊಂಡಿದ್ದಾರೆ ಪ್ರಹ್ಲಾದ್. 'ಸೀತೆ' ಧಾರಾವಾಹಿಗೆ 500ಕ್ಕೂ ಅಧಿಕ ಕಂತುಗಳಗೆ ಚಿತ್ರಕಥೆ ಬರೆದಿದ್ದಾರೆ. ಇಲ್ಲಿನ ಅತ್ಯುತ್ತಮ ಚಿತ್ರಕಥೆಗಾಗಿ ಉದಯ ಕುಟುಂಬ ಪ್ರಶಸ್ತಿ ಬಂದಿದೆ. 'ಹೆಳವನಕಟ್ಟೆ ಗಿರಿಯಮ್ಮ' ಧಾರಾವಾಹಿಗೆ 800ಕ್ಕೂ ಹೆಚ್ಚು ಕಂತುಗಳಿಗೆ ಕಥೆ, ಸಂಭಾಷಣೆ ಒದಗಿಸಿದ್ದಾರೆ. ಪೌರಾಣಿಕ ಹಿನ್ನೆಲೆಯ 'ಶಿವಲೀಲಾಮೃತ'ವಲ್ಲದೇ 'ಮಹಾಭಾರತ' ಧಾರಾವಾಹಿಗೆ 300ಕ್ಕೂ ಹೆಚ್ಚು ಕಂತುಗಳಿಗೆ ಚಿತ್ರಕಥೆಯನ್ನು ಪೋಣಿಸಿದ್ದಾರೆ.
8 ಸಾವಿರಕ್ಕೂ ಅಧಿಕ ಧಾರಾವಾಹಿ ಕಂತುಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿರುವ ಜೆ.ಎಂ. ಪ್ರಹ್ಲಾದ್‌ರ ಚಿತ್ರಸೇವೆ ಇನ್ನೂ ಎತ್ತರಕ್ಕೇರಲಿ ಎಂದು ಹಾರೈಸೋಣ.
- ಸಂಕೇತ್ ಗುರುದತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


