ಸಾಧನೆ

ಕನ್ನಡದ ಗೋಟೂರಿ

ಕನ್ನಡದ ಗೋಟೂರಿ
Published On :

'ಜಯ ಜನಾರ್ದನ ಕೃಷ್ಣ ರಾಧಿಕಾಪತೇ, ಜನ ವಿಮೋಚನ ಕೃಷ್ಣ ಜನ್ಮ ಮೋಚನ'- ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ ಹಾಡಿದು. ಮೊಬೈಲ್‌ನ ರಿಂಗ್‌ಟೋನ್, ಕಾರು, ಬಸ್ಸು, ದೇವಾಲಯ, ಹೋಟೆಲ್, ಸಭೆ- ಸಮಾರಂಭಗಳ ಆರಂಭಕ್ಕೆ ಮೊದಲು ಎಲ್ಲೆಡೆ ಕೇಳಿಬರುವ ಒಬ್ಬಳು ಬಾಲಕಿಯ ಮುಗ್ಧ ದನಿ ಎಲ್ಲರ ಹೃದಯದಲ್ಲಿ ಅನಿರ್ವಚನೀಯ ಆನಂದ ತುಂಬುವಂಥದ್ದು. ಈ ಹಾಡಿನ ಇಂಪು ಎಷ್ಟು ವರ್ಷಗಳಾದರೂ ಮಾಸುವುದಿಲ್ಲ. ಅಂದಹಾಗೆ, ಈ ಹಾಡನ್ನು ರಚಿಸಿದವರು ಪಶುಪತಿ ಪ್ರಸಾದ್ ಗೋಟೂರಿ.
ಇತ್ತೀಚೆಗೆ ಕಾಗಿನೆಲೆಯಲ್ಲಿ ನವೆಂಬರ್ 20ರಂದು ನಡೆದ 'ಕನಕ ಜಯಂತಿ ಉತ್ಸವ'ಯಲ್ಲಿ ಈ ಹಾಡನ್ನು ಬಾಲಕಿಯೊಬ್ಬಳು ಭಾವತುಂಬಿ ಹಾಡಿದಾಗ ಎಲ್ಲರೂ ಆ ಲಹರಿಯೊಳಗೆ ಲೀನವಾಗಿಬಿಟ್ಟರು. ಅಂದಿನ ಮತ್ತೊಂದು ವಿಶೇಷವೆಂದರೆ, ಅದನ್ನು ಬರೆದ ಗೋಟೂರಿಯವರೂ ಎದುರಿಗೆ ಕುಳಿತು ಕೇಳುತ್ತಿದ್ದುದು!
73 ವರ್ಷದ ಗೋಟೂರಿ ಅವರಲ್ಲಿ ಅಗಾಧ ಚೈತನ್ಯ ಅಡಗಿದೆ. ಆಂಧ್ರದ ಕರ್ನೂಲ್ ಜಿಲ್ಲೆಯ ಗೋಟೂರಿನಲ್ಲಿ ಇವರು ಜನಿಸಿದರು. ತೆಲುಗು ಮಾತೃಭಾಷೆಯಾದರೂ ಕನ್ನಡ ಹಾಗೂ ತಮಿಳಿನ ಮೇಲೂ ಅಷ್ಟೇ ಹಿಡಿತ ಸಾಧಿಸಿದ್ದಾರೆ. ಮೂರೂ ಭಾಷೆಯಲ್ಲಿ ಇದುವರೆಗೆ 20,000ಕ್ಕೂ ಹೆಚ್ಚು ಭಕ್ತಿಗೀತೆಗಳನ್ನು ರಚಿಸಿದ್ದು, ಅದರಲ್ಲಿ ಸಿಂಹಪಾಲು ಕನ್ನಡದ್ದೇ ಆಗಿದೆ. ಮೊದಲಿಗೆ ತೆಲುಗಿನಲ್ಲಿ ರಚಿಸುತ್ತಿದ್ದ ನಾಟಕಗಳನ್ನು ಕನ್ನಡದಲ್ಲಿ ಅನುವಾದಿಸಲು ಕರೆಬಂದಾಗ ಬೇರೆಯವರ ಹತ್ತಿರ ಮಾಡಿಸುತ್ತಿದ್ದರು. ಅದು ಅವರಿಗೆ ಸಮಾಧಾನ ಕೊಡದೇ ತಾವೇ ಶ್ರದ್ಧೆ ಮತ್ತು ಆಸಕ್ತಿಯಿಂದ ಕನ್ನಡ ಕಲಿತು ಅನುವಾದಿಸತೊಡಗಿದರು. ಇವರ ಹಲವು ಕನ್ನಡ ನಾಟಕಗಳು ಅಮೋಘ ಪ್ರದರ್ಶನ ಕಂಡಿವೆ.  
ಚಲನಚಿತ್ರ ಹಾಗೂ ಧಾರಾವಾಹಿಗಳಿಗೆ ಸಾಹಿತ್ಯ ರಚಿಸಿರುವುದಲ್ಲದೆ, ನಟರಾಗಿಯೂ ತೊಡಗಿಕೊಂಡವರು ಇವರು. ಜಯ ಜನಾರ್ಧನ ಸಿಡಿ ಅಲ್ಲದೆ, 8 ಹಾಡುಗಳನ್ನೊಳಗೊಂಡ 'ಬಾ ಬಾ ಕೃಷ್ಣ' ಎಂಬ ಕ್ಯಾಸೆಟ್ ಸಹ ಬಿಡುಗಡೆಯಾಗಿದೆ. 'ಆದಿಶಂಕರಚಾರ್ಯ' ಧಾರಾವಾಹಿಗೆ ಸಾಹಿತ್ಯ ರಚನೆ ಸಂಭಾಷಣೆ ರಚಿಸಿದ್ದಾರೆ. ರಾಮಾಯಣ, ಲವಕುಶ ಇತ್ಯಾದಿ ನೃತ್ಯರೂಪಕಗಳನ್ನು ಕನ್ನಡ ತೆಲುಗು ಎರಡೂ ಭಾಷೆಯಲ್ಲಿ ರಚಿಸಿದ್ದು, ಪ್ರದರ್ಶನಗೊಂಡಿವೆ. 'ಆಪ್ತಮಿತ್ರ' ಚಿತ್ರದ ಪ್ರಸಿದ್ಧ ಗೀತೆ 'ರಾ ರಾ...', 'ರಾಮ ಶ್ಯಾಮಭಾಮ'ದ 'ಜ್ವಾಪಾನ ರಾತ್ರಿಯಾಯ್ತು' ಗೀತೆಗಳೂ ಇವರಿಗೆ ಹೆಸರು ತಂದುಕೊಟ್ಟಿವೆ. ಗೋಟೂರಿಯವರ ಕನ್ನಡ ಸೇವೆ ಗುರುತಿಸಿ, 'ಕೆಂಪೇಗೌಡ', 'ಸ್ವರ ಕಲಾ ಗೌರವ', 'ಕನ್ನಡದ ಚೇತನ' ಹಲವು ಪ್ರಶಸ್ತಿಗಳನ್ನು ನೀಡಲಾಗಿದೆ.
ಒಂದು ಭಾಷೆ ಪ್ರಬುದ್ಧವಾಗಿ ಸರ್ವತೋಮುಖವಾಗಿ ಬೆಳೆಯುವ ನಿಟ್ಟಿನಲ್ಲಿ ತನ್ನ ಸಂಪರ್ಕಕ್ಕೆ ಬಂದ ಭಾಷಾ ಸಾಹಿತ್ಯಗಳ ಪ್ರಭಾವಕ್ಕೊಳಗಾಗಿ ಬೆಳೆಯುವುದು ಸಹಜ. ಇದಕ್ಕೆ ಕನ್ನಡ ಹೊರತಾಗಿಲ್ಲ. ಬೇರೆ ಭಾಷೆಯಿಂದ ಅನುವಾದಗೊಂಡ ಕೃತಿಗಳಿಂದಲೂ ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳುತ್ತಿದೆ. ಗೋಟೂರಿಯವರು ಅಣ್ಣಮಯ್ಯನವರ 108 ಕೀರ್ತನೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪುರಂದರದಾಸರ 108 ಕೀರ್ತನೆಗಳು ಅನುವಾದಗೊಳ್ಳುತ್ತಿವೆ. ಅವರ ಕಾರ್ಯ ಯಶಸ್ಸು ಕಾಣಲಿ. ಕನ್ನಡಕ್ಕೆ ಅವರಿಂದ ಹೆಚ್ಚಿನ ಸೇವೆ ಒದಗಲಿ ಎಂದು ಹಾರೈಸೋಣ. ಗೋಟೂರಿ ಅವರಿಗೆ ನೀವೂ ಶುಭಾಶಯ ಕೋರಿ ಮೊ. 9480117441.

- ಸೀತಾ ಎಸ್. ನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.