ಸಾಧನೆ

ವಿಲ್ POWER

ವಿಲ್ POWER
Published On :

ನಾವು ಜೀವನಪರ್ಯಂತ ಕಷ್ಟಪಟ್ಟು ದುಡಿದು ಗಳಿಸಿದ ಹಣ, ಆಸ್ತಿ-ಪಾಸ್ತಿ ಯಾರದೋ ಕೈವಶವಾದರೆ ತುಂಬಾ ನೋವಾಗುತ್ತದೆ ಅಲ್ಲವೇ? ನಮ್ಮ ಸ್ವತ್ತು ಪರರ ಪಾಲಾಗದಿರಲಿ, ಮಕ್ಕಳ ಮಧ್ಯ ಜಗಳಕ್ಕೆ ಕಾರಣವಾಗದಿರಲಿ ಎಂದೇ ವಿಲ್ ಮಾಡಿಡುತ್ತೇವೆ. ನಮ್ಮ ಕಾಲಾನಂತರ ನಮ್ಮ ಆಸ್ತಿ ವಿಲ್‌ನಲ್ಲಿ ಯಾರಿಗೆ ಸೇರಬೇಕೆಂದು ಬಯಸಿರುತ್ತೇವೆಯೋ ಅವರಿಗೆ ಮಾತ್ರ ಸಿಗುತ್ತದೆ. ವಿಲ್ ನಮ್ಮ ಸಂಪತ್ತು ಪರಭಾರೆಯಾಗುವುದನ್ನು ತಪ್ಪಿಸುವುದಲ್ಲದೆ ಸಂಪತ್ತಿನ ಹಂಚಿಕೆಯಲ್ಲಿ ಜಗಳವಾಗುವುದನ್ನು ತಪ್ಪಿಸಲೂ ಸಹಾಯಕವಾಗುತ್ತದೆ.

ವಿಲ್ ಅಂದರೆ ಏನು?
ನಿಮ್ಮ ಮರಣಾನಂತರ ನೀವು ಗಳಿಸಿದ ಸ್ಥಿರ-ಚರ ಆಸ್ತಿ, ನಗದು ಹಣ, ಒಡವೆಗಳು, ಫಿಕ್ಸೆಡ್ ಡಿಪಾಜಿಟ್‌ಗಳು, ಬ್ಯಾಂಕ್ ಬ್ಯಾಲೆನ್ಸ್, ಶೇರ್- ಡಿಬೆಂಚರ್, ಮ್ಯೂಚುವಲ್ ಫಂಡ್ ಇತ್ಯಾದಿಗಳ ಹಂಚಿಕೆ ನಿಮ್ಮ ಉತ್ತರಾಧಿಕಾರಿಯಾಗುವವರಿಗೆ ಯಾವ ಅನುಪಾತದಲ್ಲಿ ಆಗಬೇಕು ಎಂಬುದನ್ನು ಸವಿವರವಾಗಿ ಬರೆಸಿ, ಓದಿಸಿ ನಂತರ ಅದನ್ನು ಸಬ್‌ರಿಜಿಸ್ಟ್ರಾರ್ ಆಫೀಸಿನಲ್ಲಿ ರಜಿಸ್ಟರ್ಡ್ ಮಾಡಿಸುವ ಕೆಲಸಕ್ಕೆ ವಿಲ್ ಎನ್ನುತ್ತಾರೆ.

ಯಾರು ವಿಲ್ ಮಾಡುತ್ತಾರೆ?
18 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಯಾರೂ ವಿಲ್ ಮಾಡಿಡಬಹುದು. ವಿಲ್ ಮಾಡಿಸುವವನು ಆರೋಗ್ಯವಂತನಾಗಿರಬೇಕು. ಯಾರ ಒತ್ತಡಕ್ಕೂ, ಮೋಸಕ್ಕೂ ಒಳಗಾಗಿ ವಿಲ್ ಮಾಡಬಾರದು.

ಯಾವಾಗ ಮಾಡುವುದು ಯೋಗ್ಯ?
50 ವರ್ಷ ಮೇಲ್ಪಟ್ಟವರು, ಉದ್ಯೋಗಿಗಳಾಗಿದ್ದರೆ ನಿವೃತ್ತಿ ಹೊಂದಿದ ತಕ್ಷಣ ವಿಲ್ ಮಾಡುವುದು ಒಳಿತು. ಒಂದು ವೇಳೆ ಪತ್ನಿಸಮೇತರಾಗಿ ದುರ್ಗಮವಾದ ತೀರ್ಥಯಾತ್ರೆ ಕೈಗೊಳ್ಳುವ ಮನಸ್ಸು ಮಾಡಿದ್ದರೆ ಅಥವಾ ವಿದೇಶ ಪ್ರವಾಸಕ್ಕೆ ಹೊರಡುವ ತಯಾರಿಯಲ್ಲಿದ್ದರೆ ಯಾತ್ರೆಗೆ ಹೊರಡುವ ಮುನ್ನ ವಿಲ್ ಮಾಡಿಸುವುದು ಒಳ್ಳೆಯದು. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಕಡಿಮೆ ವಯಸ್ಸಿನವರೂ ವಿಲ್ ಮಾಡಿಸಬಹುದು.

ವಿಲ್-ಬಟವಾಡೆಯಲ್ಲಿ ಅಂತರವಿರಲಿ...
ನೀವು ಜೀವಂತವಿರುವಾಗಲೇ ವಿಲ್ ಮಾಡಿ. ಆದರೆ ನಿಮ್ಮ ಸಂಪತ್ತಿನ ಬಟವಾಡೆಯನ್ನು ಮಾತ್ರ ಜೀವಂತವಿರುವಾಗಲೇ ಮಾಡಬೇಡಿ. ಸಂಪತ್ತಿನ ಹಂಚಿಕೆ ಏನಿದ್ದರೂ ನಿಮ್ಮ ಮರಣಾನಂತರವೇ ಆಗಬೇಕು. ಒಂದು ವೇಳೆ ನೀವು ಜೀವಂತವಿರುವಾಗಲೇ ನಿಮ್ಮ ಆಸ್ತಿ ಹಂಚಿಕೆಯನ್ನು ಮಾಡಿಬಿಟ್ಟರೆ ಆ ಆಸ್ತಿಯ ಮೇಲೆ ನಿಮಗೆ ಯಾವ ಹಕ್ಕೂ ಇರುವುದಿಲ್ಲ.

ವಿಲ್ ಹೇಗೆ ಮಾಡುವುದು?
ವಿಲ್ ಬರೆಸುವ ಮುನ್ನ ನಿಮ್ಮ ಬ್ಯಾಲೆನ್ಸ್‌ಶೀಟ್ ರೆಡಿ ಮಾಡಿಕೊಳ್ಳಿ. ಸ್ಥಿರ-ಚರ ಆಸ್ತಿಗಳ ಒಂದು ಲಿಸ್ಟ್ ಮಾಡಿಟ್ಟುಕೊಳ್ಳಿ. ನೀವು ಬೇರೆಯವರಿಗೆ ಎಷ್ಟು ಕೊಡುವುದಿದೆ; ಅದನ್ನು ಯಾವ ಮೂಲದಿಂದ ಕೊಡಲು ಬಯಸಿದ್ದೀರಿ ಎಂಬುದನ್ನು ಬರೆದಿಟ್ಟುಕೊಳ್ಳಿ. ನಿಮ್ಮ ಸ್ಥಿರ ಆಸ್ತಿಯನ್ನು ಹಂಚಿಕೊಡಲು ಬಯಸುತ್ತೀರಿ ಎಂದಾದಲ್ಲಿ ಆ ಆಸ್ತಿಯ ಒಂದು ನಕ್ಷೆಯನ್ನು ತಯಾರಿಸಿ ಅದರಲ್ಲಿ ಯಾವ ಯಾವ ಭಾಗ ಯಾರು ಯಾರಿಗೆ ಸೇರಬೇಕೆಂಬುದನ್ನು ಬಣ್ಣಗಳಿಂದ ತುಂಬಿ ಮಾರ್ಕ್ ಮಾಡಿ. ಅಷ್ಟೇ ಅಲ್ಲ ಆ ಆಸ್ತಿಗೆ ಎಲ್ಲರೂ ಹೋಗಿಬರುವುದಕ್ಕೆ ಅನುಕೂಲವಾಗುವಂಥ ಮಾರ್ಗವನ್ನು ವಿವರಿಸಿ. ನಿಮ್ಮ ಸಕಲ ಸ್ಥಿರ-ಚರ ಆಸ್ತಿಗಳ ವಿವರಗಳು ವಿಲ್‌ನಲ್ಲಿ ನಮೂದಿಗಿರುವಂತೆ ನೋಡಿಕೊಳ್ಳಿ. ಯಾವುದಾದರೂ ಒಂದು ಭಾಗ ಬಿಟ್ಟುಹೋದರೂ ಮುಂದೆ ಅದು ಜಗಳಕ್ಕೆ ಕಾರಣವಾಗಬಹುದು.

ವಿಲ್‌ನ ಸ್ವರೂಪ ಹೇಗಿರಬೇಕು?
ಇದಕ್ಕೆ ಒಂದು ನಿರ್ದಿಷ್ಟವಾದ ಸ್ವರೂಪಗಳೇನೂ ಇಲ್ಲ. ಆದರೆ ಅವಶ್ಯಕ ಮಾಹಿತಿಗಳಿರಬೇಕು. ಯಾರ ಹೆಸರಿಗೆ ವಿಲ್ ಮಾಡುತ್ತೀರಿ ಅವರ ಪೂರ್ತಿ ಹೆಸರು, ತಂದೆ ಹೆಸರು, ವಯಸ್ಸು, ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಅವರ ಪೋಷಕರ ಹೆಸರು, ವಿಳಾಸ, ಅವರ ಜತೆ ನಿಮಗಿರುವ ಸಂಬಂಧ ಯಾವ ರೀತಿಯದು ಎಂಬುದನ್ನು ಬರೆಯಬೇಕು. ವಿಲ್ ಅನ್ನು ಬಿಳಿಹಾಳೆಯಲ್ಲಿ ನಿಮ್ಮ ಮಾತೃಭಾಷೆಯಲ್ಲೇ ಬರೆಸಿ, ಓದಿ ಸಹಿ ಮಾಡಬೇಕು.

ಪಾಲುದಾರಿಕೆ ಸಂಪತ್ತಿನ ವಿಲ್
ಯಾವ ವ್ಯಕ್ತಿ ಪಾಲುದಾರಿಕೆ ಅಥವಾ ಪಾರ್ಟ್‌ನರ್‌ಶಿಪ್ ಬಿಜಿನೆಸ್ ಮಾಡುತ್ತಾನೋ ಅಂಥ ವ್ಯಕ್ತಿ ವಿಲ್ ಮಾಡುವಾಗ ತನ್ನ ಪಾಲಿನ ಪಾಲುದಾರಿಕೆ ಅಥವಾ ಪಾರ್ಟ್‌ನರ್‌ಶಿಪ್‌ನ ಆಸ್ತಿಗಷ್ಟೇ ವಿಲ್ ಮಾಡಬೇಕಾಗುತ್ತದೆ.

ವಿಲ್‌ನಲ್ಲಿ ಸಾಕ್ಷಿದಾರರ ಪಾತ್ರ
ವಿಲ್ ಬರೆದು ರಜಿಸ್ಟರ್ ಮಾಡಿಸುವಾಗ ಇಬ್ಬರು ಸಾಕ್ಷಿದಾರರು ಅವಶ್ಯವಾಗಿ ಬೇಕಾಗುತ್ತದೆ. ನೀವು ಒದಗಿಸುವ ಸಾಕ್ಷಿಗಳು ನಿಮಗೆ ವಿಶ್ವಾಸಪಾತ್ರರಾಗಿರಬೇಕಾಗುತ್ತದೆ. ಅವರು ನಿಮ್ಮ ವಿಲ್‌ನ ವಿಚಾರವನ್ನು ಪ್ರಚಾರ ಮಾಡುವಂತಿರಬಾರದು. ಅಷ್ಟೇ ಅಲ್ಲ ನೀವು ನಿಮ್ಮ ವಿಲ್‌ನಲ್ಲಿ ವಿವರಿಸಿದ ಉತ್ತರಾಧಿಕಾರಿಗಳ ಹೆಸರುಗಳನ್ನು ಯಾರಿಗೂ ಹೇಳಬಾರದು. ಒಂದು ವೇಳೆ ನೀವು ನಿಮ್ಮ ವಿಲ್ ರಜಿಸ್ಟರ್ ಮಾಡಲು ಬಯಸದಿದ್ದಲ್ಲಿ ಆಗ ಸಾಕ್ಷಿದಾರರಾಗಿರುವವರು ಒಬ್ಬರು ವೈದ್ಯರು, ಇನ್ನೊಬ್ಬರು ವಕೀಲರಾಗಿದ್ದರೆ ಒಳ್ಳೆಯದು. ಈ ಇಬ್ಬರು ಸಾಕ್ಷಿದಾರರು ವಿಲ್ ಬರೆಸುವವರಿಗಿಂತ ಕಡಿಮೆ ವಯಸ್ಸಿನವರಾಗಿರಬೇಕಾಗಿರುತ್ತದೆ.

- ಎಂ.ಬಿ. ನಾಯಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.