ಒಂದು ಮುತ್ತಿನ ಕಲೆ!
ಮೂಲತಃ ತುಮಕೂರಿನವರಾದ ವಾಸವಾಂಬ, ವಯಸ್ಸು ಎಪ್ಪತ್ನಾಲ್ಕಾದರೂ...

ಮೂಲತಃ ತುಮಕೂರಿನವರಾದ ವಾಸವಾಂಬ, ವಯಸ್ಸು ಎಪ್ಪತ್ನಾಲ್ಕಾದರೂ ಚಿತ್ರ ಬಿಡಿಸುವ ಗೀಳನ್ನು ನಿಲ್ಲಿಸಿಲ್ಲ. ಆ ಕಲೆ ದೈವದತ್ತ. ಬಾಲ್ಯದಿಂದಲೂ ಚಿತ್ರಕಲಾಸಕ್ತಿ ಅವರೊಳಗೆ ಅಡಗಿ ಕುಳಿತಿತ್ತು. ಆದರೆ, ಅದು ಅರಳಲು ಶುರುಮಾಡಿದ್ದು 45ನೇ ವಯಸ್ಸಿನಲ್ಲಿ!
ಸ್ನೇಹಿತೆಯ ಮಗಳು ಬಿಡಿಸುತ್ತಿದ್ದ ಮೈಸೂರು ಶೈಲಿಯ ಚಿತ್ರಕಲೆಯನ್ನು ನೋಡಿ ಇವರಿಗೂ ಕಲಿಯಬೇಕೆಂಬ ಆಸಕ್ತಿ ಮೂಡಿತು. ಪತಿ ಹಾಗೂ ಮಕ್ಕಳ ಪ್ರೋತ್ಸಾಹ, ಬೆಂಗಳೂರಿನ ಚಿತ್ರಕಲಾ ಪರಿಷತ್ ನೆರವಿನೊಂದಿಗೆ ಕಲಾ ತರಬೇತಿ ಮುಂದುವರಿಸಿದರು. ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ಕಲಾವಿದ ದೊರೆಸ್ವಾಮಿಯವರ ಮಾರ್ಗದರ್ಶನದಲ್ಲಿ ಪರಿಪೂರ್ಣತೆ ಸಾಧಿಸಿದರು. ಹಿಂದಿ ಭಾಷೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ ಇವರು 'ಹಿಂದಿ ವಿಶಾರದಾ' ಪರೀಕ್ಷೆಯಲ್ಲಿ ಕೂಡ ತೇರ್ಗಡೆ ಹೊಂದಿದ್ದಾರೆ.
ಇವರು ಆರಿಸಿಕೊಂಡ ಕಲಾಪ್ರಕಾರ 'ಸಾಂಪ್ರದಾಯಿಕ ಮೈಸೂರು- ತಂಜಾವೂರು ಶೈಲಿಯ ಕಲೆ'. ಹಿಂದೂ ದೇವ- ದೇವತೆಗಳೇ ಈ ಶೈಲಿಯ ಪ್ರಮುಖ ಚಿತ್ರವಿಷಯಗಳಾಗಿವೆ. ಕರಗತ ಮಾಡಿಕೊಂಡು ಪರಿಣತಿ ಗಳಿಸಲು ಇದು ಸ್ವಲ್ಪ ಕಷ್ಟದ ಕಲೆಯಾದರೂ ಆಸಕ್ತಿ, ಶ್ರದ್ಧೆ, ಪರಿಶ್ರಮವಿದ್ದರೆ ಅಸಾಧ್ಯವೇನಲ್ಲ. ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿರುವ ಅತ್ಯಂತ ಪ್ರಾಚೀನ ಜನಪದ ಕಲೆ ಇದು. ಮೈಸೂರು ಶೈಲಿಯಾಗಲಿ, ತಂಜಾವೂರು ಶೈಲಿಯಾಗಲಿ ಅದು ಅಲ್ಲಿನ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ಅರಳಿದ ಕಲೆ. ಸೃಜನಶೀಲತೆಯನ್ನು ಪ್ರಚೋದಿಸುವ ಎಲ್ಲ ಅಂಶಗಳೂ ಈ ಕಲೆಯಲ್ಲಿವೆ. ವಾಸವಾಂಬ ಈ ಶೈಲಿಯನ್ನು ತಮ್ಮ ಭಾವಾಭಿವ್ಯಕ್ತಿಯ ಮಾಧ್ಯಮ ಮಾಡಿಕೊಂಡಿದ್ದರ ಹಿಂದೆ ಶ್ರದ್ಧೆ, ಛಲ, ಆಸಕ್ತಿ ಹಾಗೂ ಅಗಾಧ ಶ್ರಮ ಇದೆ.
ಮಹಾಗಣಪತಿ, ಲಕ್ಷ್ಮಿ, ಸರಸ್ವತಿ, ಪಾರ್ವತಿ- ಪರಮೇಶ್ವರ, ಆಂಜನೇಯ, ಸತ್ಯನಾರಾಯಣ, ರಾಘವೇಂದ್ರಸ್ವಾಮಿ, ಬಂಗಾರ ಲೇಪಿತ ರಾಮ- ಸೀತೆ- ಹನುಮಂತ, ಬಾಲ್ಯದಿಂದ ಯವ್ವನದವರೆಗಿನ ವಿವಿಧ ಹಂತಗಳ ಕೃಷ್ಣನ ಎಲ್ಲ ಚಿತ್ರಗಳನ್ನೂ ಬಿಡಿಸಿದ್ದಾರೆ. ಗೋಪಿಕೆಯರು, ದುರ್ಗಾದೇವಿ, ಶ್ರೀನಿವಾಸ ಕಲ್ಯಾಣದ ಸಂದರ್ಭದ ಚಿತ್ರ... ಹೀಗೆ ನೂರಾರು ಚಿತ್ರಗಳನ್ನು 25 ವರ್ಷಗಳಿಂದ ರಚಿಸುತ್ತಿದ್ದಾರೆ. ಕನ್ನಿಕಾ ಪರಮೇಶ್ವರಿ ಚಿತ್ರಪಟದ ತುಂಬ 102 ಗೋತ್ರದ ಹೆಸರನ್ನು ಆಲದ ಎಲೆಯ ಮೇಲೆ ಬರೆದಿರುವುದು ವಿಶೇಷ. ಬಹುಶಃ ಇವರು ಯಾವ ದೇವರನ್ನೂ ಬಿಟ್ಟಿಲ್ಲ!
ಇವರು ರಚಿಸಿದ ಚಿತ್ರಗಳೆಲ್ಲವೂ ದೇವ- ದೇವತೆಯರ ಚಿತ್ರಗಳೇ ಆಗಿರುವುದರಿಂದ ಚಿತ್ರಗಳಲ್ಲಿ ಆಭರಣಗಳ ಬಳಕೆ ಹೆಚ್ಚು. ಹಾಗಾಗಿ ಖರ್ಚೂ ಹೆಚ್ಚಾಗಿರುತ್ತದೆ. 'ದೇವರ ಚಿತ್ರಗಳೆಂದಮೇಲೆ ಕೊರಳ ಹಾರ, ಕಿರೀಟ, ಕೈಕಡಗ, ಮೂಗುತಿ, ಕಾಲ್ಗೆಜ್ಜೆ, ಸೊಂಟಪಟ್ಟಿ (ಡಾಬು) ಮುಂತಾದ ಒಡವೆಗಳಿರಲೇಬೇಕು. ಗುಣಮಟ್ಟದ ಪರಿಕರಗಳನ್ನೇ ಬಳಸಬೇಕಾಗುವುದರಿಂದ ಹಣ ಹೆಚ್ಚು ವ್ಯಯವಾಗುತ್ತದೆ. ಕಲಾಕೃತಿಗಳಲ್ಲಿ ಬಳಸುವ ಚಿನ್ನದ ಹಾಳೆ, ಚಿನ್ನದ ರೇಕು, ಮುತ್ತು, ರತ್ನಗಳಿಂದ ಹೆಚ್ಚು ನೈಜತೆ ಬರುತ್ತದೆ. ಈ ತರಹದ ಕಲಾಕೃತಿಯ ಪಟಕ್ಕೆ ಅಚ್ಚುಕಟ್ಟಾದ ಮತ್ತು ಸರಿಯಾದ ವರ್ಣವಿನ್ಯಾಸದ ಕಟ್ಟು (ಫ್ರೇಮ್) ಹಾಕಬೇಕು' ಎನ್ನುತ್ತಾರೆ ವಾಸವಾಂಬ. ಎಷ್ಟೋ ದೇಗುಲಗಳಲ್ಲಿ ಇವರು ಬಿಡಿಸಿದ ಫ್ರೇಮ್ ಹಾಕಿದ ದೇವರ ಚಿತ್ರಗಳಿವೆ. ಒಂದು ಚಿತ್ರವನ್ನು ಮುಗಿಸಲು ತಿಂಗಳುಗಟ್ಟಲೆ ಸಮಯ ಬೇಕೆಂದರೆ ಈ ಕಲೆ ಎಷ್ಟೊಂದು ಶ್ರದ್ಧೆ, ಶ್ರಮ ಬೇಡುತ್ತದೆ ಎಂಬುದು ತಿಳಿಯುತ್ತದೆ.
1994ರಿಂದ ಇದುವರೆಗೆ 25ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲದೇ ಅಮೆರಿಕದ ಬಾಸ್ಟನ್‌ನಲ್ಲೂ ಏಕವ್ಯಕ್ತಿ ಪ್ರದರ್ಶನ ನೀಡಿದ ಹೆಗ್ಗಳಿಕೆ ವಾಸವಾಂಬ ಅವರದು. ಅಷ್ಟೇ ಅಲ್ಲ, ಅಲ್ಲಿನ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಆಸಕ್ತ ಮಹಿಳೆಯರಿಗೆ ಮೈಸೂರು- ತಂಜಾವೂರು ಶೈಲಿಯ ಚಿತ್ರಕಲೆಯನ್ನು ಕಲಿಸಿಕೊಟ್ಟಿದ್ದಾರೆ! ಇವರಲ್ಲಿ ತರಬೇತಿ ಪಡೆದ ನೂರಾರು ಮಹಿಳೆಯರು ಉತ್ತಮ ಕಲಾವಿದರಾಗಿ ರೂಪುಗೊಂಡಿದ್ದಾರೆ. ಇವರಿಗೆ ಸಂಘ- ಸಂಸ್ಥೆಗಳಿಂದ ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. 'ವರ್ಷದ ಪ್ರತಿಭಾನ್ವಿತ ಮಹಿಳೆ' ಪ್ರಶಸ್ತಿ, ಕರ್ನಾಟಕ ಸರ್ಕಾರದ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಕೂಡ ಪಡೆದಿದ್ದಾರೆ.
ಇವರ ಕೈಯಲ್ಲರಳಿದ ಹಲವು ಅತ್ಯಾಕರ್ಷಕ ಚಿತ್ರಗಳು ದೇಶ ವಿದೇಶಗಳ ಕಲಾರಸಿಕರ ಮನೆಯ ಗೋಡೆಗಳನ್ನಲಂಕರಿಸಿವೆ. ಇವರು ರಚಿಸಿದ ಚಿತ್ರಗಳನ್ನು ವರ್ಷದ ಕ್ಯಾಲೆಂಡರ್‌ಗಳಲ್ಲಿ ಬಳಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮನ್ನು ಗುರುತಿಸಿಕೊಂಡ ವಾಸವಾಂಬ ಅವರು ಮೈಸೂರು- ತಂಜಾವೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲೆ ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದ್ದಾರೆ.
ಸೂಕ್ತ ಮಾಧ್ಯಮ
ಕಲಾವಿದನೊಬ್ಬ ತನ್ನ ಆಸಕ್ತಿ ಹಾಗೂ ಸೃಜನಶೀಲ ಅಭಿರುಚಿಗನುಗುಣವಾಗಿ, ವಯಸ್ಸಿನ ನಿರ್ಬಂಧವಿಲ್ಲದೆ ಏನಾದರೂ ಸಾಧಿಸಲು ಖಂಡಿತ ಸಾಧ್ಯವಿದೆ. ಕಲಾವಿದನ ಸೃಜನಶೀಲತೆಯನ್ನು ಅಭಿವ್ಯಕ್ತಪಡಿಸಲು ಕಲೆ ಅತ್ಯಂತ ಸೂಕ್ತ ಮಾಧ್ಯಮ.
- ವಾಸವಾಂಬ
ಉಚಿತ ತರಬೇತಿ
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಾಸವಾಂಬ (8105253161), ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ನೂರು ಬಡ ಹೆಣ್ಣುಮಕ್ಕಳಿಗೆ ಉಚಿತವಾಗಿ ಚಿತ್ರಕಲಾ ತರಬೇತಿ ನೀಡಿ, ಆರ್ಥಿಕ ಸ್ವಾವಲಂಬಿಗಳಾಗಲು ಸಹಕರಿಸಿದ್ದಾರೆ. ಅಷ್ಟೇ ಅಲ್ಲ, ವರ್ಣಚಿತ್ರಗಳ ಮಾರಾಟದಿಂದ ಬರುವ ಹಣದ ಶೇ.25ರಷ್ಟನ್ನು ಬುದ್ಧಿಮಾಂದ್ಯರ ಅಭಿವೃದ್ಧಿಗೆ ದುಡಿಯುತ್ತಿರುವ ಬೆಂಗಳೂರಿನ 'ರಹಸ್ಯ ಟ್ರಸ್ಟ್'ಗೆ 25 ವರ್ಷಗಳಿಂದ ನೀಡುತ್ತಿರುವುದು ಶ್ಲಾಘನೀಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


