ಪಂಡಿತರ ಮನೆ
70 ಅಡಿ ಎತ್ತರದವರೆಗೂ ಕ್ಯಾಕ್ಟಸ್ ಬೆಳೆಸಿ ಲಿಮ್ಕಾ ಹಾಗೂ ಗಿನ್ನೆಸ್ ಬುಕ್ಕಿನಲ್ಲಿ ತಮ್ಮ ಹೆಸರನ್ನು...

ಓ ಮುಳ್ಳುಗಳೇ ಹೂವಾಗಿ ಬನ್ನಿ
ಮುಳ್ಳುಗಳೇ ಕನಸಾಗಿ ಬನ್ನಿ
ರಂಗು ರಂಗಿನ ಪುಷ್ಪಗಳ ತನ್ನಿ
ಮನೆಯಂಗಳದಿ ಬೊಗಸೆ ನೀರಿಗೆ
ಅರಳಿ ನಿಲ್ಲುವ ಕಂಟಿಗಳೇ
ಮನದಂಗಳಕೆ ಬನ್ನಿ ನೆನಪಾಗಿ
ಒಂದು ಕ್ಷಣದ ಬದುಕಿಗಾಗಿ
ಜೀವ ಸ್ಪಂದಿಸುತಿದೆ ಬನ್ನಿ
ಓ ಮುಳ್ಳುಗಳೇ ಹೂವಾಗಿ ಬನ್ನಿ....
70 ಅಡಿ ಎತ್ತರದವರೆಗೂ ಕ್ಯಾಕ್ಟಸ್ ಬೆಳೆಸಿ ಲಿಮ್ಕಾ ಹಾಗೂ ಗಿನ್ನೆಸ್ ಬುಕ್ಕಿನಲ್ಲಿ ತಮ್ಮ ಹೆಸರನ್ನು ಅಜರಾಮರಗೊಳಿಸಿದ ಧಾರವಾಡದ ಪಂಡಿತ ಮುಂಜಿ, ತಾವು ಬೆಳೆಸಿದ 48 ಬಗೆಯ ಕ್ಯಾಕ್ಟಸ್ ಬಳ್ಳಿಗಳ ಮೇಲಿನ ಮುಳ್ಳಿನ ಕುರಿತು ಬರೆದ ಸಾಲುಗಳಿವು.
48 ಜಾತಿ ಕ್ಯಾಕ್ಟಸ್ ಬಳ್ಳಿಗಳ ಸಂಗ್ರಹ ಹೊಂದಿರುವ ಪರಿಸರವಾದಿ ಪಂಡಿತ ಮುಂಜಿ, ಇನ್ನೊಂದೆಡೆ ಔಷಧೀಯ ಸಸ್ಯಗಳು, ಕುಬ್ಜ (ಬೋನ್ಸಾಯ್) ಗಿಡಗಳು, ಮಡಿಕೆಯಲ್ಲಿ ಜೇನನ್ನೂ ಸಾಕಿದ್ದಾರೆ. ಆಚಿನೋ ಗೋಲ್ಡನ್ ಬ್ಯಾರಲ್, ಸಿರಸ್ ಗ್ರ್ಯಾಂಡಿ ಫ್ಲೋರ್ (ದೈತ್ಯಾಕಾರದ ಕ್ಯಾಕ್ಟಸ್), ಎಲಂಗಾಟ್, ಫರೋಜ್ ಸೇರಿದಂತೆ 48 ಜಾತಿಯ ಕ್ಯಾಕ್ಟಸ್‌ಗಳು ಟೆರೇಸಿನಲ್ಲಿ ಸ್ವಚ್ಛಂದವಾಗಿ ಬೆಳೆದು ನಿಂತಿವೆ. (ಕ್ಯಾಕ್ಟಸ್ ಬಳ್ಳಿಯೊಂದು 50 ಅಡಿ ಬೆಳೆದಾಗ ಲಿಮ್ಕಾ ದಾಖಲೆ ಹಾಗೂ 70 ಅಡಿ ಬೆಳೆದಾಗ ಗಿನ್ನೆಸ್ ದಾಖಲೆ ಆಯಿತು. ಪ್ರಸ್ತುತ ಅದರ ನಿರ್ವಹಣೆಯಾಗದೇ ಮುರಿದುಬಿದ್ದಿದೆ).
ಆಲ, ಅರಳಿ, ಚಿಕ್ಕು, ಬಸರಿ, ಔದಾಂಬರ, ಪೇರಲ, ಚಿಕ್ಕು ಬೋನ್ಸಾಯ್ ಗಿಡಗಳು ಅತ್ಯಾಕರ್ಷಕವಾಗಿವೆ. ನೋಡಲು 4 ಅಡಿಗಿಂತ ಎತ್ತರವಾಗದಿದ್ದರೂ ಅವುಗಳಿಗೆ 10ರಿಂದ 20 ವರ್ಷಗಳಾಗಿವೆ. ಶಂಕ ಪುಷ್ಪ, ಚಹಾಸೊಪ್ಪು, ಲವಳ ಸರ, ನಾಗದಾಳ, ನೆಲನೆಲ್ಲಿ, ಅಡಸಾಗ, ಚೊಗಚೆ, ಮಧುನಾಶಿನಿ, ಇನ್‌ಸುಲಿನ್, ಪೆಪ್ಪರಮಿಂಟ್, ಬೇವು, ದೊಡ್ಡಪತ್ರಿ, ಗುಗ್ಗಳ, ಸರ್ಪಗಂಧಿ, ಸೌಂದರ್ಯ ವರ್ಧಕ, ದರ್ಬೆ, ಬಳ್ಳೊಳ್ಳಿ, ಅಂತರಗಂಗೆ, ಸಂಪಿಗೆ ಹೀಗೆ ಒಟ್ಟು 65 ಬಗೆ ಔಷಧಿ ಸಸ್ಯಗಳನ್ನು ಇವರು ಪೋಷಿಸಿದ್ದಾರೆ. ನೆಗಡಿ ಅಥವಾ ಸಣ್ಣಪುಟ್ಟ ಆರೋಗ್ಯ ಸಂಬಂಧಿ ರೋಗಗಳಿಗೆ ಮನೆ ಮೇಲಿನ ಔಷಧಿ ಸಸ್ಯಗಳೇ ಸಾಕು.
ನಿತ್ಯ ಇವರ ಮನೆಗೆ ಬುಲ್‌ಬುಲ್, ಮೈನಾ, ಪಾರಿವಾಳ ಹಾಗೂ ಲವ್ ಬರ್ಡ್ಸ್ ಪಕ್ಷಿಗಳು ಭೇಟಿ ನೀಡಿ, ಮುಂಜಿಯಲ್ಲಿನ ಆಹಾರ, ನೀರನ್ನು ಸೇವಿಸುತ್ತವೆ. ಇಲ್ಲಿನ ಸೀತಾಫಲ, ಕಿತ್ತಳೆ, ಮಾವುಗಳು ಪಕ್ಷಿ ಹಾಗೂ ಪ್ರಾಣಿಗಳಿಗಷ್ಟೇ ಸೀಮಿತವಾಗಿದ್ದು, ಮನೆಯ ಯಾರೊಬ್ಬರೂ ಆ ಹಣ್ಣುಗಳನ್ನು ಕಿತ್ತು ತಿನ್ನೋದಿಲ್ಲ. ಮಹಡಿ ಮೇಲೆಯೇ ಮಡಿಕೆಯೊಂದನ್ನು ಕಟ್ಟಲಾಗಿದ್ದು, ಇಲ್ಲಿ ಜೇನು ಸಂಸಾಹ ಹೂಡಿದೆ.
ಉದ್ಯಾನ ಅಭಿವೃದ್ಧಿ
ಅಲ್ಲದೆ, ಪಂಡಿತ ಮುಂಜಿ ಅವರು ಹು-ಧಾ ಮಹಾನಗರ ಪಾಲಿಕೆಯ ನಾರಾಯಣಪುರದಲ್ಲಿನ ಉದ್ಯಾನವನ್ನು (16 ಗುಂಟೆ ಜಾಗ) ಸ್ವಂತ ಖರ್ಚಿನಿಂದ ಅಭಿವೃದ್ಧಿಗೊಳಿಸಿದ್ದು, ಅಲ್ಲಿಯೂ ವೈವಿಧ್ಯ ಗಿಡಮರಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಮನೆ ಉದ್ಯಾನವನ ಗೌರವ
ಪರಿಸರ ಕುರಿತಾದ ನೂರಾರು ಅಂಚೆ ಚೀಟಿಗಳನ್ನು ಸಂಗ್ರಹಿಸಿ ಪ್ರದರ್ಶಿಸಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಪ್ರಾಣಿ, ಪಕ್ಷಿ, ಪರಿಸರ ಹಾಗೂ ಪ್ಲಾಸ್ಟಿಕ್ ಬಳಕೆ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಮನೆ ಮೇಲಿನ ಸಸ್ಯ ವನಕ್ಕೆ ಹು-ಧಾ ಪಾಲಿಕೆ ನಾಲ್ಕೈದು ಬಾರಿ ಅತ್ಯುತ್ತಮ 'ಮನೆ ಉದ್ಯಾನವನ' ಪ್ರಶಸ್ತಿ ನೀಡಿದೆ. ಇನ್ನು, ಫಲಪುಷ್ಪ ಪ್ರದರ್ಶನದಲ್ಲಿ ಮುಂಜಿ ಅಭಿವೃದ್ಧಿಗೊಳಿಸಿದ ಉದ್ಯಾನವನ 10 ವರ್ಷಗಳಿಂದ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಇಷ್ಟೆಲ್ಲ ಪರಿಸರ ಕಾಳಜಿ ಹೊಂದಿದ ಇವರಿಗೆ ಅನೇಕ ಸಂಘ-ಸಂಸ್ಥೆಗಳು ಸನ್ಮಾನ ಹಾಗೂ ಪ್ರೋತ್ಸಾಹಕ ಪ್ರಶಸ್ತಿಗಳನ್ನು ನೀಡಿವೆ.
ಕರ್ನಾಟಕ ಕೃಷಿ ಕೈಗಾರಿಕಾ ನಿಗಮದಲ್ಲಿ ಸ್ವಯಂ ನಿವೃತ್ತಿ ಪಡೆದ ಇವರ ಪರಿಸರ ಪ್ರೀತಿಗಾದರೂ ರಾಜ್ಯ ಸರ್ಕಾರ ಇವರನ್ನು ಗುರುತಿಸುವ ಅಗತ್ಯವಿದೆ.
- ಬಸವರಾಜ ಹಿರೇಮಠ
ಚಿತ್ರಗಳು: ಬಸವರಾಜ ಕೆ. ಅಳಗವಾಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


