ಅಪೂರ್ವ ಮಠ

ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಬೇಕೆಂಬ ತುಡಿತ. ಆದರೆ ಅವಕಾಶಗಳು ಒದಗಿದ್ದು ಕಡಿಮೆ. ಹಾಗೆಂದು ನಿರಾಸೆಯಿಂದ ಕೈಕಟ್ಟಿ ಕೂತವರಲ್ಲ ಎಂ.ಕೆ.ಮಠ.
ಮಠ ಎಂದರೆ ಬಹಳಷ್ಟು ಮಂದಿಗೆ ಗೊತ್ತಾಗದು. ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಶಿಷ್ಯ, ಸಹ ನಿರ್ದೇಶಕ ಮಠ ಎಂದರೆ 'ಓ ಅವರಾ' ಎಂದು ಉದ್ಗರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಮಠ, ಕಾಸರಗೋಡು ಚಿನ್ನಾ ಅವರ 'ಅಪೂರ್ವ ನಾಟಕ ತಂಡ'ದಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು. ನಾಗಾಭರಣರಿಗೆ ಮಠ ಅವರನ್ನು 'ಜೀವನ್ಮುಖಿ' ಧಾರಾವಾಹಿ ಚಿತ್ರೀಕರಣ ಸಂದರ್ಭದಲ್ಲಿ ಪರಿಚಯಿಸಿದ್ದರು ಚಿನ್ನಾ. ಆ ನಂತರ ಮಠ ನಾಗಾಭರಣ ಬಳಗ ಸೇರಿಕೊಂಡು ಅವರಿಗೆ ಸಹಾಯಕರಾದರು. ಶುರುವಿನಲ್ಲಿ ನಾಗಾಭರಣರ ಧಾರಾವಾಹಿ, ಸಿನಿಮಾಗಳಿಗೆ ಕ್ಲ್ಯಾಪ್‌ಬಾಯ್ ಕೆಲಸ ಮಾಡಿ, ನಂತರ ಸಂಭಾಷಣೆ, ಸಂಚಿಕೆ ನಿರ್ದೇಶನ, ಸಹ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಕೆಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಕೂಡ.
ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಒಲವನ್ನು ಬೆಳೆಸಿಕೊಂಡಿದ್ದ ಮಠ, ಒಳ್ಳೆ ಕತೆಗಾರ ಮತ್ತು ಕಾದಂಬರಿಕಾರರೂ ಹೌದು. ಎಲ್ಲ ಮರಿತಿದ್ದೀಯಾ, ಮಾನವಿ, ಕಜ್ಜಿನಾಯಿ ಅವರ ಪ್ರಕಟಿತ ಕೃತಿಗಳು. ಕೆಲಕಾಲ ಪತ್ರಕರ್ತರಾಗಿಯೂ ದುಡಿದಿದ್ದಾರೆ.
ಓ ನನ್ನ ಬೆಳಕೇ, ಸಂಕ್ರಾಂತಿ, ದೂರತೀರಯಾನ, ಟಪೋರಿ, ಮಹಾಮಾಯಿ, ಅಪ್ಪ, ನೆಲಮುಗಿಲು, ಆ ಊರು ಈ ಊರು, ಕೆಳದಿ ಚೆನ್ನಮ್ಮ, ಗೆಳತಿ ಸೇರಿದಂತೆ ನಾಗಾಭರಣರ ಬಹುತೇಕ ಧಾರಾವಾಹಿಗಳಿಗೆ ಸಂಭಾಷಣೆ ರಚಿಸಿ, ಸಹ ನಿರ್ದೇಶನ ಮಾಡಿದ್ದಾರೆ. ಸಿಂಗಾರವ್ವ, ಚಿಗುರಿದ ಕನಸು, ನಂ ಯಜಮಾನ್ರು, ಕಲ್ಲರಳಿ ಹೂವಾಗಿ, ವಸುಂಧರಾ ಅವರು ದುಡಿದಿರುವ ಪ್ರಮುಖ ಸಿನಿಮಾಗಳು. ನಟ ಶಿವಧ್ವಜ್ ನಿರ್ದೇಶನದ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಪಡೆದ ತುಳು ಚಿತ್ರ 'ಗಗ್ಗರ'ದ ತನಿಯಾನ ಪಾತ್ರಕ್ಕೆ ಮಠ ಅವರಿಗೆ ಕೆ.ಎಸ್.ಅಶ್ವಥ್ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ ಸಂದಿದೆ. 9 ಧಾರಾವಾಹಿ, 7 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಠ ಅವರಿಗೆ ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡುವ ಹಂಬಲವಿದೆ. 'ಅದೆಷ್ಟೊ ಮಂದಿ ನಾಗಾಭರಣ ಅವರಲ್ಲಿ ಸಹನಿರ್ದೇಶಕರಾಗಿ ದುಡಿದಿದ್ದಾರೆ. ಆದರೆ ನನ್ನ ಬಗ್ಗೆ ಅವರ ಪ್ರೀತಿ, ವಿಶ್ವಾಸ ಅಪಾರ. ನನ್ನನ್ನು ಮಗನಂತೆ ಸಲಹಿದ ಭರಣ ದಂಪತಿಗೆ ಕೃತಜ್ಞ' ಎನ್ನುತ್ತಾರೆ ಎಂ.ಕೆ.ಮಠ.
- ಈಶಪ್ರಸನ್ನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


