ನಾಗಸ್ವರ

ಮಂಡೂಕವಾದ್ಯ ಅಥವಾ ಮುಖವೀಣೆ ಎಂದರೆ ಯಾರಿಗೂ ಅರ್ಥವಾಗದು. ಅದೇ ಮೋರ್ಚಿಂಗ್ ಎಂದರೆ ಸಂಗೀತ ಪ್ರಿಯರ ಕಿವಿ ನೆಟ್ಟಗಾಗದಿರದು. ಇದರ ದನಿ ಕಪ್ಪೆ ಕೂಗಿನಂತೆ ಇರುವುದರಿಂದ ಇದಕ್ಕೆ ಮಂಡೂಕವಾದ್ಯ ಎಂದೂ, ಸ್ವಲ್ಪ ಮಟ್ಟಿಗೆ ವೀಣೆಯ ನಾದವನ್ನು ಕೇಳಿದಂತಾಗುವುದರಿಂದ ಮುಖವೀಣೆ ಎಂದೂ ಹೆಸರು ಬಂದಿರಬಹುದು.
ನಾಲಗೆ ಬಳಸಿ ನುಡಿಸುವ ಮೋರ್ಚಿಂಗ್ ಒಂದು ಅಪಾಯಕಾರಿ ವಾದ್ಯವೂ ಹೌದು. ಎಚ್ಚರ ತಪ್ಪಿದರೆ ನಾಲಗೆಯೇ ತುಂಡಾಗಬಹುದು. ಇಂದು ಕರ್ನಾಟಕದಲ್ಲಿ ಕೆಲವೇ ಮಂದಿ ಮೋರ್ಚಿಂಗ್ ವಾದಕರಿದ್ದು, ಅದರಲ್ಲೇ ವಿದ್ವತ್ ಆದವರಂತೂ ಬೆರಳೆಣಿಕೆಯಷ್ಟು. ಇಂತಹದ್ದೊಂದು ಮೋರ್ಚಿಂಗ್ ವಾದನದಲ್ಲಿ ಪ್ರಭುತ್ವ ಸಾಧಿಸಿ, ಅದನ್ನು ಮಲೆನಾಡು ಭಾಗದಲ್ಲಿ ಪ್ರಚುರಪಡಿಸಿದ್ದಲ್ಲದೆ, ಆ ಭಾಗದಲ್ಲಿ ಆಕಾಶವಾಣಿ ಕಲಾವಿದರಾಗಿ ಸೇವೆ ಸಲ್ಲಿಸಿದವರಲ್ಲಿ ವಿದ್ವಾನ್ ಜಮ್ಮಟಿಗೆ ನಾಗರಾಜ ಮೊದಲಿಗರು.
ಮಲೆನಾಡಿನಲ್ಲಿ ಅಪ್ರಸಿದ್ಧವಾಗಿದ್ದ ಮೋರ್ಚಿಂಗ್ ವಾದ್ಯ ನಾಗರಾಜರ ಕಿವಿಗೆ ಬಿದ್ದಿದ್ದು ಅವರ ಗುರು, ಮೃದಂಗ ವಿದ್ವಾನ್ ಕಾಂಚನಾಮೂರ್ತಿಯವರು ಕಛೇರಿಯೊಂದರಲ್ಲಿ ಇದನ್ನು ನುಡಿಸುತ್ತಿದ್ದಾಗ. ಆ ಕಛೇರಿಯ ನಂತರ ಗುರುಗಳ ಬಳಿ ಹೋಗಿ ಶ್ರದ್ಧೆಯಿಂದ ಮೋರ್ಚಿಂಗ್ ಕಲಿತ ನಾಗರಾಜ್ ಇಂದಿನವರೆಗೆ ಸುಮಾರು 500 ರಿಂದ 600 ಕ್ಕಿಂತಲೂ ಹೆಚ್ಚಿನ ಕಛೇರಿಗಳಲ್ಲಿ ಮೋರ್ಚಿಂಗ್ ಪಕ್ಕವಾದ್ಯ, ತಾಳವಾದ್ಯ ಬಾರಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ 63ರ ಹರೆಯದಲ್ಲೂ ನಿರರ್ಗಳವಾಗಿ ಕಚೇರಿಯಲ್ಲಿ ಭಾಗವಹಿಸುತ್ತಿದ್ದಾರೆ.
ಸುಗಮ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ ಸೇರಿದಂತೆ ಹಲವು ಪ್ರಕಾರದ ಸಂಗೀತ, ನೃತ್ಯಕ್ಕೆ ಮೋರ್ಚಿಂಗ್ ಸಾಥ್ ನೀಡಿದ ನಾಗರಾಜರು ರಾಜ್ಯದಲ್ಲೇ ಪ್ರಥಮ ಬಾರಿಗೆ ಯಕ್ಷಗಾನದೊಂದಿಗೆ ಮೋರ್ಚಿಂಗ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದು, ನೂತನ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ. ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಇವರ ಸಾಥ್‌ಗೆ ತಲೆದೂಗಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯ ಕೇರಳದ ಗುರುವಾಯೂರಿನಲ್ಲಿ ನಡೆದ ನಡೆದ ಚೆಂಬೈ ಸಂಗೀತೋತ್ಸವದಲ್ಲಿ ತಮ್ಮ ಮೋರ್ಚಿಂಗ್ ದನಿಯನ್ನು ಮೊಳಗಿಸಿದ್ದಾರೆ.
ಸುಮಾರು 40 ವರ್ಷ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ್ದು, ನಾದವಿದ್ಯಾ ಭಾಸ್ಕರ, ಲಯಸಿರಿ ಎಂಬ ಬಿರುದಾಂಕಿತರಾಗಿದ್ದಾರೆ. ಆ ಸಮಯದಲ್ಲೇ ಮಲೆನಾಡಿನ ಸುತ್ತಮುತ್ತ ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನ, ಅಭಿನಂದನಾ ಪತ್ರಗಳನ್ನು ಪಡೆದಿದ್ದಾರೆ. ಶಿವಮೊಗ್ಗದ ಮಹಿಳಾ ತ್ಯಾಗರಾಜ ಮಂಡಳಿ, ಹರಿಹರಪುರ ರೋಟರಿ ಗ್ರಾಮದಳ, ಕೊಪ್ಪದ ನಾದಬ್ರಹ್ಮ ಸಂಗೀತ ವಿದ್ಯಾದಯ, ನೆಮ್ಮಾರಿನ ಶ್ರೀರಾಮ ಸೇವಾ ಸಮಿತಿ ಸೇರಿದಂತೆ ಹಲವೆಡೆಯಿಂದ ಅಭಿನಂದನೆಗಳು ಸಂದಿವೆ. ಇವರಿಗೆ ಹುಟ್ಟೂರು ಜಮ್ಮಟಿಗೆ ನೀಲಕಂಠೇಶ್ವರ ಸೇವಾ ಸಮಿತಿಯಿಂದ ಸಿಕ್ಕಿದ ಅಭಿನಂದನೆ ಮರೆಯಲಾರದ್ದಂತೆ.
ಆಕಾಶವಾಣಿ ಪ್ರಸಾರಭಾರತಿ ನಡೆಸಿದ ಪರೀಕ್ಷೆಯಲ್ಲಿ ಬಿ-ಹೈ ದರ್ಜೆ ಪಡೆದು ಉತ್ತಮ ಕಲಾವಿದರ ಸ್ಥಾನಕ್ಕೆ ಸೇರಿರುವ ನಾಗರಾಜ್ ಅವರಿಗೆ ಪ್ರಸಾರಭಾರತಿಯಲ್ಲಿ ಮಲೆನಾಡಿಗರಿಗೆ ಹೆಚ್ಚಿನ ಅವಕಾಶ ನೀಡುತ್ತಿಲ್ಲ ಎಂಬ ಕೊರಗಿದೆ.
ಪ್ರಸ್ತುತ ಮಲೆನಾಡಿನಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಇವರು ಭಜನಾ ತಂಡವನ್ನು ಕಟ್ಟಿಕೊಂಡು ಭಜನೆಯ ಪ್ರಸಾರ ಮಾಡುವುದರೊಂದಿಗೆ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿ ತಮ್ಮ ಮೋರ್ಚಿಂಗ್ ನಾದ ಸುಧೆ ಹರಿಸುತ್ತಿದ್ದಾರೆ. ಸಂಪರ್ಕ: 9742060159.
- ಸುಧೀಂದ್ರ ಜಮ್ಮಟಿಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


