ಮೈಸೂರು ಹುಸೇನಿ
ಎಸ್.ಎಫ್. ಹುಸೇನಿ ಕಲಾವಲಯದಲ್ಲಿ 'ಮೈಸೂರು ಹುಸೇನಿ' ಎಂದೇ ಚಿರಪರಿಚಿತರು.

ಕಾಗದದ ಆ ಉಬ್ಬುಚಿತ್ರ ಮೊದಲ ನೋಟದಲ್ಲಿಯೇ ವಿಸ್ಮಯ ಉಂಟು ಮಾಡಿದರೆ, ಕಲಾರಸಿಕನ ಕಿವಿಯಲ್ಲಿ ಪಿಸುಗಟ್ಟಿ ಏನೋ ಹೇಳಿದಂತೆ ಭಾಸವಾದರೆ ಆಶ್ಚರ್ಯವಿಲ್ಲ. ಅದು ಕಲಾವಿದನ ಕೌಶಲ.
ಹೊಸ ಅನುಭವ ನೀಡುವ ತಮ್ಮ ಪ್ರಯೋಗಶೀಲ ಕಲಾಕೃತಿಗಳಿಂದಲೇ ಕಲಾ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿರುವವರು ಎಸ್.ಎಫ್. ಹುಸೇನಿ. ಕಾಗದವನ್ನು ಲೋಹದ ಫಲಕದಂತೆ ಉಬ್ಬು-ತಗ್ಗುಗಳಾಗುವಂತೆ ಹಚ್ಚಿ ಹೈ-ರಿಲೀಫ್ ಶಿಲ್ಪಗಳನ್ನಾಗಿಸುವ ವಿಧಾನವನ್ನು ಹುಸೇನಿಯವರ ಭಿತ್ತಿಶಿಲ್ಪಗಳಲ್ಲಿ ಕಾಣಬಹುದು. ಸಮಕಾಲೀನ ಸಂದರ್ಭದಲ್ಲಿ ಅಷ್ಟಾಗಿ ಬಳಕೆಯಾಗದ ಈ ಮಾಧ್ಯಮ ಕುತೂಹಲಕರವಾಗಿದೆ. ಕಲ್ಲು ಅಥವಾ ಕಂಚಿನಂತೆ ನೈಜತೆ ಭಾಸವಾಗುವ ಇವರ ಕಲಾಕೃತಿಗಳು ನಿಬ್ಬೆರಗಾಗಿಸುತ್ತವೆ. ಹುಸೇನಿ ಈ ಮಾಧ್ಯಮದಲ್ಲಿ ತನ್ನದೇ ವೈಶಿಷ್ಟ್ಯ ರೂಢಿಸಿಕೊಂಡಿದ್ದಾರೆ.
ಏನಾದರೂ ಹೊಸತು ಮಾಡಬೇಕು ಎಂದು ಆಲೋಚಿಸುತ್ತಿದ್ದಾಗ ಮನದಲ್ಲಿ ಮೂಡಿದ್ದು ಕಾಗದ ಉಬ್ಬುಚಿತ್ರ ರಚನೆ. ತಮ್ಮ ಬಳಿ ಹಾಗೂ ಸ್ನೇಹಿತರ ಬಳಿ ಇದ್ದ ಹಾಳೆಗಳನ್ನಲ್ಲಾ ಒಟ್ಟುಗೂಡಿಸಿ ಪ್ರಯೋಗ ಶುರುವಿಟ್ಟುಕೊಂಡರು. ಅದು ತಕ್ಕಮಟ್ಟಿಗೆ ಯಶ ಕಾಣುತ್ತಿದ್ದಂತೆ ಆ ಮಾಧ್ಯಮವನ್ನು ತಮ್ಮದಾಗಿಸಿಕೊಳ್ಳಲು ಮುಂದಾದರು. ಚಿತ್ರ-ವಿಚಿತ್ರ ರೀತಿಯ, ಅಮೂರ್ತ ಅಭಿವ್ಯಕ್ತಿ ಹುಸೇನಿಅವರ ವಿಶೇಷತೆ. ಹಾಗಂತ ಅವರ ಕೃತಿಗಳಲ್ಲಿ ನಿಶ್ಚಿತ ರೇಖಾ ವಿನ್ಯಾಸವಿದೆ.
ಎಸ್.ಎಫ್. ಹುಸೇನಿ ಕಲಾವಲಯದಲ್ಲಿ 'ಮೈಸೂರು ಹುಸೇನಿ' ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಫೀರ್, ತಾಯಿ ಜೀನಾತ್ ಉನ್ನಿಸಾ ಬೀ ಅವರ ಮಗನಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂನಲ್ಲಿ ಜನನ. ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ. ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ್ ಡಿಪ್ಲೊಮಾ ಮತ್ತು ಆರ್ಟ್ ಮಾಸ್ಟರ್ ಶಿಕ್ಷಣ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿ. ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನ. ಪ್ರತಿ ಕೃತಿಯಲ್ಲೂ ಹೊಸತನ ಬೇಕೆಂಬ ತುಡಿತ. ಏಕರೇಖಾ ಚಿತ್ರಗಳು, ಅಮೂರ್ತ ಛಾಯಾಚಿತ್ರಗಳು ಮತ್ತು ಸಾಂಝಿ ಕಾಗದ ಕತ್ತರಿ ಕಲೆಗಳಲ್ಲೂ ನಿಪುಣರು. ಸಿ.ಡಿ ಬಳಸಿ ತೆಗೆದಿರುವ ಅಮೂರ್ತ ಛಾಯಾಚಿತ್ರಗಳು ಐದು ಸಾವಿರಕ್ಕೂ ಹೆಚ್ಚು. ಇವರ ಅನೇಕ ಕೃತಿಗಳು ದೇಶ ಆಸ್ಟ್ರೇಲಿಯ, ಫಿನ್ಲೆಂಂಡ್, ಜರ್ಮನಿ, ದಕ್ಷಿಣ ಆಫ್ರಿಕಾ, ದೋಹಗಳ ಖಾಸಗಿ ಸಂಗ್ರಹಕಾರರಲ್ಲಿ ಸೇರಿವೆ.
ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗ, ಉಡುಪಿ, ಮುಂಬೈ, ದೆಹಲಿ, ಚೆನ್ನೈ ಹೀಗೆ ಅನೇಕ ಕಡೆಗಳಲ್ಲಿ 9 ಏಕವ್ಯಕ್ತಿ ಚಿತ್ರಕಲಾಪ್ರದರ್ಶನ, 70ಕ್ಕೂ ಹೆಚ್ಚು ಸಮೂಹ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪಿಸುವ ಉದ್ದೇಶದಿಂದ ತಮ್ಮದೇ 'ಸಾಂಝಿ ಕಲಾಲೋಕ' ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ 10 ವರ್ಷಗಳಿಂದ ಚಿತ್ರಕಲಾ ಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಿದ್ದಾರೆ. ಅವರ ಸಂಪರ್ಕ: 9845153277.
ಕಾಗದ ಉಬ್ಬುಚಿತ್ರ ಮಾಡೋದು ಹೇಗೆ?
ಕಾಗದ ಉಬ್ಬುಚಿತ್ರ ಕಲೆಯಲ್ಲಿ ಅಧಿಕ ತಾಳ್ಮೆ, ಅಧಿಕ ಸಮಯ ಬೇಕು. ಕೃತಿಗೊಂದು ಆಕಾರ ಕೊಡುವ ಮೊದಲು ಕಲಾವಿದ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಜೇಡಿ ಮಣ್ಣಿನಿಂದ ಮತ್ತು ತಮಗೆ ಬೇಕಾಗುವ ವಸ್ತುಗಳನ್ನು ಸಂಯೋಜಿಸಿ ಆಕಾರ ನೀಡುತ್ತ ಹೋಗಬೇಕು. ಸಮಾಧಾನಕರ ಆಕಾರ ಬಂದ ನಂತರ ಕಾಗದದ ಚೂರುಗಳನ್ನು ಅಂಟಿನಿಂದ ಮಣ್ಣಿನ ಆಕೃತಿಯ ಮೇಲೆ ಹಲವು ಪದರಗಳಲ್ಲಿ ಅಂಟಿಸಬೇಕು. ನಿಖರತೆಯನ್ನು ತಲುಪಿದ ನಂತರ ಕಾಗದದ ಪ್ರತಿಕೃತಿಯನ್ನು ತೇವಾಂಶವಿದ್ದಂತೆಯೇ ಮಣ್ಣಿನ ಅಚ್ಚಿನಿಂದ ಬೇರ್ಪಡಿಸಿ ಅನಂತರ ಕಾಗದದ ಆಕೃತಿಯನ್ನು ಬಿಸಿಲಿನಲ್ಲಿ ಒಣಗಿಸಬೇಕು.
ಬಳಿಕ ಕಲಾವಿದನ ಭಾವನೆಗಳಿಗೆ ತಕ್ಕಂತೆ ಅವುಗಳಿಗೆ ಬಣ್ಣ ಹಚ್ಚಬಹುದು. ಈ ವಿಧಾನ ಸರಳ ಎನಿಸಿದರೂ ಏಕಾಗ್ರತೆ, ಸೂಕ್ಷ್ಮತೆ, ಸಂಯಮ ಬೇಕಾಗುತ್ತದೆ. ಇವು ಮೊದಲ ನೋಟಕ್ಕೆ ಘನರೂಪದ ಮರಳು, ಕಲ್ಲು ವಿವಿಧ ಲೋಹ ಮಾಧ್ಯಮಗಳ ಶಿಲ್ಪ ಎಂಬ ಭಾವನೆ ಬರುತ್ತದೆ.
- ಆಘ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


