ಬುಕ್ ಭಟ್ರು

ಮಾಸಲು ಬಣ್ಣದ ಅಂಗಿ-ಪ್ಯಾಂಟು. ಕೈಯಲ್ಲಿ ಬಿಳಿ ಚೀಲ. ಇದು ಭಟ್ಟರ ಟ್ರೇಡ್ ಮಾರ್ಕ್. ಸೈಕಲ್ ಏರಿದರೆ ಸವಾರಿ 40 ಕಿ.ಮೀವರೆಗೂ ಸಾಗುತ್ತದೆ. ಇವರು ಆರ್.ಜಿ.ಭಟ್ರು ಅಂತಾ. ಯಲ್ಲಾಪುರ ತಾಲ್ಲೂಕಿನ ಬೆಳಸೂರು ಸುತ್ತಮುತ್ತಲಿನ ಜನ ರಾಮಚಂದ್ರ ಭಟ್ಟ ಬೆಳಸೂರು ಅಂತಾ ಕರೆಯುತ್ತಾರೆ. ಎಲ್ಲರೂ ಇವರನ್ನು ತಮ್ಮ ಮನೆಯವರೆಂದೇ ತಿಳಿದಿದ್ದಾರೆ. ಈ ನಂಟಿಗೆ ಕಾರಣ ಪುಸ್ತಕಗಳು ಎಂದರೆ ನೀವು ನಂಬಲೇಬೇಕು. ಭಟ್ಟರು ಬಂದರೆಂದರೆ ಮುಗಿಯಿತು ಎಲ್ಲ ಮನೆಗಳಲ್ಲಿ ಭಟ್ಟರಿಗೆ ಆದರದ ಸ್ವಾಗತ. ಅವರ ಚೀಲದಲ್ಲಿ ಪುಸ್ತಕಗಳ ರಾಶಿ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಮುತ್ತುತ್ತಾರೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ವ್ಯಾಸಭಾರತ, ಪಂಚತಂತ್ರ, ಚಂದಮಾಮ...ಅವರಲ್ಲಿನ ಪುಸ್ತಕಗಳ ವೈವಿಧ್ಯ ದೊಡ್ಡದು. ಗ್ರಾಮೀಣರಿಗೆ ಬೇಕಾದ ಗ್ರಾಮ- ತಾಲ್ಲೂಕು ನಕಾಶೆ, ಅರ್ಜಿಗಳು, ಕೃಷಿ ಮಾಹಿತಿಗಳೂ ಭಟ್ಟರ ಸೈಕಲ್‌ನಲ್ಲಿ ಲಭ್ಯ. ಯಾರು ಯಾವ ಪುಸ್ತಕ ಪಡೆದಿದ್ದಾರೆ ಎಂಬುದಕ್ಕೆ ಭಟ್ಟರು ಲಿಖಿತ ದಾಖಲೆ ಇಡುವುದಿಲ್ಲ, ಆದರೆ ಅದು ಅವರ ಮಸ್ತಕದಲ್ಲಿ ದಾಖಲಾಗಿರುತ್ತದೆ. ಓದಿದ ಬಳಿಕ ಮರಳಿಸಬೇಕು.
ಯಲ್ಲಾಪುರದಿಂದ 7 ಕಿ.ಮೀ ದೂರದಲ್ಲಿರುವ ಬೆಳಸೂರು ಭಟ್ಟರ ಸೇವಾ ಕೇಂದ್ರ. ತಮ್ಮ ಮನೆ ಪಕ್ಕದಲ್ಲಿ ಶ್ರೀ ದುರ್ಗಾಂಬಿಕ ಗ್ರಂಥಾಲಯ ಬೆಂಬಲಿಗರ ಬಳಗ ಎನ್ನುವ ಪುಸ್ತಕ ಕೇಂದ್ರ ತೆರೆದಿದ್ದಾರೆ. ಪುಸ್ತಕ ಸಂಸ್ಕೃತಿ ಬೆಳೆಸುವುದು ಉದ್ದೇಶ. ಅದಕ್ಕಾಗಿ ಭಟ್ಟರು ಮನೆಮನೆ ತಿರುಗಿ ಟ್ರಂಕ್‌ಗಳಲ್ಲಿಯೋ, ಪೆಟಾರಿಯಲ್ಲಿಯೋ ದೂಳು ಹಿಡಿದಿದ್ದ ಪುಸ್ತಕಗಳನ್ನು ಕಾಡಿ ಬೇಡಿ ಸಂಗ್ರಹಿಸಿದ್ದಾರೆ. ಇಲ್ಲಿಗೆ ಬಂದವರು ಆರಾಮವಾಗಿ ಕುಳಿತು ಓದಬಹುದು. ಭಟ್ಟರ ಚಟುವಟಿಕೆಗಳು ಇಷ್ಟಕ್ಕೇ ಮುಗಿಯುವುದಿಲ್ಲ. ಮಹಿಳೆಯರಿಗೆ ಹೊಲಿಗೆ, ನಿರುದ್ಯೋಗಿ ಯುವಕರಿಗೆ ಜೇನು ಸಾಕಣಿಕೆ, ಕಲಾವಿದರಿಗೆ ಭಾಗವತಿಕೆ, ಮದ್ದಳೆ, ಚಂಡೆ, ಅಭಿನಯ, ಮಾತಿಗಾರಿಕೆ ತರಬೇತಿ ನೀಡುತ್ತಾರೆ. ಏಕಾದಶಿಯಂದು ಆಧ್ಯಾತ್ಮಿಕ ಶಿಬಿರ. ಈ ಕಾರಣಗಳಿಂದಾಗಿ ಗ್ರಂಥಾಲಯಕ್ಕೆ ಬಂದವರ ದೃಷ್ಟಿ ಪುಸ್ತಕಗಳತ್ತಲೂ ಹೊರಳಲಿ ಎನ್ನುವುದು ಭಟ್ಟರ ಆಸೆ.
ಇವರು ಯಕ್ಷಗಾನ ಕಲಾವಿದರೂ ಆಗಿರುವ ಕಾರಣ ಸಾಮಾಜಿಕ ಕಳಕಳಿ ಬಿಂಬಿಸುವ ಪ್ರಸಂಗಗಳನ್ನೂ ಪ್ರಸ್ತುತಪಡಿಸಿದ್ದಾರೆ. ಇವರು ರಚಿಸಿದ ತಾಳಮದ್ದಳೆ ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ. ತಮ್ಮ ಸಮಾಜಮುಖಿ ಚಟುವಟಿಕೆಗಳಿಗಾಗಿ ಅನೇಕ ಪ್ರಶಸ್ತಿಗಳು ಇವರಿಗೆ ಬಂದಿವೆ. ಕೆಲವರು ಇವರ ಕಾರ್ಯವನ್ನು ಮೆಚ್ಚಿ ಪುಸ್ತಕಗಳನ್ನು ದೇಣಿಗೆ ಕೊಟ್ಟಿದ್ದಾರೆ.
ಮನಸ್ಸಿದ್ದರೆ ಜಾಗತೀಕರಣ ಯುಗದಲ್ಲೂ ಪುಸ್ತಕ ಕೇಂದ್ರಿತ ಮಾಹಿತಿ ಕೇಂದ್ರಗಳನ್ನು ಯಶಸ್ವಿಯಾಗಿ ನಡೆಸಬಹುದು ಎನ್ನುವುದಕ್ಕೆ ರಾಮಚಂದ್ರ ಭಟ್ಟರೇ ಸಾಕ್ಷಿ.ಟಿ
ಚಿತ್ರ- ಲೇಖನ: ಟಿ.ಶಿವಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


