'ಇಂದು ನಿವೃತ್ತರಾಗಲಿರುವ...'

ಇನ್ನು ವರ್ಷಗಳೆಷ್ಟು ಬಾಕಿ, ತಿಂಗಳು ಇಷ್ಟಾದರೆ ಆಯಿತು... ಇನ್ನು ಹದಿನೆಂಟೇ ದಿನ ಉಳಿದಿರುವುದು ಎಂದೆಲ್ಲ ಲೆಕ್ಕಹಾಕುತ್ತಿದ್ದೆನಲ್ಲ! ಬಂತು ವಿದಾಯದ ದಿನ. ಸಾಹೇಬರು, ಸಹೋದ್ಯೋಗಿಗಳು, ಸಿಬ್ಬಂದಿ 'ಸಾರ್, ನಿಮಗೊಂದು ಬೀಳ್ಕೊಡುಗೆ ಸಮಾರಂಭ ಇಟ್ಟುಕೊಂಡಿದ್ದೇವೆ. ದಯಮಾಡಿ ನಮ್ಮ ಆತಿಥ್ಯ, ಅಭಿಮಾನ ಸ್ವೀಕರಿಸಿ' ಅಂತ ಹಿಂದಿನ ದಿನವೇ ಆಹ್ವಾನಿಸಿರುತ್ತಾರೆ. ಹೌದು, ತಾನು ಮತ್ತು ತಾನು ಕೆಲಸ ನಿರ್ವಹಿಸುತ್ತಿದ್ದ ಈ ಕಚೇರಿಯ ಸಂಬಂಧ ಇನ್ನು ಮುಂದೆ ಭಿನ್ನವೇ ಆಗಿರುತ್ತದೆ. ನಾಳೆ ಎನ್ನುವುದು ಅದಕ್ಕೆ ಗಡಿರೇಖೆ ಎಳೆಯುವುದು. ತಾನು ಮತ್ತು ಕಛೇರಿ ಪರಸ್ಪರ 'ಮಿಸ್' ಮಾಡಿಕೊಳ್ಳುವುದು. ತನಗೆ ಆದ ಅನುಭವಗಳು ನೆನಪಿನ ಆಕರಗಳಾಗುವುದು. ಪ್ರಶಂಸೆ, ಅವಮಾನ ಎನ್ನುವ ಭೇದವಿಲ್ಲದೆ ಎಲ್ಲ ಘಟನೆಗಳೂ ಇನ್ನುಮುಂದೆ ಖುಷಿಯನ್ನೇ ನೀಡುವ ಫಲಕಗಳಾಗುತ್ತವೆ.
ಇಂದು ನಿವೃತ್ತಿ. ಇವೊತ್ತೇ ತನ್ನ ಸೇವೆಯ ಕೊನೆಯ ದಿನ. ಹಾಗೆ ಹೇಳಿ ಮನೆಯಿಂದ ಹೊರಡುವಾಗ ಪತ್ನಿ, ಮಕ್ಕಳಲ್ಲಿ ಏನೋ ತಲ್ಲಣ. 'ನಮಗಾಗಿ ಇಷ್ಟು ದಿನ ದಣಿವೆನ್ನದೆ ದುಡಿದಿರಲ್ಲ' ಎಂಬ ಕೃತಜ್ಞತೆ ಅವರ ಕಣ್ಣುಗಳಲ್ಲಿ. 'ಇಂದು ಬುತ್ತಿ ಬೇಡ, ಅಲ್ಲೇ ಊಟ ಅಲ್ವೇನಪ್ಪ' ಎಂದಿದ್ದವು ಮಕ್ಕಳು. ಪತ್ನಿಯ ಮುಖದಲ್ಲಿ ಇನ್ನಾದರೂ ಮಗಳ ಮದುವೆ, ಮಗನಿಗೆ ಉನ್ನತ ಶಿಕ್ಷಣದತ್ತ ಗಮನ ನೀಡೋಣ ಎಂಬ ಕಾಳಜಿ. ಇತ್ತ ಕಚೇರಿಯಲ್ಲಿ 'ಪತಿಯ ಮನೆಗೆ ಹೆಣ್ಣೊಪ್ಪಿಸಿಕೊಡುವಂತಹ ವಾತಾವರಣ.' ಲಂಚ್ ಅವರ್‌ನಲ್ಲಿ ಸಮಾರಂಭ. ಹೆಡ್ ಆಫೀಸಿನಿಂದ ದೊಡ್ಡ ಸಾಹೇಬರು ಬರಲಿದ್ದಾರೆ. ಸಂದರ್ಭವೇ ಅಂಥದ್ದು. ಆ ಏರ್ಪಾಟಿಗೆ ಸ್ವಯಂ ನಾನು ತಾನೆಂದು ಎಲ್ಲರೂ ಮುಂದೆ ಬರುತ್ತಾರೆ. ಮೇಜು, ಕುರ್ಚಿ, ವೇದಿಕೆ... ಎಲ್ಲವೂ ಸಜ್ಜು.
ನಿರೂಪಕರು 'ಇಂದು ನಿವೃತ್ತರಾಗಲಿರುವ...' ಎನ್ನುತ್ತಿದ್ದಂತೆ ತನಗೆ ಮನಸ್ಸು ಭಾರವಾಗಿರುತ್ತದೆ. ಶಿಷ್ಟಾಚಾರಕ್ಕೆ ಸ್ವಾಗತ, ಪರಿಚಯ. ಇಲ್ಲಿ ತಾನೇ ಕೇಂದ್ರಬಿಂದು. ಒಬ್ಬೊಬ್ಬರು ಒಡನಾಟದ ಸಂಗತಿಗಳನ್ನು ತೆರೆದಿಡುವಾಗ ಭಾವುಕರಾಗದಿರಲು ಸಾಧ್ಯವೆ? ಪುರುಷನೊ ಮಹಿಳೆಯೊ ಹೆಂಗರುಳು ಇದ್ದೇ ಇದೆ. ಮದುವೆ ಮನೆಯಲ್ಲೋ, ರೈಲು ಬಸ್ಸಿನಲ್ಲೋ ಪರಿಚಿತರಾದ ಸಹಪ್ರಯಾಣಿಕರನ್ನು 'ಸಿಗೋಣ, ಮತ್ತೆ ಕಾಣೋಣ' ಅನ್ನುತ್ತ ಕೈಕುಲುಕುವಾಗಲೇ ಅಗಲಿಕೆ ವೇದನೆ ಕಾಡುತ್ತದೆ ಎಂದ ಮೇಲೆ ಹತ್ತಾರು ವರ್ಷಗಳವರೆಗೆ ಸಹಪಾಠಿಗಳಾಗಿದ್ದವರನ್ನು ತೊರೆಯುವುದೆಂದರೆ ಅದೆಷ್ಟು ಕ್ಲಿಷ್ಟ.
ತನ್ನ ಕುರಿತು ಇವರೆಲ್ಲ ಎಷ್ಟೊಂದು ಹೊಗಳುತ್ತಿದ್ದಾರೆ. ಹೇಗೂ ಇದು ವಿದಾಯದ ಗಳಿಗೆಗಳು. ಒಳ್ಳೆಯ ಮಾತುಗಳನ್ನೇ ಹೇಳಿ ಕಳುಹಿಸಿಕೊಡೋಣ ಎಂಬ ಇರಾದೆ ನಿಜ. ಆದರೆ ಇದನ್ನೂ ಮೀರಿ ಇವರ ನುಡಿಗಳಲ್ಲಿ ಅಸ್ಮಿತೆಯಿದೆ. ಸದಾಶಯವಿದೆ. ಎಲ್ಲವನ್ನೂ ಯಾಂತ್ರಿಕವಾಗಿ ಔಪಚಾರಿಕವಾಗಿ ಪರಿಭಾವಿಸಬಾರದು. ಹಾರ, ಉಡುಗೊರೆ, ನೆನಪಿನ ಕಾಣಿಕೆಯಿತ್ತು ಶಾಲು ಹೊದಿಸಿದಾಗ ಮನಸ್ಸಿನೊಂದಿಗೆ ಕೊರಳೂ ಭಾರವಾಗಿರುತ್ತದೆ. ಕಚೇರಿಯ ಬಂಧುಗಳ ಪ್ರೀತಿ, ವಿಶ್ವಾಸದ ಹೊರೆಯದು. ಇಡೀ ದಿನವೇ ತೀರಾ ಭಿನ್ನವಾಗಿ ಅನನ್ಯವಾಗಿ ತೋರುತ್ತದೆ. ಈ ಮಮತೆಯನ್ನು ಇವರಿಗೆ ಹಿಂದಿರುಗಿಸುವುದಾದರೂ ಹೇಗೆ? ಯಾವುದೋ ಗಳಿಗೆಯಲ್ಲಿ ಏನೋ ಕಾರಣಕ್ಕೆ ಕಲಹಕ್ಕಿಳಿದಿದ್ದ ಮೂರು ಸಹೋದ್ಯೋಗಿಗಳ ಕಣ್ಣುಗಳೂ ತೇವವಾಗಿರುವುದನ್ನು ಗಮನಿಸಿದಾಗ ದ್ವೇಷ, ಸೇಡೆನ್ನುವುದೇ ಬರಿಯ ಸುಳ್ಳೆನಿಸುತ್ತದೆ.
ಸ್ವತಃ ದೊಡ್ಡ ಸಾಹೇಬರು ಪ್ರಬಂಧ ಬರಹಗಾರರು. ಕವಿತ್ವವೂ ಅವರಲ್ಲುಂಟು. ತಮ್ಮ ಕಿರುಭಾಷಣದಲ್ಲಿ ಅವರು ಆ ತನಕ ಸಭಾಂಗಣದಲ್ಲಿ ಕವಿದ ಗಾಢ ನೋವನ್ನು ತುಸು ತಣಿಸುತ್ತಾರೆ. 'ಇವರನ್ನು ನಾವೆಲ್ಲ ಬೀಳ್ಕೊಡುತ್ತಿರುವುದು ಸತಿ ಮನೆಗೆ! ಆಕೆ ಹೇಳಿದಂತೆ ಶಿಸ್ತಾಗಿ ಇವರು ನಡೆದುಕೊಳ್ಳಲಿ. ಮೊದಲು ಸಂಬಳ ಕೈಗೆ ಕೊಡುತ್ತಿದ್ದರೆಂದು ಭಾವಿಸುವೆ. ಇನ್ನು ಮುಂದೆ ಅದೇ ರೀತಿ ಪಿಂಚಣಿ ಅವರ ಧರ್ಮಪತ್ನಿ ಕೈಲಿರಲಿ...' ಈಗ ಬೀಳ್ಕೊಡುಗೆಗೆ ಮಾನ್ಯರಿಂದ ಉತ್ತರ ಅಂತ ನಿರೂಪಕ ಹೇಳುವಾಗ ತನ್ನ ತಳಮಳಗಳು ಕಣ್ಣು ಮಂಜಾಗಿಸಲು ಇದೋ ನಾವು ಸಿದ್ಧ ಎಂದು ಸಾರಿರುತ್ತವೆ. ಮಾತಾಡುವುದಾದರೂ ಏನನ್ನು? ಅಷ್ಟಕ್ಕೂ ಅದಕ್ಕೆ ಸಮಯವೇ ಇದು. 'ಸರ್ವರಿಗೂ ವಂದನೆ... ತಪ್ಪು ಮಾಡಿದ್ರೆ ಕ್ಷಮಿಸಿ ಎಂಬ ಎರಡೇ ನುಡಿ ಸಾಕಲ್ಲ' ಅನ್ನಿಸಿದರೂ 'ಇಲ್ಲ... ಇಲ್ಲ ಏನಾದರೂ ನಿವೇದಿಸಿಕೊಳ್ಳೋಣ. ನಾಳೆ ಅದೇ ಕೊರಗಾದೀತು' ಎಂಬ ಚಡಪಡಿಕೆ. ಕಡೆಗೂ ತನ್ನ ಮಾತೊ, ಭಾಷಣವೊ ಇಲ್ಲವೇ ಪ್ರತಿಕ್ರಿಯೆ ಅನ್ನಿ ಮುಗಿದಿರುತ್ತದೆ. ಫೋಟೊ, ಊಟ. 'ನಡೆಯಿರಿ ನಿಮ್ಮನ್ನು ನಿಮ್ಮ ಮನೆಗೆ ಬಿಟ್ಟು ಆಮೇಲೆ ನಾನು ಹೆಡ್‌ಆಫೀಸಿಗೆ ಹೋಗುವೆ' ಎಂದರು ದೊಡ್ಡ ಸಾಹೇಬರು. ಸಾಹೇಬರಾದಿಯಾಗಿ ಎಲ್ಲರತ್ತಲೂ ತಾನು ಕೈಬೀಸಿದ್ದಾಗಿದೆ. ನಾಳೆಯಿಂದ ನಿಮ್ಮ ಪಾಲಿಗೆ ಮೆಲುಕುಗಳೇ ಅಂತ ಬಣ್ಣಿಸುವ ಕವನವೊಂದನ್ನು ದೊಡ್ಡ ಸಾಹೇಬರು ಉಲಿಯುತ್ತಾರೆ. ಡ್ರೈವರ್ ಸಿಗ್ನಲ್ ಬಳಿ ನನ್ನತ್ತ ನೋಡಿ, 'ಪಾಪ ಇವರೆಲ್ಲ ನಿಮ್ಮನ್ನು ಯಾವತ್ತೂ ಗೆಸ್ಟ್ ತರಹ ಕಂಡಿರಲಿಲ್ಲ. ಅದಕ್ಕೇ ಇಷ್ಟು ಬೇಜಾರು' ಎಂದಿದ್ದ!
-ಬಿಂಡಿಗನವಿಲೆ ಭಗವಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


