ಸಾಧನೆ

ನುಡಿ ಮಾಣಿಕ್ಯ

ಮೈಸೂರಿನ ಡಾ. ಮಾಣಿಕ್ ಬೆಂಗೇರಿ ಅವರ ಮನೆಗೆ ಹೋದರೆ ಅರೆಕ್ಷಣ...

ನುಡಿ ಮಾಣಿಕ್ಯ
Published On :

ಮೈಸೂರಿನ ಡಾ. ಮಾಣಿಕ್ ಬೆಂಗೇರಿ ಅವರ ಮನೆಗೆ ಹೋದರೆ ಅರೆಕ್ಷಣ ಅಚ್ಚರಿಯಾಗುವುದು ನಿಶ್ಚಿತ. ಅಪ್ಪಟ ಭಾರತೀಯ ದಿರಿಸು ಧರಿಸಿದ ವಿದೇಶಿಯರು ರಂಗೋಲಿ ಹಾಕುತ್ತಿರುತ್ತಾರೆ; ದೇವರ ಪೂಜೆ ಮಾಡುತ್ತಿರುತ್ತಾರೆ;  ಶಾಸ್ತ್ರೀಯವಾಗಿ ಹಾಡುವುದನ್ನು ಅಭ್ಯಾಸ ಮಾಡುತ್ತಿರುತ್ತಾರೆ; ಹಾರ್ಮೋನಿಯಂ ನುಡಿಸುತ್ತಿರುತ್ತಾರೆ. ಕೆಲವರು ಸ್ಪಷ್ಟವಾಗಿ ಕನ್ನಡವನ್ನೂ ಮಾತನಾಡುತ್ತಾರೆ. ಕರ್ನಾಟಕದ ತಿಂಡಿ-ತಿನಿಸು, ಆಹಾರಗಳ ಹೆಸರು, ಪಾಕವಿಧಾನಗಳನ್ನು ನಮಗೇ ವಿವರಿಸುತ್ತಾರೆ.
ಬೇರೆ ದೇಶಗಳಿಂದ ಆಗಮಿಸಿ ಇವರ ಬಳಿ ಸಂಗೀತ ಕಲಿಯುವ ಪುರುಷರು ಮೈಸೂರು ಪೇಟ, ರೇಷ್ಮೆ ಪಂಚೆ, ಜುಬ್ಬ, ಶಾಲು, ಮಹಿಳೆಯರಿಗೆ ರೇಷ್ಮೆ ಸೀರೆ, ಕುಪ್ಪಸ ಹಾಗೂ ಭಾರತೀಯ ಶೈಲಿಯ ಅಲಂಕಾರಿಕ ಒಡವೆಗಳನ್ನು ಧರಿಸುತ್ತಾರೆ. ಹಾಗೆಯೇ ಕರ್ನಾಟಕದ ವಿವಿಧ ಸಾತ್ವಿಕ ಆಹಾರಗಳನ್ನು ಪರಿಚಯಿಸುವುದೂ ಮಾಣಿಕ್ ಅವರಿಗೆ ಖುಷಿ. ಈ ರೀತಿಯಲ್ಲಿ ಕನ್ನಡ ನೆಲದ ಸಂಸ್ಕೃತಿಯನ್ನು ಗಡಿಯಾಚೆಗೂ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಅವರು.
ಪೋಲೆಂಡ್, ಸ್ಪೇನ್, ಇಸ್ರೇಲ್, ಇಂಗ್ಲೆಂಡ್, ಗ್ರೀಕ್, ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಜರ್ಮನ್ ದೇಶಗಳ ಪ್ರವಾಸಿಗರು ಅವರ ಮನೆಯಲ್ಲಿ ತಂಗಿದ್ದು, ಸಂಗೀತ ಹಾಗೂ ಸಾಂಸ್ಕೃತಿಕ ಆತಿಥ್ಯ ಸವಿದಿದ್ದಾರೆ.    
ಮೂಲತಃ ಮಹಾರಾಷ್ಟ್ರದ ಪುಣೆಯವರಾದ ಇವರು ಬೆಳೆದಿದ್ದು, ಓದಿದ್ದು ಬೆಳಗಾವಿಯಲ್ಲಿ. ತಂದೆ ಅನಂತರಾವ್ ಕುಲಕರ್ಣಿ, ತಾಯಿ ಶಾಲಿನಿ ವೈ. ಕುಲಕರ್ಣಿ ದಶಕಗಳ ಹಿಂದೆ ಬೆಳಗಾವಿಗೆ ಬಂದು ನೆಲೆಸಿದರು. ಕರ್ನಾಟಕ ವಿವಿಯಲ್ಲಿ ಬಿ.ಎ ಪದವಿ. ನಂತರ ಅಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು. ಹುಬ್ಬಳ್ಳಿಯ ಬೆಂಗೇರಿ ಅವರನ್ನು ವಿವಾಹವಾದ ಹಿನ್ನೆಲೆಯಲ್ಲಿ ಮಾಣಿಕ್ ಅವರ ಹೆಸರಿನೊಂದಿಗೆ ಬೆಂಗೇರಿ ಬೆಸೆದುಕೊಂಡಿದೆ. ನಂತರ ಮೈಸೂರಿಗೆ ವರ್ಗವಾದ ಕಾರಣ, 30 ವರ್ಷ ಹಿಂದೆ ಪತಿಯೊಂದಿಗೆ ಇಲ್ಲಿ ಬಂದು ನೆಲೆಸಿದರು. ಇವರ ಪುತ್ರ ಅತುಲ್ ಬೆಂಗಳೂರಿನ ಇಂಟೆಲ್ ಕಂಪನಿಯಲ್ಲಿ ಉದ್ಯೋಗಿ.      
ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲೂ ನಿಪುಣರು. ಮೀರಾ ಭಜನ್ ಕೂಡ ನಡೆಸಿಕೊಡುತ್ತಾರೆ. ಹಾರ್ಮೋನಿಯಂ ಹಾಗೂ ಕೀಬೋರ್ಡ್ ನುಡಿಸುವಲ್ಲಿಯೂ ಪರಿಣಿತರು. ದೆಹಲಿ, ಬೆಳಗಾವಿ, ಶಿರಸಿ, ನಂಜನಗೂಡು, ಮೈಸೂರು ದಸರಾ ಸೇರಿದಂತೆ ಅನೇಕ ಕಡೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತ, ಮರಾಠಿ ಹಾಗೂ ಅಸ್ಸಾಮಿ- ಈ ಪಂಚ ಭಾಷೆಗಳನ್ನು ಅಸ್ಖಲಿತವಾಗಿ ಆಡಬಲ್ಲರು. ಈ ಭಾಷೆಗಳ ಮೇಲೆ ಅಷ್ಟೇ ಹಿಡಿತ ಉಳ್ಳವರು. ಮೈಸೂರು ವಿವಿಯಿಂದ ಹಿಂದಿ ಸಾಹಿತ್ಯದಲ್ಲಿ ಪಿಎಚ್.ಡಿ ಪಡೆದಿದ್ದಾರೆ.  
ಚಾಮರಾಜನಗರದ ಸಪ್ತಮಾತೃಕೆ, ಬನವಾಸಿ ಮಧುಕೇಶ್ವರ, ಶಿರಸಿ ಮಾರಿಕಾಂಬೆ, ಶೃಂಗೇರಿ ಶಾರದಾದೇವಿ ಹಾಗೂ ಉಡುಪಿ ಶ್ರೀಕೃಷ್ಣ ಹಾಗೂ ಆನೆಗುಡ್ಡೆ ಗಣಪತಿ ಈ ಪ್ರಾಚೀನ ದೇವಸ್ಥಾನಗಳ ಬಗ್ಗೆ ಪುಸ್ತಕ ಬರೆದಿರುವ ಇವರು ಮೈಸೂರಿನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನಗಳ ಕುರಿತಾಗಿಯೂ ಕೃತಿ ರಚಿಸಿದ್ದಾರೆ.

ಮೈಸೂರು ದರ್ಶನದಲ್ಲಿ ದಾಖಲು
1977ರಲ್ಲಿ ಮೈಸೂರಿಗೆ ಉದ್ಯೋಗಕ್ಕಾಗಿ ಬಂದ ಬೆಂಗೇರಿ ಅವರು, ಭಾರತೀಯ ಸ್ಟೇಟ್ ಬ್ಯಾಂಕಿನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ನಿವೃತ್ತಿ ನಂತರವೂ ಸಂಗೀತ ಮತ್ತು ಸಾಹಿತ್ಯಿಕ ಒಲವನ್ನು ಇರಿಸಿಕೊಂಡಿರುವ ಇವರ ಕನ್ನಡ ಮತ್ತು ಸಂಸ್ಕೃತಿಯ ಸೇವೆಯು ಕರ್ನಾಟಕ ರಾಜ್ಯ ಮುಕ್ತ ವಿವಿಯು ಹೊರತಂದಿರುವ ಮೈಸೂರು ದರ್ಶನ 3ನೇ ಸಂಪುಟದಲ್ಲಿ ದಾಖಲಾಗಿರುವುದು ಇವರ ಸೇವೆಗೆ ಸಂದ ಗೌರವ.

- ಮಾ. ವೆಂಕಟೇಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.