ಅನುಪಮ ನೃತ್ಯ

ಭರತ ನೃತ್ಯವನ್ನು ಕಲಿಯಲು ಮುಂದಾಗುವವರ ಸಂಖ್ಯೆ ದೊಡ್ಡದಿದ್ದರೂ ಅದನ್ನು ಜೀವನದ ವ್ರತವನ್ನಾಗಿ ಬೆಳೆಸಿ ಸಾಧಿಸುವವರು ಕಡಿಮೆ. ಗೃಹಿಣಿಯಾಗಿ, ಒಬ್ಬ ಮಗನ ತಾಯಿಯಾದ ಮೇಲೂ ಈ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಪ್ರತಿಭಾನ್ವಿತೆ ಅನುಪಮಾ ರಾಘವೇಂದ್ರ.
ಬಂಟ್ವಾಳ ತಾಲೂಕಿನ ವಗೆನಾಡಿನ ಸತ್ಯಮೂರ್ತಿ- ಶಂಕರಿಯಮ್ಮ ದಂಪತಿ ಪುತ್ರಿ ಅನುಪಮಾ ಬಿಎಸ್ಸಿ ಪದವೀಧರೆ. ಬಾಲ್ಯದಲ್ಲಿ ನೃತ್ಯ ಪ್ರದರ್ಶನಗಳನ್ನು ನೋಡುವಲ್ಲಿ ಅವರಿಗಿದ್ದ ಆಸಕ್ತಿಯನ್ನು ಹೆತ್ತವರು ಪೋಷಿಸಿದರು. 10ನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆ. ಆರಂಭದ 2 ವರ್ಷ ಮಂಜೇಶ್ವರದ ರೂಪಾ ರಾವ್ ಅವರಿಂದ ಪಾಠ. ಬಳಿಕ ಪುತ್ತೂರಿನ ಶಾರದಾ ಕಲಾಶಾಲೆಯ ಸುಮಾ ಪ್ರಸಾದ್ ಹಾಗೂ ದರ್ಶನ್ ಎಂ.ಎಲ್. ಅವರಿಂದ ಕಲಾದೀಕ್ಷೆ. ಇಂದಿಗೂ ಇವರದೇ ಮಾರ್ಗದರ್ಶನ.
ವಿವಾಹವಾದದ್ದು ಕಾಸರಗೋಡಿನ ಉಡುಪುಮೂಲೆ ರಾಘವೇಂದ್ರ ಅವರನ್ನು. ಅವರಲ್ಲಿರುವ ನಾಟ್ಯಾಸಕ್ತಿಗೆ ಸಿಕ್ಕ ಪತಿಯ ಮನೆಯವರ ಪ್ರೋತ್ಸಾಹ ಅವರ ಕಲಿಕೆಗಾಗಲೀ, ನೃತ್ಯ ಸಾಧನೆಗಾಗಲೀ ಅಡ್ಡಿಯುಂಟಾಗಲಿಲ್ಲ. ನೃತ್ಯದಲ್ಲಿ ಅವರು ವಿದ್ವತ್ ಪರೀಕ್ಷೆ ಬರೆದದ್ದು ತಾಯಿಯಾದ ಮೇಲೆ. ಅನಂತರ ಈ ರಂಗದಲ್ಲಿ ಅವಕಾಶ ಪಡೆದು ಹೆಚ್ಚು ಸಾಧನೆಗೈಯಲು ಮಾವ ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ಪ್ರೋತ್ಸಾಹವೇ ಕಾರಣವೆಂದು ಸ್ಮರಿಸುತ್ತಾರೆ.
ಕೂಚುಪುಡಿ, ಮೋಹಿನಿಯಾಟ್ಟಂ, ತಿರುವಾದಿರ ಮೊದಲಾದ ಪ್ರಕಾರಗಳಲ್ಲೂ ಪರಿಣತಿ ಗಳಿಸಿದ್ದಾರೆ. ಜನಪದ ನೃತ್ಯದಲ್ಲೂ ಅದ್ವಿತೀಯ ಪ್ರತಿಭೆ. ಭರತನೃತ್ಯದಲ್ಲಿ ಭಾವಾಭಿನಯಕ್ಕೆ ಹೆಚ್ಚಿನ ಒತ್ತು ನೀಡಿ, ರೂಪಕಗಳಲ್ಲಿ ತನ್ನ ಹೆಜ್ಜೆಗಳಲ್ಲಿ ಹೊಸ ಪ್ರಯೋಗಗಳನ್ನೂ ಮಾಡಿದ್ದಾರೆ. ಕಣ್ಣುಗಳ ಚಲನೆಯಲ್ಲಿ ಹೊಸ ಕಾವ್ಯವನ್ನು ಕಟ್ಟುತ್ತ, ಅಂಗಮುದ್ರೆಗಳಲ್ಲಿ ಸನ್ನಿವೇಶಕ್ಕೆ ಒತ್ತು ನೀಡುತ್ತ, ಮಿಂಚಿನ ಗತಿಯಿಂದ ಚಲಿಸುವ ಅವರ ಪದಗತಿಯ ವೇಗ ವಿಮರ್ಶಕರ ಮನ ಗೆದ್ದಿದೆ.
- ಪ. ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


