ವಿದೇಶ

ಬ್ರಿಟನ್ ತೊರೆಯದಂತೆ ಕಾನೂನುಬದ್ಧ ನಿರ್ಬಂಧ: ಭಾರತ ಸರ್ಕಾರದಿಂದ ನನಗೆ ಅನ್ಯಾಯವಾಗಿದೆ- ವಿಜಯ್ ಮಲ್ಯ

ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಮಲ್ಯ, 1992ರಿಂದ ತಾನು ಬ್ರಿಟನ್‌ನ ಶಾಶ್ವತ ನಿವಾಸಿಯಾಗಿದ್ದೇನೆ, ಭಾರತ ಸರ್ಕಾರ ತನ್ನೊಂದಿಗೆ ‘ಅತ್ಯಂತ ಅನ್ಯಾಯ’ವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಬ್ರಿಟನ್ ತೊರೆಯದಂತೆ ಕಾನೂನುಬದ್ಧ ನಿರ್ಬಂಧ: ಭಾರತ ಸರ್ಕಾರದಿಂದ ನನಗೆ ಅನ್ಯಾಯವಾಗಿದೆ- ವಿಜಯ್ ಮಲ್ಯ
ವಿಜಯ್ ಮಲ್ಯ
Published On :

ಲಂಡನ್: ಭಾರತಕ್ಕೆ ಮರಳಲು ತಾನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಿದ್ದೇನೆ ಎಂಬ ಆರೋಪವನ್ನು ಉದ್ಯಮಿ ವಿಜಯ್ ಮಲ್ಯ ತಳ್ಳಿಹಾಕಿದ್ದಾರೆ. ತಾನು ಬ್ರಿಟನ್ ತೊರೆಯದಂತೆ ಕಾನೂನುಬದ್ಧ ನಿರ್ಬಂಧವಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಮಲ್ಯ, 1992ರಿಂದ ತಾನು ಬ್ರಿಟನ್‌ನ ಶಾಶ್ವತ ನಿವಾಸಿಯಾಗಿದ್ದೇನೆ, ಭಾರತ ಸರ್ಕಾರ ತನ್ನೊಂದಿಗೆ ‘ಅತ್ಯಂತ ಅನ್ಯಾಯ’ವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

2018ರ ಪರಾರಿ ಆರ್ಥಿಕ ಅಪರಾಧಿಗಳ ಕಾಯ್ದೆ (Fugitive Economic Offenders Act) ಅಡಿ ಪರಾರಿ ಆರ್ಥಿಕ ಅಪರಾಧಿಗಳು (FEOs) ಎಂದು ಘೋಷಿಸಲಾದ 15 ಮಂದಿಯಲ್ಲಿ ವಿಜಯ್ ಮಲ್ಯ ಕೂಡ ಒಬ್ಬರು. 2025ರ ಅಕ್ಟೋಬರ್‌ನಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಮಾಹಿತಿ ನೀಡಿದ್ದು, ಈ ಪಟ್ಟಿಯಲ್ಲಿ ಮಲ್ಯ ಮತ್ತು ನೀರವ್ ಮೋದಿ ಸೇರಿದಂತೆ ಹಲವು ಪ್ರಮುಖ ಹೆಸರುಗಳಿವೆ ಎಂದು ತಿಳಿಸಿದ್ದರು.

‘ಬ್ರಿಟನ್ ತೊರೆಯದಂತೆ ಕಾನೂನುಬದ್ಧ ನಿರ್ಬಂಧವಿದೆ’: ವಿಜಯ್ ಮಲ್ಯ

ನಾನು ಭಾರತಕ್ಕೆ ಬರಲು ನಿರಾಕರಿಸುತ್ತಿರುವ ಪರಾರಿ ಎಂದು ಹೇಳುವ ಎಲ್ಲರೂ ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ನಾನು 1992ರಿಂದಲೂ ಯುನೈಟೆಡ್ ಕಿಂಗ್‌ಡಮ್‌ನ ಶಾಶ್ವತ ನಿವಾಸಿಯಾಗಿದ್ದೇನೆ, ಪ್ರಸ್ತುತ ಈ ದೇಶವನ್ನು ತೊರೆಯದಂತೆ ಕಾನೂನುಬದ್ಧವಾಗಿ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ತಮ್ಮ ಕಾನೂನು ತೊಂದರೆಗಳು ಭಾರತ ಸರ್ಕಾರದ ‘ಪೋಸ್ಟರ್ ಬಾಯ್ ಕ್ರಮಗಳು’ ಎಂದು ಬಣ್ಣಿಸಿರುವ ಬೆಳವಣಿಗೆಗಳಿಂದ ಆರಂಭವಾದವು ಎಂದು ಆರೋಪಿಸಿರುವ ಮಲ್ಯ, ಸರ್ಕಾರ ತಮ್ಮ ವಿಚಾರದಲ್ಲಿ ಅನ್ಯಾಯವಾಗಿ ನಡೆದುಕೊಂಡಿದೆ ಎಂದು ಹೇಳಿದ್ದಾರೆ.

ಇದೆಲ್ಲವೂ ಭಾರತ ಸರ್ಕಾರದ ‘ಪೋಸ್ಟರ್ ಬಾಯ್’ ಕ್ರಮಗಳಿಂದ ಆರಂಭವಾಯಿತು. ನನ್ನ ವಿಚಾರದಲ್ಲಿ ಸರ್ಕಾರ ಅತ್ಯಂತ ಅನ್ಯಾಯವಾಗಿ ನಡೆದುಕೊಂಡಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯ (ED) ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದೆ ಎನ್ನಲಾದ ಅಫಿಡವಿಟ್‌ನ ಭಾಗವೊಂದನ್ನು ಉಲ್ಲೇಖಿಸಿದ್ದ ಮಲ್ಯ, ಅದರಲ್ಲಿ ತಮ್ಮಿಂದ 14,131.60 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಹೇಳಲಾಗಿತ್ತು ಎಂದು ತಿಳಿಸಿದ್ದರು.

ಬಾಂಬೆ ಹೈಕೋರ್ಟ್‌ಗೆ ED ಸಲ್ಲಿಸಿದ ಅಫಿಡವಿಟ್. ಪ್ಯಾರಾ 7ರಲ್ಲಿ ಡಿಕ್ರೀ ಮಾಡಲಾದ ಸಾಲದ ವಿವರಗಳಿವೆ ಮತ್ತು ಪ್ಯಾರಾ 17ರಲ್ಲಿ 2021ರಲ್ಲಿ 14,131.60 ಕೋಟಿ ರೂಪಾಯಿ ವಸೂಲಿ ಮಾಡಿರುವುದನ್ನು ತೋರಿಸಲಾಗಿದೆ, ಐದು ವರ್ಷಗಳಾದರೂ ಬ್ಯಾಂಕ್‌ಗಳಿಗೆ ವಂಚನೆ ಮಾಡಿದ ವಂಚಕ ಎಂದು ನನ್ನನ್ನು ಇನ್ನೂ ಕರೆಯಲಾಗುತ್ತಿದೆ ಎಂದು ಅವರು ಹೇಳಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ಬಾಂಬೆ ಹೈಕೋರ್ಟ್ ವಿಜಯ್ ಮಲ್ಯರನ್ನು ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಲಯದ ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿರುವಾಗ ನ್ಯಾಯಸಮ್ಮತ ಪರಿಹಾರವನ್ನು ಕೋರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಭಾರತಕ್ಕೆ ಮರಳುವ ಉದ್ದೇಶವಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಮಲ್ಯಗೆ ನ್ಯಾಯಾಲಯ ಅಂತಿಮ ಅವಕಾಶ ನೀಡಿತ್ತು.

ಮಲ್ಯ ಸಲ್ಲಿಸಿರುವ ಅರ್ಜಿಯಲ್ಲಿ ಪರಾರಿ ಆರ್ಥಿಕ ಅಪರಾಧಿಗಳ ಕಾಯ್ದೆಯ ಕೆಲವು ನಿಬಂಧನೆಗಳನ್ನು ಹಾಗೂ ತಮ್ಮನ್ನು ಪರಾರಿ ಆರ್ಥಿಕ ಅಪರಾಧಿ ಎಂದು ಘೋಷಿಸಿರುವುದನ್ನು ಪ್ರಶ್ನಿಸಲಾಗಿದೆ.

ತಮ್ಮ ಖಾತೆಯಿಂದ ವಸೂಲಿ ಮಾಡಲಾದ ಮೊತ್ತದ ವಿವರಗಳೆಂದು ಹೇಳಲಾದ ಪಟ್ಟಿಯೊಂದನ್ನೂ ಮಲ್ಯ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮನ್ನು ತಪ್ಪಾಗಿ ಪರಾರಿ ವ್ಯಕ್ತಿ ಎಂದು ಗುರುತಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನ್ಯಾಯಯುತ ಮತ್ತು ಸರಿಯಾದ ಲೆಕ್ಕಪತ್ರದ ನ್ಯಾಯದಲ್ಲಿ ನಂಬಿಕೆ ಇರುವ ಎಲ್ಲರೂ ದಯವಿಟ್ಟು ಕೆಳಗಿನ ಪಟ್ಟಿಯನ್ನು ನೋಡಿ. ಮಾಧ್ಯಮಗಳು ನನ್ನನ್ನು ಟೀಕಿಸುವ ರೀತಿಗೆ ಮತ್ತು ಪತ್ರಕರ್ತರ ವರದಿಯ ಆರಂಭದಲ್ಲೇ ನನ್ನನ್ನು ವಂಚಕ ಎಂದು ಕರೆಯುವುದು ಸರಿಯೇ, ನನಗೆ ಹಣವನ್ನು ಯಾವಾಗ ಮರುಪಾವತಿಸಲಾಗುತ್ತದೆ ಎಂದು ಪ್ರಶ್ನಿಸುವುದನ್ನು ಏಕೆ ಆರಂಭಿಸಬಾರದು ಎಂದು ಕೇಳಿದ್ದಾರೆ.

ನನ್ನನ್ನು ವಿರೋಧಿಸುವ ಎಲ್ಲರೂ ದಯವಿಟ್ಟು ಸ್ವತಂತ್ರವಾಗಿ ಪರಿಶೀಲಿಸಿ. ನನ್ನ ಜಪ್ತಿ ಮಾಡಲಾದ ಹಣದಿಂದ ಕಿಂಗ್‌ಫಿಷರ್ ಉದ್ಯೋಗಿಗಳಿಗೆ ವೇತನ ಪಾವತಿಸಲು ED 350 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿರುವುದನ್ನು ನೋಡಬಹುದು. ನನ್ನ ಆಸ್ತಿಗಳು/ಹಣವನ್ನು ED ಜಪ್ತಿ ಮಾಡಿದ್ದರಿಂದ ನನಗೆ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಪರಾರಿಯಾಗಿರುವವರನ್ನು ಭಾರತಕ್ಕೆ ಕರೆತರಲು ಸರ್ಕಾರ ಸಂಪೂರ್ಣ ಬದ್ಧ

ಕಳೆದ ಡಿಸೆಂಬರ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಭಾರತದಲ್ಲಿ ಕಾನೂನುಬದ್ಧವಾಗಿ ಬೇಕಾಗಿರುವ ಪರಾರಿಯಾಗಿರುವವರು ದೇಶಕ್ಕೆ ಮರಳಿ ನ್ಯಾಯಾಲಯಗಳ ಮುಂದೆ ವಿಚಾರಣೆಯನ್ನು ಎದುರಿಸುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿತ್ತು.

ಹಲವು ಹಂತಗಳ ಕಾನೂನು ಪ್ರಕ್ರಿಯೆಗಳು ಇದರಲ್ಲಿ ಒಳಗೊಂಡಿವೆ. ಆದರೂ ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ಮರಳಿ ಕರೆತರುವ ವಿಚಾರದಲ್ಲಿ ಸರ್ಕಾರದ ಬದ್ಧತೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಚಿವಾಲಯ ತಿಳಿಸಿತ್ತು.

ಭಾರತದಲ್ಲಿ ಕಾನೂನಿನ ಪ್ರಕಾರ ಪರಾರಿಯಾಗಿರುವ ಮತ್ತು ಬೇಕಾಗಿರುವ ವ್ಯಕ್ತಿಗಳು ದೇಶಕ್ಕೆ ಮರಳುವಂತೆ ಮಾಡುವ ನಿಟ್ಟಿನಲ್ಲಿ ನಾವು ಸಂಪೂರ್ಣ ಬದ್ಧರಾಗಿದ್ದೇವೆ. ಈ ನಿರ್ದಿಷ್ಟ ವಾಪಸಾತಿಗಾಗಿ ನಾವು ಹಲವು ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಮತ್ತು ಪ್ರಕ್ರಿಯೆಗಳು ಮುಂದುವರಿದಿವೆ... ಇದರಲ್ಲಿ ಹಲವು ಹಂತಗಳ ಕಾನೂನು ಪ್ರಕ್ರಿಯೆಗಳು ಒಳಗೊಂಡಿವೆ. ಆದರೆ ಅವರನ್ನು ದೇಶಕ್ಕೆ ಮರಳಿ ಕರೆತಂದು ಇಲ್ಲಿನ ನ್ಯಾಯಾಲಯಗಳ ಮುಂದೆ ವಿಚಾರಣೆ ಎದುರಿಸುವಂತೆ ಮಾಡುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.