ವಿದೇಶ

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ; ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಐದನೇ ಡ್ರೋನ್ ಉಡಾವಣೆಗೆ ಸಿದ್ಧವಾಗಿದ್ದ ನಿಯಂತ್ರಣ ಕೇಂದ್ರವನ್ನು ಗುರುತಿಸಿದ ಅಮೆರಿಕ ಪಡೆಗಳು, ಬಂದರ್ ಅಬ್ಬಾಸ್ ಪ್ರದೇಶದಲ್ಲೇ ನಿಖರ ದಾಳಿ ನಡೆಸಿವೆ. ಈ ದಾಳಿಯಲ್ಲಿ ನಿಯಂತ್ರಣ ವ್ಯವಸ್ಥೆಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ; ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!
ತೈಲ ಹಡಗುಗಳು
Published On :

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೆ ತೀವ್ರಗೊಳ್ಳುತ್ತಿದ್ದು, ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ.

ಹಾರ್ಮುಜ್ ಜಲಸಂಧಿ ಪ್ರದೇಶದ ಭದ್ರತೆಗೆ ಧಕ್ಕೆಯುಂಟುಮಾಡುವ ಸಾಧ್ಯತೆಯಿದ್ದ ನಾಲ್ಕು ಇರಾನಿಯನ್ ಡ್ರೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದ್ದು, ಜೊತೆಗೆ ದಕ್ಷಿಣ ಇರಾನ್‌ನ ಪ್ರಮುಖ ಬಂದರು ನಗರವಾದ ಬಂದರ್ ಅಬ್ಬಾಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡ್ರೋನ್ ನಿಯಂತ್ರಣ ಕೇಂದ್ರದ ಮೇಲೂ ದಾಳಿ ನಡೆಸಿದೆ. ಈ ಬೆಳವಣಿಗೆ ಅಮೆರಿಕ-ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮದ ಭವಿಷ್ಯದ ಬಗ್ಗೆ ಮತ್ತೆ ಆತಂಕ ಮೂಡುವಂತೆ ಮಾಡಿದೆ.

ಅಮೆರಿಕಾದ ರಕ್ಷಣಾ ಇಲಾಖೆ ಮೂಲಗಳ ಪ್ರಕಾರ, ಹಾರ್ಮುಜ್ ಜಲಸಂಧಿ ಸುತ್ತಮುತ್ತ ಅಮೆರಿಕ ಮತ್ತು ಮೈತ್ರಿ ರಾಷ್ಟ್ರಗಳ ಹಡಗುಗಳಿಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ಇರಾನ್ ಡ್ರೋನ್ ಚಟುವಟಿಕೆಗಳು ಹೆಚ್ಚಾಗಿದ್ದವು.

ಇದನ್ನು ಗಮನಿಸಿದ ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ಕು ‘ಒನ್-ವೇ ಅಟ್ಯಾಕ್ ಡ್ರೋನ್’ಗಳನ್ನು ಗುರಿಯಾಗಿಸಿ ಹೊಡೆದುರುಳಿಸಿವೆ. ಇವು ಆತ್ಮಹತ್ಯಾ ದಾಳಿ ನಡೆಸುವ ಉದ್ದೇಶ ಹೊಂದಿದ್ದ ಡ್ರೋನ್‌ಗಳಾಗಿವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಐದನೇ ಡ್ರೋನ್ ಉಡಾವಣೆಗೆ ಸಿದ್ಧವಾಗಿದ್ದ ನಿಯಂತ್ರಣ ಕೇಂದ್ರವನ್ನು ಗುರುತಿಸಿದ ಅಮೆರಿಕ ಪಡೆಗಳು, ಬಂದರ್ ಅಬ್ಬಾಸ್ ಪ್ರದೇಶದಲ್ಲೇ ನಿಖರ ದಾಳಿ ನಡೆಸಿವೆ. ಈ ದಾಳಿಯಲ್ಲಿ ನಿಯಂತ್ರಣ ವ್ಯವಸ್ಥೆಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಆದರೆ, ದಾಳಿಯಿಂದ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಹಿರಿಯ ಅಧಿಕಾರಿ, “ನಮ್ಮ ಕ್ರಮಗಳು ಸಂಪೂರ್ಣವಾಗಿ ರಕ್ಷಣಾತ್ಮಕವಾಗಿವೆ. ಯುದ್ಧ ವಿರಾಮ ಕಾಪಾಡುವ ಉದ್ದೇಶದಿಂದಲೇ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅಮೆರಿಕ ಪಡೆಗಳು ಅಥವಾ ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳಿಗೆ ಯಾವುದೇ ಅಪಾಯ ಉಂಟಾದರೆ ತಕ್ಷಣ ಪ್ರತಿಕ್ರಿಯಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆಯೂ ಅಮೆರಿಕ ಸೇನೆ ಇದೇ ಪ್ರದೇಶದಲ್ಲಿ ಇರಾನ್‌ನ ಕ್ಷಿಪಣಿ ತಾಣಗಳು ಹಾಗೂ ಸಮುದ್ರದಲ್ಲಿ ಮೈನ್‌ಗಳನ್ನು ಅಳವಡಿಸಲು ಬಳಸಲಾಗುತ್ತಿದ್ದ ದೋಣಿಗಳ ಮೇಲೆ ದಾಳಿ ನಡೆಸಿತ್ತು. ಆ ಕ್ರಮವನ್ನು ಕೂಡ “ಸ್ವಯಂ ರಕ್ಷಣೆಯ ಭಾಗ” ಎಂದು ಅಮೆರಿಕ ಸಮರ್ಥಿಸಿತ್ತು.

ಆ ಸಂದರ್ಭದಲ್ಲೂ ಉದ್ವಿಗ್ನತೆ ತೀವ್ರಗೊಂಡಿದ್ದರೂ, ದೊಡ್ಡ ಮಟ್ಟದ ಯುದ್ಧ ಮರುಪ್ರಾರಂಭವಾಗುವುದನ್ನು ಎರಡೂ ದೇಶಗಳು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದವು. ಆದರೆ, ಇತ್ತೀಚಿನ ದಾಳಿಗಳ ನಂತರ ಪರಿಸ್ಥಿತಿ ಮತ್ತೆ ಗಂಭೀರ ಹಂತ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಶೇಷವಾಗಿ ಜಗತ್ತಿನ ತೈಲ ಸರಬರಾಜಿಗೆ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಯಾವುದೇ ಸಂಘರ್ಷ ಉಂಟಾದರೂ ಅದರ ಪರಿಣಾಮ ಜಾಗತಿಕ ಆರ್ಥಿಕತೆ ಮೇಲೂ ಬೀಳುವ ಸಾಧ್ಯತೆ ಇದೆ.

ಹೀಗಾಗಿ ಅಮೆರಿಕಾದ ಹೊಸ ದಾಳಿ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಂತರರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಸರ್ಕಾರದಿಂದ ಈ ಬೆಳವಣಿಗೆಯ ಕುರಿತು ಇನ್ನೂ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಆದರೆ, ಅಮೆರಿಕದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.