ವಿದೇಶ

West Asia war: ಶಾಂತಿ ಪ್ರಸ್ತಾವ ನಡುವೆಯೇ ಯುದ್ಧಕ್ಕೆ ಸಜ್ಜು; ಭೂ ದಾಳಿಗೆ ಬಂದರೆ ಬೆಂಕಿ ಮೂಲಕ ಉತ್ತರ- ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ

ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ವಾಯುದಾಳಿಗಳಿಂದ ಪರಿಸ್ಥಿತಿ ಗಂಭೀರಗೊಂಡಿದ್ದು, ಇರಾನ್ ಕೂಡ ಪ್ರತಿದಾಳಿಗಳನ್ನು ತೀವ್ರಗೊಳಿಸಿದೆ.

West Asia war: ಶಾಂತಿ ಪ್ರಸ್ತಾವ ನಡುವೆಯೇ ಯುದ್ಧಕ್ಕೆ ಸಜ್ಜು; ಭೂ ದಾಳಿಗೆ ಬಂದರೆ ಬೆಂಕಿ ಮೂಲಕ ಉತ್ತರ- ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ
ಮಧ್ಯಪ್ರಾಚ್ಯ ಸಂಘರ್ಷ
Published On :

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಈ ನಡುವೆ ಶಾಂತಿ ಪ್ರಸ್ತಾಪ ಮುಂದಿಟ್ಟಿರುವ ಅಮೆರಿಕಾ ಅದರ ಜೊತೆ ಜೊತೆಗೇ ಭೂ ದಾಳಿಗೂ ಸಿದ್ಧತೆ ನಡೆಸುತ್ತಿದೆ ಎಂಬ ಸುದ್ದಿಗಳು ಹೊರಬರುತ್ತಿವೆ. ಇದು ಇರಾನ್ ರಾಷ್ಟ್ರವನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

ಅಮೆರಿಕಾ ಯುದ್ಧ ಸಿದ್ಧತೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ಅಮೆರಿಕ ಭೂ ದಾಳಿ ನಡೆಸಿದರೆ, “ಅಮೆರಿಕ ಸೈನಿಕರು ಭೂಮಿಯ ಮೇಲೆ ಕಾಲಿಡುತ್ತಿದ್ದಂತೆಯೇ ಬೆಂಕಿಯ ಮೂಲಕ ಉತ್ತರ ನೀಡಲು ನಮ್ಮ ಯೋಧರು ಸಿದ್ಧರಾಗಿದ್ದಾರೆ ಎಂದು ಕಠಿಣ ಎಚ್ಚರಿಕೆ ನೀಡಿದೆ.

“ಅಮೆರಿಕ ಸೈನಿಕರು ನಮ್ಮ ನೆಲದ ಮೇಲೆ ಬಂದರೆ ನಮ್ಮ ಯೋಧರು ಅವರನ್ನು ಎದುರಿಸಲು ಸಿದ್ಧರಾಗಿದ್ದಾರೆ” ಎಂದು ಇರಾನ್ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಘಾಲಿಬಾಫ್ ಎಚ್ಚರಿಕೆ ನೀಡಿದ್ದಾರೆ.

ಒಂದು ಕಡೆ ಮಾತುಕತೆ ಮಾತುಗಳನ್ನು ಹೊರಗೆ ಹೇಳುತ್ತಾ, ಮತ್ತೊಂದು ಕಡೆ ದಾಳಿ ಯೋಜನೆ ಮಾಡುತ್ತಿದೆ ಎಂದೂ ಅಮೆರಿಕಾವನ್ನು ಟೀಕಿಸಿದ್ದಾರೆ.

ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ವಾಯುದಾಳಿಗಳಿಂದ ಪರಿಸ್ಥಿತಿ ಗಂಭೀರಗೊಂಡಿದ್ದು, ಇರಾನ್ ಕೂಡ ಪ್ರತಿದಾಳಿಗಳನ್ನು ತೀವ್ರಗೊಳಿಸಿದೆ.

ಪರ್ಷಿಯನ್ ಕೊಲ್ಲಿ ರಾಷ್ಟ್ರಗಳು ಹಾಗೂ ಹಾರ್ಮುಲ್ ಜಲಸಂಧಿ ಮಾರ್ಗದ ಮೇಲೆ ದಾಳಿ ನಡೆಸಿರುವುದರಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಉಂಟಾಗಿದೆ. ವಿಶ್ವ ಆರ್ಥಿಕತೆಯ ಮೇಲೂ ಇದರ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ.

ಈ ಯುದ್ಧ ಇದೀಗ ಪ್ರಾದೇಶಿಕ ಮಟ್ಟವನ್ನು ಮೀರಿ ವ್ಯಾಪಕ ಸಂಘರ್ಷದ ರೂಪ ಪಡೆದುಕೊಳ್ಳುತ್ತಿದ್ದು, ಇರಾನ್ ಜನತೆ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಟೆಹ್ರಾನ್‌ನ ನಿವಾಸಿಯೊಬ್ಬರು ಮಾತನಾಡಿ, ರಾತ್ರಿ ಹೊತ್ತು ದಾಳಿಗಳ ತೀವ್ರತೆ ಮತ್ತಷ್ಟು ಹೆಚ್ಚಿದೆ, ಇಡೀ ನಗರ ನಡುಗುತ್ತಿರುವಂತೆ ಅನಿಸುತ್ತದೆ” ಎಂದು ಹೇಳಿದ್ದಾರೆ.

ಪಶ್ಚಿಮ ಇರಾನ್‌ನ ಅಹ್ವಾಜ್ ನಗರದಲ್ಲಿರುವ ಮಹಿಳೆಯೊಬ್ಬರು “ಪ್ರತಿ ದಿನವೂ ಭಯ ಮತ್ತು ಆತಂಕದ ನಡುವೆ ಬದುಕು ಸಾಗುತ್ತಿದ್ದೇವೆಂದು ತಿಳಿಸಿದ್ದಾರೆ.

ಇಸ್ಫಹಾನ್ ನಗರದ ವಿಶ್ವವಿದ್ಯಾಲಯದ ಮೇಲೆ ಮತ್ತೊಮ್ಮೆ ವಾಯುದಾಳಿ ನಡೆದಿದ್ದು, ಇದು ಯುದ್ಧ ಪ್ರಾರಂಭವಾದ ಬಳಿಕ ನಡೆದಿರುವ ಎರಡನೇ ದಾಳಿ ಆಗಿದೆ. ಟೆಹ್ರಾನ್‌ನಲ್ಲಿರುವ ಕತಾರ್ ಮಾಧ್ಯಮ ಕಚೇರಿಯ ಮೇಲೂ ಕ್ಷಿಪಣಿ ದಾಳಿ ನಡೆದಿದ್ದು, ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಒಳಗಡೆ ಗಾಜುಗಳು ಒಡೆದು ಚೂರು ಚೂರಾಗಿರುವ ದೃಶ್ಯಗಳು ಕಂಡು ಬಂದಿವೆ.

ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದರೂ, ಇದನ್ನು ಇರಾನ್ ತಳ್ಳಿಹಾಕಿದೆ.

ಈ ಹಿನ್ನೆಲೆ ಪಾಕಿಸ್ತಾನ ಮಧ್ಯವರ್ತಿಯಾಗಿ ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಟ್ ದೇಶಗಳ ವಿದೇಶಾಂಗ ಸಚಿವರೊಂದಿಗೆ ಚರ್ಚೆಗಳನ್ನು ನಡೆಸಿದೆ. ಈ ಸಭೆಯಲ್ಲಿ ಪ್ರದೇಶದ ಉದ್ವಿಗ್ನತೆ ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ಅಮೆರಿಕ ತನ್ನ ಸೈನಿಕ ಶಕ್ತಿಯನ್ನು ಹೆಚ್ಚಿಸುತ್ತಿದ್ದು, ಸುಮಾರು 3500 ಸೈನಿಕರನ್ನು ಹೊತ್ತ ಯುದ್ಧ ನೌಕೆ ಯುಎಸ್‌ಎಸ್ ಟ್ರಿಪೋಲಿ ಮಧ್ಯಪ್ರಾಚ್ಯಕ್ಕೆ ಆಗಮಿಸಿದೆ. ಹಾರ್ಮುಜ್ ಜಲಸಂಧಿ ಮಾರ್ಗದ ಸಮೀಪ ಭೂ ಕಾರ್ಯಾಚರಣೆಗಳಿಗೂ ಅಮೆರಿಕ ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳು ಬಂದಿವೆ.

ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿ ಮಾರ್ಗವನ್ನು ಶತ್ರು ರಾಷ್ಟ್ರಗಳ ಹಡಗುಗಳಿಗೆ ಮುಚ್ಚಲಾಗಿದೆ ಎಂದು ಘೋಷಿಸಿದೆ. ಈ ಜಲಸಂಧಿ ಜಗತ್ತಿನ ತೈಲ ಸಾಗಣೆಯಲ್ಲಿ ಪ್ರಮುಖ ಮಾರ್ಗವಾಗಿದೆ. ಇದರ ಪರಿಣಾಮವಾಗಿ ತೈಲ ಮತ್ತು ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಭೀತಿ ಇದೆ.

ಇದೇ ವೇಳೆ ಇರಾನ್ ಪಡೆಗಳು ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲ್ಯೂಮಿನಿಯಂ ಕಾರ್ಖಾನೆಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿವೆ. ಈ ದಾಳಿಯಿಂದ ಹಲವರು ಗಾಯಗೊಂಡಿದ್ದು, ಕಾರ್ಖಾನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಇಸ್ರೇಲ್‌ನ ನೆಗೇವ್ ಮರುಭೂಮಿಯ ಕೈಗಾರಿಕಾ ಪ್ರದೇಶದಲ್ಲೂ ಹೊಗೆ ಕಾಣಿಸಿಕೊಂಡಿದ್ದು, ಕ್ಷಿಪಣಿ ಅವಶೇಷಗಳಿಂದ ಈ ಘಟನೆ ಸಂಭವಿಸಿರಬಹುದು ಎಂದು ಸೇನೆ ತಿಳಿಸಿದೆ.

ಈ ಯುದ್ಧದಲ್ಲಿ ಯೆಮನ್‌ನ ಹೌತಿ ಪಡೆಗಳೂ ಭಾಗವಹಿಸಿದ್ದು, ಇಸ್ರೇಲ್ ಮೇಲೆ ಕ್ರೂಸ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಘೋಷಿಸಿವೆ.

ಇದರೊಂದಿಗೆ ಕೆಂಪು ಸಮುದ್ರ ಪ್ರದೇಶದಲ್ಲೂ ಉದ್ವಿಗ್ನತೆ ಹೆಚ್ಚುವ ಭೀತಿ ಮೂಡಿದೆ. ಏತನ್ಮಧ್ಯೆ ಸೌದಿ ಅರೇಬಿಯಾ ತನ್ನ ತೈಲ ರಫ್ತಿನ ಮಾರ್ಗವನ್ನು ಬದಲಾಯಿಸಲು ಮುಂದಾಗಿದೆ.

ಒಟ್ಟಾರೆ, ಇರಾನ್-ಅಮೆರಿಕ ಸಂಘರ್ಷ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಶ್ವದ ಗಮನ ಈ ಪ್ರದೇಶದತ್ತ ಕೇಂದ್ರೀಕರಿಸಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.