ಯುದ್ಧ ನಡುವಲ್ಲೇ ಅಮೆರಿಕಾ ರಾಜತಾಂತ್ರಿಕ ಹೆಜ್ಜೆ: ಇರಾನ್ ಮೇಲಿನ ದಾಳಿ ಗಡುವು ಮುಂದೂಡಿಕೆ, ಶಾಂತಿ ಮಾತುಕತೆಗೆ ಒತ್ತು..!
ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸೇನಾ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧವಾಗಿದ್ದ ಅಮೆರಿಕ, ಇದೀಗ ಇದ್ದಕ್ಕಿದ್ದಂತೆ 10 ದಿನಗಳ ಗಡುವು ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಟ್ರಂಪ್ ಅವರು ಯುದ್ಧದ ನಡುವೆಯೂ ರಾಜತಾಂತ್ರಿಕ ಮಾರ್ಗಕ್ಕೆ ಒತ್ತು ನೀಡುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ವಾಷಿಂಗ್ಟನ್: ಯುದ್ಧದ ಪರಿಸ್ಥಿತಿಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಜತಾಂತ್ರಿಕ ಹೆಜ್ಜೆ ಇಟ್ಟಿದ್ದು, ಇರಾನ್ ಮೇಲಿನ ದಾಳಿ ಗಡುವನ್ನು ಮುಂದೂಡಿದ್ದಾರೆ. ಇದು ಜಾಗತಿಕ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸೇನಾ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧವಾಗಿದ್ದ ಅಮೆರಿಕ, ಇದೀಗ ಇದ್ದಕ್ಕಿದ್ದಂತೆ 10 ದಿನಗಳ ಗಡುವು ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಟ್ರಂಪ್ ಅವರು ಯುದ್ಧದ ನಡುವೆಯೂ ರಾಜತಾಂತ್ರಿಕ ಮಾರ್ಗಕ್ಕೆ ಒತ್ತು ನೀಡುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಅವರು, ಈ ನಿರ್ಧಾರವನ್ನು ಇರಾನ್‌ನ ವಿನಂತಿಯ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮಾತುಕತೆಗಳಿಗೆ ಇನ್ನಷ್ಟು ಸಮಯ ನೀಡುವುದರಿಂದ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬಹುದು ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ಅವಧಿಯಲ್ಲಿ ಇರಾನ್ ತನ್ನ ನಿಲುವಿನಲ್ಲಿ ಬದಲಾವಣೆ ತರಬಹುದು ಮತ್ತು ಅಮೆರಿಕ ನೀಡಿದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ಆದರೆ. ಇರಾನ್ ಈ ಹೇಳಿಕೆಗಳಿಗೆ ಸ್ಪಷ್ಟ ಬೆಂಬಲ ನೀಡಿಲ್ಲ. ಅಮೆರಿಕ ನೀಡಿದ ಪ್ರಸ್ತಾವನೆಗಳು ಏಕಪಕ್ಷೀಯವಾಗಿವೆ ಮತ್ತು ತಮ್ಮ ಹಿತಾಸಕ್ತಿಗಳಿಗೆ ಅನುಕೂಲಕರವಾಗಿಲ್ಲ ಎಂದು ಟೀಕಿಸಿದೆ.
ಏತನ್ಮಧ್ಯೆ ಮಧ್ಯವರ್ತಿಗಳ ಮೂಲಕ ಈ ಮಾತುಕತೆಗಳು ನಡೆಯುತ್ತಿರುವುದು ಗಮನಾರ್ಹ ವಿಚಾರವಾಗಿದೆ. ಪಾಕಿಸ್ತಾನ, ಟರ್ಕಿ ಮತ್ತು ಇತರ ಕೆಲವು ದೇಶಗಳು ಅಮೆರಿಕ ಮತ್ತು ಇರಾನ್ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗುತ್ತಿದೆ.
ನೇರ ಮಾತುಕತೆಗಳಿಗಿಂತ ಪರೋಕ್ಷ ಮಾತುಕತೆಗಳು ನಡೆಯುತ್ತಿರುವುದರಿಂದ ಶಾಂತಿ ಒಪ್ಪಂದದ ಬಗ್ಗೆ ಅನುಮಾನಗಳು ಮೂಡತೊಡಗಿವೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ 'ಇರಾನ್ ಜೊತೆಗಿನ ಮಾತುಕತೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿದೆ' ಎಂಬ ಹೇಳಿಕೆ ಮತ್ತು ಇರಾನ್ ಪ್ರತಿಕ್ರಿಯೆ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.
ಇದೇ ವೇಳೆ, ಈ ಯುದ್ಧದ ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಪರಿಣಾಮ ಬೀರಿವೆ. ಇಂಧನ ಕ್ಷೇತ್ರದಲ್ಲಿ ಅಸ್ಥಿರತೆ ಹೆಚ್ಚಿದ್ದು, ತೈಲ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದೆ.
ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವುದರಿಂದ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಭದ್ರತೆ ಮೇಲೂ ಪರಿಣಾಮ ಬೀರಿದೆ. ಕಳೆದ ಕೆಲವು ವಾರಗಳಲ್ಲಿ ನಡೆದ ದಾಳಿಗಳು ಮತ್ತು ಪ್ರತಿದಾಳಿಗಳಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

'ನನ್ನನ್ನೇ ಸರ್ವೋಚ್ಚ ನಾಯಕನನ್ನಾಗಿ ಮಾಡಲು ಇರಾನ್ ಬಯಸಿದೆ; ಆದರೆ ನಾನು ತಿರಸ್ಕರಿಸಿದೆ': ಡೊನಾಲ್ಡ್ ಟ್ರಂಪ್
ಟ್ರಂಪ್ ಅವರ ಈ ತೀರ್ಮಾನವನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಕೆಲವರು ಇದನ್ನು ಶಾಂತಿ ಮಾತುಕತೆಗಳಿಗೆ ಅವಕಾಶ ನೀಡುವ ಧೈರ್ಯಶಾಲಿ ರಾಜತಾಂತ್ರಿಕ ಹೆಜ್ಜೆ ಎಂದು ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ಕೇವಲ ಸೈನಿಕ ಒತ್ತಡವನ್ನು ಮುಂದುವರಿಸಿಕೊಂಡು ಸಮಯ ಗೆಲ್ಲುವ ತಂತ್ರ ಎಂದು ಟೀಕಿಸುತ್ತಿದ್ದಾರೆ.
ದಾಳಿ ಗಡುವನ್ನು ಮುಂದೂಡುವ ಮೂಲಕ ಅಮೆರಿಕ ತನ್ನ ಕಠಿಣ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿಲ್ಲ; ಬದಲಿಗೆ, ಮಾತುಕತೆಗಳಿಗೆ ಅವಕಾಶ ನೀಡುತ್ತಾ ಒತ್ತಡವನ್ನು ಮುಂದುವರಿಸುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಮುಂದಿನ 10 ದಿನಗಳು ಅತ್ಯಂತ ನಿರ್ಣಾಯಕವಾಗಿರಲಿದ್ದು, ಈ ಅವಧಿಯಲ್ಲಿ ಮಾತುಕತೆಗಳು ಸ್ಪಷ್ಟ ಫಲಿತಾಂಶ ತರುತ್ತವೆಯೇ ಅಥವಾ ಮತ್ತೆ ಸೈನಿಕ ಕಾರ್ಯಾಚರಣೆಗಳತ್ತ ಪರಿಸ್ಥಿತಿ ತಿರುಗುತ್ತದೆಯೇ ಎಂಬುದು ವಿಶ್ವದ ಗಮನ ಸೆಳೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


