ವಿದೇಶ

ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಬೇಡ: ಟ್ರಂಪ್ ಸೂಚನೆ ಬೆನ್ನಲ್ಲೇ ಹಿಂದೆ ಸರಿದ ಇಸ್ರೇಲ್; ಇರಾನ್ 'ನಾಶವಾಗಿದೆ' ಎಂದ ನೆತನ್ಯಾಹು

ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪ್ರಮುಖ ಅನಿಲ ಕೇಂದ್ರವಾದ South Pars Gas Field ಗುರಿ ಮಾಡಿಕೊಳ್ಳಲಾಗಿತ್ತು ಈ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಗಲ್ಫ್ ಪ್ರದೇಶದ ತೈಲ ಮತ್ತು ಅನಿಲ ಸೌಲಭ್ಯಗಳ ಮೇಲೆ ದಾಳಿಗಳನ್ನು ತೀವ್ರಗೊಳಿಸಿತ್ತು.

ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಬೇಡ: ಟ್ರಂಪ್ ಸೂಚನೆ ಬೆನ್ನಲ್ಲೇ ಹಿಂದೆ ಸರಿದ ಇಸ್ರೇಲ್; ಇರಾನ್ 'ನಾಶವಾಗಿದೆ' ಎಂದ ನೆತನ್ಯಾಹು
ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು
Published On :

ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ನಡುವೆ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳು ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದೆ. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ಬೆನ್ನಲ್ಲೇ ಇಸ್ರೇಲ್ ತನ್ನ ದಾಳಿಯ ತಂತ್ರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿಕೊಂಡಿದೆ.

ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಇರಾನ್‌ನ ಪ್ರಮುಖ ಅನಿಲ ಕ್ಷೇತ್ರಗಳ ಮೇಲೆ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಿದ್ದಾರೆ.

ಈ ನಿರ್ಧಾರ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಉಂಟಾದ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪ್ರಮುಖ ಅನಿಲ ಕೇಂದ್ರವಾದ South Pars Gas Field ಗುರಿ ಮಾಡಿಕೊಳ್ಳಲಾಗಿತ್ತು ಈ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಗಲ್ಫ್ ಪ್ರದೇಶದ ತೈಲ ಮತ್ತು ಅನಿಲ ಸೌಲಭ್ಯಗಳ ಮೇಲೆ ದಾಳಿಗಳನ್ನು ತೀವ್ರಗೊಳಿಸಿತ್ತು.

ಈ ದಾಳಿಗಳ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಗಳು ತೀವ್ರ ಅಸ್ಥಿರತೆಯನ್ನು ಅನುಭವಿಸುತ್ತಿದ್ದು, ತೈಲ ಮತ್ತು ಅನಿಲ ಬೆಲೆಗಳಲ್ಲಿ ಭಾರೀ ಏರಿಳಿತ ಕಂಡುಬಂದಿದೆ.

ವಿಶೇಷವಾಗಿ, ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾದ Strait of Hormuz ಮೇಲೆ ಒತ್ತಡ ಹೆಚ್ಚಾಗಿರುವುದು ಜಾಗತಿಕ ಸರಬರಾಜಿಗೆ ದೊಡ್ಡ ಸವಾಲಾಗಿದೆ.

ಇದರ ಮಧ್ಯೆ, ನೆತನ್ಯಾಹು ತೀವ್ರ ಹೇಳಿಕೆ ನೀಡಿದ್ದು, ಇರಾನ್ ಈಗಾಗಲೇ “decimated” ಅಂದರೆ ತೀವ್ರವಾಗಿ ದುರ್ಬಲಗೊಂಡಿದೆ ಎಂದು ಹೇಳಿದ್ದಾರೆ. ಇತ್ತೀಚಿನ ದಾಳಿಗಳಲ್ಲಿ ಅದರ ಅಣು ಮತ್ತು ಕ್ಷಿಪಣಿ ಸಾಮರ್ಥ್ಯಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ, ಇರಾನ್ ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ತನ್ನ ಸಾಮರ್ಥ್ಯ ಇನ್ನೂ ಬಲವಾಗಿಯೇ ಇದೆ ಎಂದು ಪ್ರತಿಕ್ರಿಯಿಸಿದೆ. ಜೊತೆಗೆ, ತನ್ನ ಇಂಧನ ಮೂಲಸೌಕರ್ಯಗಳ ಮೇಲೆ ಮತ್ತೆ ದಾಳಿ ನಡೆದರೆ ಒತ್ತಡಕ್ಕೆ ಮಣಿಯದೆ ಅನಿಯಂತ್ರಿತ ದಾಳಿ ನಡೆಸುವ ಎಚ್ಚರಿಕೆಯನ್ನೂ ನೀಡಿದೆ.

ಇದರ ನಡುವೆ, Strait of Hormuz ಪ್ರದೇಶದಲ್ಲಿ ಇರಾನ್ ನಿರ್ಬಂಧ ಹೇರಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆ ತಲ್ಲಣಗೊಂಡಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 10ರಷ್ಟು ಏರಿಕೆ ಕಂಡು $119 ಪ್ರತಿ ಬ್ಯಾರೆಲ್‌ಗೆ ತಲುಪಿದ್ದು, ನಂತರ $112ಕ್ಕೆ ಇಳಿದಿದೆ. ಯುರೋಪಿನ ಅನಿಲದ ಬೆಲೆಗಳು ಕೂಡ 35% ಏರಿಕೆ ಕಂಡಿವೆ.

ಈ ಪರಿಸ್ಥಿತಿಗೆ ಜಾಗತಿಕ ಶಕ್ತಿಶಾಲಿ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಬ್ರಿಟನ್, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವು ದೇಶಗಳು ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿವೆ.

ಫ್ಯಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೋನ್ ಅವರು, ಈ ದಾಳಿಗಳನ್ನು ತೀವ್ರವಾಗಿ ಖಂಡಿಸಿದ್ದು, ಅಮೆರಿಕಾ-ಇರಾನ್ ನೇರ ಮಾತುಕತೆಗಳಿಗೆ ಕರೆ ನೀಡಿದ್ದಾರೆ.

ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು ಪ್ರತಿಕ್ರಿಯಿಸಿ, ಯುದ್ಧ ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಅಂತಿಮ ನಿರ್ಧಾರವನ್ನು ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಟ್ರಂಪ್ ಸೂಚನೆಯ ನಂತರ ಇಂಧನ ಮೂಲಸೌಕರ್ಯಗಳ ಮೇಲೆ ತಾನು ನಡೆಸುತ್ತಿರುವ ದಾಳಿಯಿಂದ ಇಸ್ರೇಲ್ ತಾತ್ಕಾಲಿಕವಾಗಿ ಹಿಂದೆ ಸರಿದರೂ, ಎರಡು ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗದೇ ಮುಂದುವರೆದಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ.

ಇರಾನ್‌ನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ಇನ್ನು ದಾಳಿ ಮಾಡಲ್ಲ; ಟ್ರಂಪ್

ಈ ನಡುವೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್ ಅವರು, ಇರಾನ್‌ನ ಪ್ರಮುಖ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ಇನ್ನು ಮುಂದೆ ದಾಳಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನಿರ್ದಿಷ್ಟ ದಾಳಿಯ ಬಗ್ಗೆ ಅಮೆರಿಕಕ್ಕೆ ಏನೂ ತಿಳಿದಿರಲಿಲ್ಲ. ಖತರ್ ದೇಶವು ಯಾವುದೇ ರೀತಿಯಲ್ಲಿ, ಯಾವುದೇ ರೂಪದಲ್ಲಿ ಭಾಗಿಯಾಗಿರಲಿಲ್ಲ ಅಥವಾ ಈ ದಾಳಿ ಸಂಭವಿಸುತ್ತದೆ ಎಂಬ ಕಲ್ಪನೆಯೂ ಅದಕ್ಕೆ ಇರಲಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.