'ಹಿಂಸೆಗೆ ಹಿಂಸೆಯೇ ಉತ್ತರ'; ಇರಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ; Video ಬಿಡುಗಡೆ
ಇರಾನ್‌ನ ಈ ಕ್ರಮವು ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯಲ್ಲಿನ ನೌಕಾಯಾನ ಸ್ವಾತಂತ್ರ್ಯಕ್ಕೂ ಧಕ್ಕೆಯಾಗಿದೆ.

ನವದೆಹಲಿ: ಕದನ ವಿರಾಮ ಉಲ್ಲಂಘಿಸಿ ವಾಣಿಜ್ಯ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಶನಿವಾರ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹ ಕೇಂದ್ರಗಳು ಹಾಗೂ ರಾಡಾರ್ ತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯ 37 ಸೆಕೆಂಡ್‌ಗಳ ವಿಡಿಯೊವನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಬಿಡುಗಡೆ ಮಾಡಿದೆ.
ಜೂನ್ 25ರಂದು ಸಿಂಗಾಪುರ ಧ್ವಜ ಹೊಂದಿದ್ದ ಎಂ/ವಿ ಎವರ್ ಲವ್ಲಿ (M/V Ever Lovely) ಸರಕು ಸಾಗಣೆ ಹಡಗು ಹಾರ್ಮುಜ್ ಜಲಸಂಧಿಯಿಂದ ಒಮಾನ್ ಕರಾವಳಿಯ ಮೂಲಕ ಹೊರಬರುತ್ತಿದ್ದ ವೇಳೆ ಇರಾನ್ ಏಕಮುಖ ದಾಳಿ ಡ್ರೋನ್ ಮೂಲಕ ದಾಳಿ ನಡೆಸಿತ್ತು ಎಂದು ಅಮೆರಿಕ ಆರೋಪಿಸಿದೆ.
ಈ ಘಟನೆಯ ನಂತರ ಪ್ರತೀಕಾರವಾಗಿ ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ಸಂಗ್ರಹ ತಾಣಗಳು ಮತ್ತು ಕರಾವಳಿ ರಾಡಾರ್ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಇರಾನ್‌ನ ಈ ಕ್ರಮವು ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯಲ್ಲಿನ ನೌಕಾಯಾನ ಸ್ವಾತಂತ್ರ್ಯಕ್ಕೂ ಧಕ್ಕೆಯಾಗಿದೆ ಎಂದು ಹೇಳಿದ.
ಅಮೆರಿಕದ ಸೇನೆ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಮತ್ತು ಭದ್ರತೆ ಒದಗಿಸುತ್ತಿದೆ. ಅಲ್ಲದೆ, ಇರಾನ್ ಜೊತೆಗಿನ ಒಪ್ಪಂದದ ಎಲ್ಲ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದರ ಮೇಲೂ ಅಮೆರಿಕ ನಿಗಾ ಇಟ್ಟಿದೆ ಎಂದು ತಿಳಿಸಿದೆ.
ಆದರೆ, ನಡೆದ ನಿಖರ ಸ್ಥಳವನ್ನು ಅಮೆರಿಕ ಬಹಿರಂಗಪಡಿಸಿಲ್ಲ. ಇದೇ ವೇಳೆ ಇರಾನ್ ಸರ್ಕಾರಿ ಮಾಧ್ಯಮಗಳು ದಕ್ಷಿಣದ ಸಿರಿಕ್ ಪ್ರದೇಶದ ತಹೆರೌಯೆ ಬಂದರಿನ ಬಳಿ ಸ್ಫೋಟ ಸಂಭವಿಸಿದೆ ಎಂದು ವರದಿ ಮಾಡಿವೆ.
'ಹಿಂಸೆಗೆ ಹಿಂಸೆಯೇ ಉತ್ತರ' – ಜೆಡಿ ವ್ಯಾನ್ಸ್
ಇರಾನ್ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು, ಇರಾನ್ ಮತ್ತೊಮ್ಮೆ ದಾಳಿ ನಡೆಸಿದರೆ ಅದಕ್ಕೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
"ಇರಾನ್ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದೆ. ನಾವು ಅದನ್ನು ಪಾಲಿಸಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆಯ ಮೂಲಕ ಬಗೆಹರಿಸಬಹುದು. ಆದರೆ, ಹಿಂಸೆಗೆ ಹಿಂಸೆಯೇ ಉತ್ತರವಾಗಲಿದೆ," ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕದ ದಾಳಿಯ ಬಳಿಕ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಹೇಳಿಕೊಂಡಿದೆ. "ಮತ್ತೆ ದಾಳಿ ನಡೆದರೆ ನಮ್ಮ ಪ್ರತಿಕ್ರಿಯೆ ಇನ್ನಷ್ಟು ವ್ಯಾಪಕವಾಗಿರುತ್ತದೆ" ಎಂದು ಎಚ್ಚರಿಸಿದೆ.
ಕದನ ವಿರಾಮ ಉಲ್ಲಂಘನೆ ಮೂರ್ಖತನವಾದದ್ದು– ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸರಕು ಸಾಗಣೆ ಹಡಗಿನ ಮೇಲಿನ ಡ್ರೋನ್ ದಾಳಿಯನ್ನು "ಕದನ ವಿರಾಮ ಒಪ್ಪಂದ ಉಲ್ಲಂಘನೆ ಮೂರ್ಖತನದ್ದು ಎಂದು ಕರೆದಿದ್ದಾರೆ.
"ನಾಲ್ಕು ಡ್ರೋನ್‌ಗಳಲ್ಲಿ ಒಂದು ದುಬಾರಿ ಸರಕು ಹಡಗಿನ ಮೇಲ್ಭಾಗಕ್ಕೆ ನೇರವಾಗಿ ಅಪ್ಪಳಿಸಿತು. ಉಳಿದ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಇದು ನಮ್ಮ ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆ," ಎಂದು ಟ್ರಂಪ್ ಅವರು ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಹೇಳಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವೆ ಏಪ್ರಿಲ್ 8ರಂದು ಕದನ ವಿರಾಮ ಜಾರಿಗೆ ಬಂದಿದ್ದರೂ, ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಸಂಪೂರ್ಣವಾಗಿ ನಿಂತಿಲ್ಲ. ಜೂನ್ 17ರಂದು ಎರಡೂ ರಾಷ್ಟ್ರಗಳು 14 ಅಂಶಗಳ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, 60 ದಿನಗಳೊಳಗೆ ಅಂತಿಮ ಒಪ್ಪಂದದತ್ತ ಸಾಗಲು ನಿರ್ಧರಿಸಿವೆ. ಇತ್ತೀಚೆಗೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಮೊದಲ ಹಂತದ ಮಾತುಕತೆಗಳೂ ನಡೆದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



