Hormuz ಜಲಸಂಧಿ ಮುಚ್ಚಿದರೆ ಇರಾನ್ ಎಂಬ ದೇಶವೇ ಇರಲ್ಲ: ಶಾಂತಿ ಮಾತುಕತೆ ನಡುವಲ್ಲೇ ಟ್ರಂಪ್ ಖಡಕ್ ಎಚ್ಚರಿಕೆ
ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ. ನೀವು ನಿಮ್ಮ ದೇಶವನ್ನೇ ಕಳೆದುಕೊಳ್ಳುತ್ತೀರಿ. ನಿಮ್ಮ ದೇಶಕ್ಕೆ ಹಿಂದಿರುಗಲೂ ಸಾಧ್ಯವಾಗುವುದಿಲ್ಲ.

ವಾಷಿಂಗ್ಟನ್/ಜಿನೀವಾ: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಶಮನಗೊಳಿಸಲು ಸ್ವಿಟ್ಜರ್ಲ್ಯಾಂಡ್ನಲ್ಲಿ ಮಹತ್ವದ ಮಾತುಕತೆಗಳು ನಡೆಯುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
"ನೀವು ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ, ನೀವು ವಾಪಸ್ ಹೋಗಲು ಸಾಧ್ಯವಿಲ್ಲ, ನಿಮ್ಮ ದೇಶವೇ ಉಳಿಯುವುದಿಲ್ಲ" ಎಂದು ಹೇಳಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಜೆಡಿ.ವ್ಯಾನ್ಸ್ ನೇತೃತ್ವದ ನಿಯೋಗವು ಭಾನುವಾರ ಸ್ವಿಟ್ಜರ್ಲ್ಯಾಂಡ್ನಲ್ಲಿ ಇರಾನ್ ಪ್ರತಿನಿಧಿಗಳೊಂದಿಗೆ ಮಾತುಕತೆ ಆರಂಭಿಸಿತ್ತು. ಇರಾನ್ ಪರವಾಗಿ ಸಂಸತ್ ಸ್ಪೀಕರ್ ಹಾಗೂ ಮುಖ್ಯ ಸಂಧಾನಕಾರ ಮೊಹಮ್ಮದ್ ಬಘರ್ ಗಾಲಿಬಾಫ್ ಭಾಗವಹಿಸಿದ್ದರು.
ಈ ನಡುವೆ ಫಾಕ್ಸ್ ನ್ಯೂಸ್ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, "ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ. ನೀವು ನಿಮ್ಮ ದೇಶವನ್ನೇ ಕಳೆದುಕೊಳ್ಳುತ್ತೀರಿ. ನಿಮ್ಮ ದೇಶಕ್ಕೆ ಹಿಂದಿರುಗಲೂ ಸಾಧ್ಯವಾಗುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದರ ಜೊತೆಗೆ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ನಲ್ಲೂ ಟ್ರಂಪ್, ಲೆಬನಾನ್ನ ಹಿಜ್ಬುಲ್ಲಾ ಸಂಘಟನೆಯನ್ನು ನಿಯಂತ್ರಿಸುವಂತೆ ಇರಾನ್ಗೆ ಸೂಚಿಸಿದ್ದು, ಅದನ್ನು ಪಾಲಿಸದಿದ್ದರೆ ಕಳೆದ ವಾರಕ್ಕಿಂತಲೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ಬಾಘರ್ ಘಾಲಿಬಾಫ್, "ಅಮೆರಿಕ ತನ್ನ ಹೇಳಿಕೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ನಮ್ಮ ಸಶಸ್ತ್ರ ಪಡೆಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಲು ಸಿದ್ಧವಾಗಿವೆ. ಅವರು ಏನು ಹೇಳಿದರೂ ನಾವು ಕಾರ್ಯದ ಮೂಲಕ ಉತ್ತರಿಸುತ್ತೇವೆ" ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಹಾರ್ಮುಜ್ ಜಲಸಂಧಿಯ ಸುರಕ್ಷತೆ ಜಾಗತಿಕ ಆರ್ಥಿಕತೆಗೆ ಅತ್ಯಂತ ಮಹತ್ವದ್ದಾಗಿದೆ. ವಿಶ್ವದ ತೈಲ ಸಾಗಣೆಯ ದೊಡ್ಡ ಭಾಗ ಈ ಜಲಮಾರ್ಗದ ಮೂಲಕ ಸಾಗುವುದರಿಂದ, ಯಾವುದೇ ಅಡಚಣೆ ಜಾಗತಿಕ ತೈಲ ಬೆಲೆ ಏರಿಕೆಗೆ ಕಾರಣವಾಗಬಹುದು.
ಮಾತುಕತೆಯ ಮೊದಲ ಸುತ್ತಿನ ಬಳಿಕ ಮಧ್ಯವರ್ತಿಗಳಾದ ಪಾಕಿಸ್ತಾನ ಮತ್ತು ಕತಾರ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಅಪಘಾತ ಅಥವಾ ತಪ್ಪು ತಿಳುವಳಿಕೆ ಉಂಟಾಗದಂತೆ ಅಮೆರಿಕ ಮತ್ತು ಇರಾನ್ ನಡುವೆ ವಿಶೇಷ ಸಂಪರ್ಕ ವ್ಯವಸ್ಥೆ (Communication Line) ಸ್ಥಾಪಿಸಲು ಒಪ್ಪಂದವಾಗಿದೆ ಎಂದು ತಿಳಿಸಿವೆ.
ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸುವುದು ಮತ್ತು ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಮತ್ತಷ್ಟು ವಿಸ್ತರಿಸದಂತೆ ತಡೆಯುವುದು ಈ ಮಾತುಕತೆಯ ಪ್ರಮುಖ ಉದ್ದೇಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



