Hormuz ಜಲಸಂಧಿಯಲ್ಲಿ ಅಮೆರಿಕಾ ಹೊಸ ಷರತ್ತು: ಭದ್ರತೆ ಬೇಕಾದರೆ ಸುಂಕ ಕಟ್ಟಿ, ಇಲ್ಲದಿದ್ದರೆ ನಿಮ್ಮ ಹಡಗುಗಳ ನೀವೇ ರಕ್ಷಿಸಿಕೊಳ್ಳಿ; ಹೊಸ ತೆರಿಗೆ ಬಾಂಬ್ ಸಿಡಿಸಿದ ಟ್ರಂಪ್
ಮಧ್ಯಪ್ರಾಚ್ಯ ರಾಷ್ಟ್ರಗಳ ಭದ್ರತೆಗಾಗಿ ಅಮೆರಿಕಾ ವರ್ಷಗಳಿಂದ ಅಪಾರ ವೆಚ್ಚ ಮಾಡುತ್ತಿದೆ. ನಾವು ನೀಡುತ್ತಿರುವ ಭದ್ರತಾ ಸೇವೆಗೆ ಪ್ರತಿಯಾಗಿ ಈ ಸುಂಕವನ್ನು ವಿಧಿಸಲಾಗುವುದು. ಒಂದು ವೇಳೆ ಬೇರೆ ದೇಶಗಳಿಗೆ ಅಮೆರಿಕದ ಸುಂಕ ಇಷ್ಟವಿಲ್ಲದಿದ್ದರೆ, ತಮ್ಮ ಹಡಗುಗಳಿಗೆ ತಾವೇ ಸ್ವತಃ ಸೈನಿಕ ರಕ್ಷಣೆ ಒದಗಿಸಿಕೊಳ್ಳಲಿ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಜಾಗತಿಕ ಗಮನ ಸೆಳೆದಿದ್ದಾರೆ. ಜಾಗತಿಕ ತೈಲ ಸಾಗಣೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳ ಮೇಲೆ ಅಮೆರಿಕ ಸುಂಕ (ಟೋಲ್) ವಿಧಿಸುವ ಸಾಧ್ಯತೆಯ ಬಗ್ಗೆ ಅವರು ಎಚ್ಚರಿಕೆ ನೀಡಿದ್ದು, ಅಮೆರಿಕದ ಭದ್ರತಾ ಸೇವೆಗಳ ಲಾಭ ಪಡೆಯುವ ರಾಷ್ಟ್ರಗಳು ಅದರ ವೆಚ್ಚವನ್ನೂ ಭರಿಸಬೇಕು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಮೆರಿಕ ಮತ್ತು ಇರಾನ್ ನಡುವಿನ 60 ದಿನಗಳ ಯುದ್ಧ ವಿರಾಮ ಅವಧಿಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಸುಂಕ ವಿಧಿಸಲಾಗುವುದಿಲ್ಲ. ಆದರೆ, ಈ ಅವಧಿ ಮುಗಿದ ಬಳಿಕವೂ ಎರಡೂ ದೇಶಗಳ ನಡುವೆ ಅಂತಿಮ ಒಪ್ಪಂದ ಪೂರ್ಣಗೊಳ್ಳದಿದ್ದರೆ ಪರಿಸ್ಥಿತಿ ಬದಲಾಗಬಹುದು ಎಂದು ಎಚ್ಚರಿಸಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳ ಭದ್ರತೆಗಾಗಿ ಅಮೆರಿಕಾ ವರ್ಷಗಳಿಂದ ಅಪಾರ ವೆಚ್ಚ ಮಾಡುತ್ತಿದೆ. ನಾವು ನೀಡುತ್ತಿರುವ ಭದ್ರತಾ ಸೇವೆಗೆ ಪ್ರತಿಯಾಗಿ ಈ ಸುಂಕವನ್ನು ವಿಧಿಸಲಾಗುವುದು. ಒಂದು ವೇಳೆ ಬೇರೆ ದೇಶಗಳಿಗೆ ಅಮೆರಿಕದ ಸುಂಕ ಇಷ್ಟವಿಲ್ಲದಿದ್ದರೆ, ಅವರು ತಮ್ಮ ಹಡಗುಗಳಿಗೆ ತಾವೇ ಸ್ವತಃ ಸೈನಿಕ ರಕ್ಷಣೆ ಒದಗಿಸಿಕೊಳ್ಳಲಿ” ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವೆ ಈ ವಾರ ಸಹಿ ಮಾಡಲಾದ 14 ಅಂಶಗಳ ತಿಳುವಳಿಕೆ ಒಪ್ಪಂದ (MoU) ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಸಹಿ ಹಾಕಿರುವ ಈ ಒಪ್ಪಂದವು ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ತಗ್ಗಿಸುವುದು, ಹಾರ್ಮುಜ್ ಜಲಸಂಧಿಯ ಸಂಚಾರವನ್ನು ಪುನರಾರಂಭಿಸುವುದು ಹಾಗೂ ಇರಾನ್‌ನ ಅಣು ಕಾರ್ಯಕ್ರಮ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಸಮಗ್ರ ಮಾತುಕತೆ ನಡೆಸುವ ಉದ್ದೇಶ ಹೊಂದಿದೆ.
ಇದೀಗ ಸ್ವಿಟ್ಜರ್ಲೆಂಡ್‌ನಲ್ಲಿ ಅಮೆರಿಕ ಹಾಗೂ ಇರಾನ್ ಪ್ರತಿನಿಧಿಗಳ ನಡುವೆ ಮಹತ್ವದ ಮಾತುಕತೆಗಳು ನಡೆಯುತ್ತಿವೆ. ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್‌ಕಾಫ್ ಮತ್ತು ಜಾರೆಡ್ ಕುಶ್ನರ್ ಈ ಚರ್ಚೆಗಳಲ್ಲಿ ಭಾಗವಹಿಸಲಿದ್ದು, ಇರಾನ್ ಪರವಾಗಿ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿದ್ದಾರೆ. ಮಧ್ಯಸ್ಥಿಕೆ ವಹಿಸುತ್ತಿರುವ ಕತಾರ್ ಕೂಡ ಈ ಮಾತುಕತೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ.
ಈ ಮಧ್ಯೆ ಕದನ ವಿರಾಮ ಜಾರಿಯ ಕುರಿತಾಗಿ ಹೊಸ ಆತಂಕಗಳು ಕೂಡ ಎದುರಾಗಿವೆ. ಅಮೆರಿಕ-ಇರಾನ್ ಒಪ್ಪಂದದ ನಂತರವೂ ಇಸ್ರೇಲ್ ಲೆಬನಾನ್‌ನಲ್ಲಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳನ್ನು ಉಲ್ಲೇಖಿಸಿರುವ ಇರಾನ್, ಹಾರ್ಮುಜ್ ಜಲಸಂಧಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವುದಾಗಿ ಘೋಷಿಸಿದೆ. ಇದು ಶಾಂತಿ ಒಪ್ಪಂದದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಟೆಹ್ರಾನ್ ಆರೋಪಿಸಿದೆ.
ವಿಶ್ವದ ತೈಲ ಸರಬರಾಜಿನ ಸುಮಾರು ಐದನೇ ಒಂದು ಭಾಗ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತದೆ. ಸೌದಿ ಅರೇಬಿಯಾ, ಇರಾಕ್, ಕುವೈತ್, ಯುಎಇ ಹಾಗೂ ಕತಾರ್‌ನಂತಹ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳ ರಫ್ತು ಈ ಮಾರ್ಗದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಹಾರ್ಮುಜ್‌ನಲ್ಲಿ ಯಾವುದೇ ನಿರ್ಬಂಧ ಅಥವಾ ಹೊಸ ಸುಂಕ ಜಾರಿಯಾದರೆ ಜಾಗತಿಕ ತೈಲ ಬೆಲೆ, ಸಾಗಣೆ ವೆಚ್ಚ ಮತ್ತು ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಆದಾಗ್ಯೂ ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ಶನಿವಾರ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಹೆಚ್ಚಳ ಕಂಡುಬಂದಿದೆ. ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರ ಹಾಗೂ ನೌಕಾಯಾನ ಸ್ವಾತಂತ್ರ್ಯವನ್ನು ಖಚಿತಪಡಿಸಲು ಅಮೆರಿಕದ ಪಡೆಗಳು ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿಸಿವೆ ಎಂದು ತಿಳಿಸಲಾಗಿದೆ.
ಈ ನಡುವೆ ಟ್ರಂಪ್ ಅವರ ಹೊಸ ಹೇಳಿಕೆ ಈಗಾಗಲೇ ಜಾಗತಿಕ ರಾಜಕೀಯ ಮತ್ತು ಆರ್ಥಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ತನ್ನ ಭದ್ರತಾ ಪಾತ್ರವನ್ನು ಆರ್ಥಿಕ ಲಾಭದೊಂದಿಗೆ ಜೋಡಿಸಲು ಮುಂದಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ಮುಂದಿನ 60 ದಿನಗಳಲ್ಲಿ ಅಮೆರಿಕ-ಇರಾನ್ ಮಾತುಕತೆ ಯಾವ ದಿಕ್ಕು ಪಡೆಯಲಿದೆ ಎಂಬುದರ ಮೇಲೆ ಹಾರ್ಮುಜ್ ಜಲಸಂಧಿಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



