ಶತ್ರು ಮುಂದೆ ಶರಣಾಗುವ ಪ್ರಶ್ನೆಯೇ ಇಲ್ಲ, ಹತಾಶೆಯಿಂದ ಒಪ್ಪಂದಕ್ಕೆ ಮುಂದಾಗಿದ್ದಾರೆ: ಇರಾನ್ ಪರಮೋಚ್ಛ ನಾಯಕ ಮೊಜ್ತಾಬಾ ಖಮೇನಿ
ಈ ಹಂತದವರೆಗೆ ಮಾತುಕತೆಗಳನ್ನು ತಲುಪಿಸಲು ಇರಾನ್ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ ಈ ಒಪ್ಪಂದಕ್ಕೆ ಹೆಚ್ಚು ಆಸಕ್ತಿ ತೋರಿದ್ದು ಅಮೆರಿಕವೇ.

ಅಮೆರಿಕಾ ಮತ್ತು ಇರಾನ್ ನಡುವೆ ಇತ್ತೀಚೆಗೆ ಸಹಿ ಆಗಿರುವ ತಿಳಿವಳಿಕೆ ಒಪ್ಪಂದಕ್ಕೆ (MoU) ಸಂಬಂಧಿಸಿದಂತೆ ಇರಾನ್‌ನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಒಪ್ಪಂದಕ್ಕೆ ಬರಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಹತಾಶೆಯಿಂದ ಎಲ್ಲಾ ರೀತಿಯ ಒತ್ತಡ ಮತ್ತು ಪ್ರಭಾವಗಳನ್ನು ಬಳಸಿದ್ದಾರೆ” ಎಂದು ಆರೋಪಿಸಿದ ಅವರು, ಇರಾನ್ ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಪ್ರತಿರೋಧ ಶಕ್ತಿಗಳ (Resistance Front) ಹಕ್ಕುಗಳನ್ನು ರಕ್ಷಿಸುವ ಷರತ್ತಿನ ಮೇರೆಗೆ ಮಾತ್ರ ಒಪ್ಪಂದವನ್ನು ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದರು.
ಅಮೆರಿಕಾ ಮತ್ತು ಇರಾನ್ ನಡುವಿನ 14 ಅಂಶಗಳ ಚೌಕಟ್ಟು ಒಪ್ಪಂದಕ್ಕೆ ಸಹಿ ಆದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಖಮೇನಿ, ಈ ಹಂತದವರೆಗೆ ಮಾತುಕತೆಗಳನ್ನು ತಲುಪಿಸಲು ಇರಾನ್ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ ಈ ಒಪ್ಪಂದಕ್ಕೆ ಹೆಚ್ಚು ಆಸಕ್ತಿ ತೋರಿದ್ದು ಅಮೆರಿಕವೇ ಎಂದು ಹೇಳಿದರು.
“ಈ ಹಂತವನ್ನು ತಲುಪಲು ನಮ್ಮ ಅಧಿಕಾರಿಗಳು ಸದುದ್ದೇಶದಿಂದ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ, ಈ ಒಪ್ಪಂದ ಸಾಧ್ಯವಾಗಲು ಅಮೆರಿಕಾ ಅಧ್ಯಕ್ಷರು ಹತಾಶೆಯಿಂದ ಎಲ್ಲ ರೀತಿಯ ಒತ್ತಡದ ತಂತ್ರಗಳನ್ನು ಬಳಸಿದ್ದಾರೆಂದು ತಿಳಿಸಿದರು.
ಒಪ್ಪಂದಕ್ಕೆ ಬೆಂಬಲ ಸೂಚಿಸಿದರೂ, ಭವಿಷ್ಯದಲ್ಲಿ ನಡೆಯಲಿರುವ ನೇರ ಮಾತುಕತೆಗಳನ್ನು ಅಮೆರಿಕದ ನಿಲುವಿನ ಒಪ್ಪಿಗೆಯೆಂದು ಪರಿಗಣಿಸಬಾರದು ಎಂದು ತಿಳಿಸಿದರು.
ಮುಂದೆ ನಡೆಯಲಿರುವ ಮುಖಾಮುಖಿ ಮಾತುಕತೆಗಳು ಶತ್ರುವಿನ ನಿಲುವನ್ನು ನಾವು ಒಪ್ಪಿಕೊಂಡಿದ್ದೇವೆ ಎಂಬುದನ್ನು ಅರ್ಥೈಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಒಪ್ಪಂದದ ಕುರಿತು ಆರಂಭದಲ್ಲಿ ತಮ್ಮ ನಿಲುವು ಭಿನ್ನವಾಗಿತ್ತು. ಆದರೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹಾಗೂ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಸದಸ್ಯರು ನೀಡಿದ ಭರವಸೆಯ ನಂತರ ಒಪ್ಪಿಗೆ ನೀಡಿದ್ದಾಗಿ ತಿಳಿಸಿದರು.
ಇರಾನ್ ಜನರ ಹಕ್ಕುಗಳು ಹಾಗೂ ಪ್ರತಿರೋಧ ಶಕ್ತಿಗಳ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು ಎಂದು ಅಧ್ಯಕ್ಷರು ಹಾಗೂ ಭದ್ರತಾ ಮಂಡಳಿಯ ಸದಸ್ಯರು ನನಗೆ ಭರವಸೆ ನೀಡಿದ್ದರು. ಆ ಜವಾಬ್ದಾರಿಯನ್ನು ಅವರು ಸ್ಪಷ್ಟವಾಗಿ ಸ್ವೀಕರಿಸಿದ್ದರಿಂದ ನಾನು ಅನುಮತಿ ನೀಡಿದೆ,” ಎಂದು ಹೇಳಿದರು.
ಅಮೆರಿಕಾ ಮಾತುಕತೆ ವೇಳೆ ಅತಿಯಾದ ಬೇಡಿಕೆಗಳನ್ನು ಮುಂದಿಟ್ಟರೆ ಅದಕ್ಕೆ ಮಣಿಯುವುದಿಲ್ಲ ಎಂಬ ಭರವಸೆಯನ್ನೂ ಮಾತುಕತೆ ತಂಡ ನೀಡಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಅಮೆರಿಕಾ ಹೆಚ್ಚುವರಿ ಷರತ್ತುಗಳನ್ನು ವಿಧಿಸಲು ಪ್ರಯತ್ನಿಸಿದರೆ ನಾವು ಅದಕ್ಕೆ ಶರಣಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಈ ಒಪ್ಪಂದವನ್ನು ಪ್ರಾದೇಶಿಕ ಹಾಗೂ ಜಾಗತಿಕ ಸ್ಥಿರತೆಗೆ ಮಹತ್ವದ ತಿರುವು ಎಂದು ಬಣ್ಣಿಸಿದ್ದರು.
ಒಪ್ಪಂದದಲ್ಲಿರುವ ಬದ್ಧತೆಗಳನ್ನು ಎಲ್ಲಾ ಪಕ್ಷಗಳು ಪ್ರಾಮಾಣಿಕವಾಗಿ ಜಾರಿಗೆ ತಂದರೆ ಇದು ಶಾಂತಿ ಮತ್ತು ಸ್ಥಿರತೆಯನ್ನು ಬಲಪಡಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನಡುವೆ ವರ್ಚುವಲ್ ಮೂಲಕ ಸಹಿಯಾಗಿರುವ ಈ ಒಪ್ಪಂದದ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಾಗಿದ್ದು, ಉದ್ವಿಗ್ನತೆ ಕಡಿಮೆಗೊಳಿಸುವ ಚೌಕಟ್ಟನ್ನು ರೂಪಿಸಲಾಗಿದೆ. ಜೊತೆಗೆ, ಆರ್ಥಿಕ ನಿರ್ಬಂಧಗಳು, ಭದ್ರತಾ ವ್ಯವಸ್ಥೆಗಳು ಹಾಗೂ ಇರಾನ್‌ನ ಅಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಮಗ್ರ ಅಂತಿಮ ಒಪ್ಪಂದದ ಕುರಿತು ಮುಂದಿನ 60 ದಿನಗಳ ಮಾತುಕತೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



