H-1B ವೀಸಾ ಅರ್ಜಿದಾರರಿಗೆ ಬಿಗ್ ರಿಲೀಫ್: ಟ್ರಂಪ್ ಹೇರಿದ್ದ ಭಾರೀ ಶುಲ್ಕ ರದ್ದು; 'fast-track fee' ಕಾನೂನುಬಾಹಿರ ಎಂದ ಫೆಡರಲ್ ಕೋರ್ಟ್
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಟ್ರಂಪ್ ಆಡಳಿತ ಹೊಸ H-1B ವೀಸಾ ಅರ್ಜಿದಾರರಿಗೆ 1 ಲಕ್ಷ ಡಾಲರ್ ಪಾವತಿಸಿದರೆ ಅರ್ಜಿಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು.

ವಾಷಿಂಗ್ಟನ್: ಅತ್ಯುನ್ನತ ಕೌಶಲ್ಯ ಹೊಂದಿದ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುವ H-1B ವೀಸಾಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿದ್ದ 1 ಲಕ್ಷ ಡಾಲರ್ (ಸುಮಾರು ರೂ.83 ಲಕ್ಷ) ಭಾರೀ ಶುಲ್ಕವನ್ನು ಅಮೆರಿಕಾದ ಫೆಡರಲ್ ಕೋರ್ಟ್ ರದ್ದುಗೊಳಿಸಿದೆ.
ಬೋಸ್ಟನ್‌ನ ಫೆಡರಲ್ ಜಿಲ್ಲಾ ನ್ಯಾಯಾಧೀಶ ಲಿಯೋ ಸೊರೊಕಿನ್ ಸೋಮವಾರ ನೀಡಿದ ಮಹತ್ವದ ತೀರ್ಪಿನಲ್ಲಿ, ಈ ಶುಲ್ಕವನ್ನು "ಕಾನೂನುಬಾಹಿರ ತೆರಿಗೆ" ಎಂದು ಪರಿಗಣಿಸಿ ಅಮಾನ್ಯಗೊಳಿಸಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಟ್ರಂಪ್ ಆಡಳಿತ ಹೊಸ H-1B ವೀಸಾ ಅರ್ಜಿದಾರರಿಗೆ 1 ಲಕ್ಷ ಡಾಲರ್ ಪಾವತಿಸಿದರೆ ಅರ್ಜಿಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಆದರೆ, ಇಂತಹ ತೆರಿಗೆ ಅಥವಾ ಶುಲ್ಕ ವಿಧಿಸುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತೀರ್ಪಿನಲ್ಲಿ ನ್ಯಾಯಾಧೀಶರು, “ಈ 1 ಲಕ್ಷ ಡಾಲರ್ ಪಾವತಿಯ ಸ್ವರೂಪ ಮತ್ತು ಅದರ ಅನುಷ್ಠಾನವನ್ನು ಗಮನಿಸಿದರೆ, ಅದನ್ನು ಯಾವುದೇ ಹೆಸರಿನಲ್ಲಿ ಕರೆಯಲಿ, ಅದು ತೆರಿಗೆಯೇ ಆಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಆದೇಶವನ್ನು ಪ್ರಶ್ನಿಸಿ 20 ಡೆಮಾಕ್ರಟಿಕ್ ಪಕ್ಷದ ರಾಜ್ಯಗಳ ಅಟಾರ್ನಿ ಜನರಲ್‌ಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಟ್ರಂಪ್ ಆಡಳಿತದ ಕ್ರಮವು ಅಮೆರಿಕ ಕಾಂಗ್ರೆಸ್‌ಗೆ ಸೇರಿದ ವಲಸೆ ನೀತಿ ಹಾಗೂ ತೆರಿಗೆ ವಿಧಿಸುವ ಅಧಿಕಾರವನ್ನು ಅತಿಕ್ರಮಿಸಿದೆ ಎಂದು ಹೇಳಿದೆ.
ಇದಕ್ಕೂ ಕೆಲವೇ ದಿನಗಳ ಹಿಂದೆ ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್, 2026ನೇ ಹಣಕಾಸು ವರ್ಷದಲ್ಲಿ 2 ಲಕ್ಷಕ್ಕೂ ಹೆಚ್ಚು H-1B ಅರ್ಜಿದಾರರು ತ್ವರಿತ ಪ್ರಕ್ರಿಯೆಗಾಗಿ 1 ಲಕ್ಷ ಡಾಲರ್ ಶುಲ್ಕ ಪಾವತಿಸಿದ್ದಾರೆ ಎಂದು ಸೆನೆಟ್ ಸಮಿತಿಗೆ ಮಾಹಿತಿ ನೀಡಿದ್ದರು.
ಅವರ ಪ್ರಕಾರ, ಹೆಚ್ಚುವರಿ ಶುಲ್ಕ ಪಾವತಿಸಿದ ಅರ್ಜಿದಾರರ ಅರ್ಜಿಗಳು ಸುಮಾರು 15 ದಿನಗಳಲ್ಲಿ ವಿಲೇವಾರಿಯಾಗುತ್ತಿದ್ದರೆ, ಸಾಮಾನ್ಯ ಪ್ರಕ್ರಿಯೆಯಲ್ಲಿ ಸುಮಾರು 7.5 ತಿಂಗಳುಗಳ ಕಾಲ ಕಾಯಬೇಕಾಗುತ್ತಿತ್ತು.
H-1B ವೀಸಾ ಯೋಜನೆ ಅಮೆರಿಕದ ತಂತ್ರಜ್ಞಾನ ಕಂಪನಿಗಳು ಮತ್ತು ಇತರೆ ಸಂಸ್ಥೆಗಳಿಗೆ ಜಾಗತಿಕ ಮಟ್ಟದ ಪರಿಣಿತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡುವ ಪ್ರಮುಖ ವ್ಯವಸ್ಥೆಯಾಗಿದೆ.
ವಿಶೇಷವಾಗಿ ಭಾರತೀಯ ಐಟಿ ವೃತ್ತಿಪರರು, ವೈದ್ಯರು ಹಾಗೂ ಇತರೆ ಪರಿಣತ ಉದ್ಯೋಗಿಗಳು H-1B ವೀಸಾ ಪಡೆಯುವವರಲ್ಲಿ ಅತಿ ದೊಡ್ಡ ಸಮುದಾಯವಾಗಿದ್ದಾರೆ.
ಈ ತೀರ್ಪಿನಿಂದ ಸಾವಿರಾರು ಭಾರತೀಯ ವೃತ್ತಿಪರರು ಮತ್ತು ಅಮೆರಿಕದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಅತಿ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



