ಮೋದಿ ಮೇಲೆ ಒತ್ತಡ ಹೇರುವುದು ವ್ಯರ್ಥ, ಭಾರತ-ರಷ್ಯಾ ಸಂಬಂಧ ದುರ್ಬಲಗೊಳಿಸುವ ಪಾಶ್ಚಾತ್ಯ ರಾಷ್ಟ್ರಗಳ ತಂತ್ರ ಫಲಿಸುವುದಿಲ್ಲ: ಪುಟಿನ್; Video
ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದ್ದು, ಭಾರತ-ರಷ್ಯಾ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮುಂದಿನ ಕೆಲವು ವರ್ಷಗಳಲ್ಲಿ 100 ಬಿಲಿಯನ್ ಡಾಲರ್ ಗುರಿ ತಲುಪುವ ಸಾಧ್ಯತೆಯಿದೆ.

ಸೇಂಟ್ ಪೀಟರ್ಸ್‌ಬರ್ಗ್: ಭಾರತ ಮತ್ತು ರಷ್ಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ಬಲವಾಗಲಿದ್ದು, ನಮ್ಮ ಸಂಬಂಧ ದುರ್ಬಲಗೊಳಿಸಬೇಕೆಂದು ಪಾಶ್ಚಾತ್ಯ ರಾಷ್ಟ್ರಗಳು ನಡೆಸುತ್ತಿರುವ ತಂತ್ರಗಳು ವಿಫಲವಾಗಲಿದೆ ಎಂದು ರಷ್ಯಾ ಅಧ್ಯಕ ವ್ಲಾದಿಮಿರ್ ಪುಟಿನ್ ಅವರು ಹೇಳಿದ್ದಾರೆ.
ಜಾಗತಿಕ ಸುದ್ದಿಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಪುಟಿನ್, ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದರು.
ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದ್ದು, ಭಾರತ-ರಷ್ಯಾ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮುಂದಿನ ಕೆಲವು ವರ್ಷಗಳಲ್ಲಿ 100 ಬಿಲಿಯನ್ ಡಾಲರ್ ಗುರಿ ತಲುಪುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ಹೇರಿರುವ ಒತ್ತಡದಿಂದ ಯಾವುದೇ ನಕಾರಾತ್ಮಕ ಪರಿಣಾಮ ಉಂಟಾಗಿಲ್ಲ. ವಿಶ್ವದಲ್ಲೇ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ದೇಶವಾದ ಭಾರತದ ಮೇಲೆ ಅಥವಾ ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರುವುದು ಅಂತಾರಾಷ್ಟ್ರೀಯ ಹಾಗೂ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಕಾರಕ ಎಂಬುದನ್ನು ಎಲ್ಲರೂ ಅರಿತುಕೊಂಡಿದ್ದಾರೆ ಎಂದು ಹೇಳಿದರು.
ಒತ್ತಡ ಎಲ್ಲಿಂದ ಬಂದರೂ ಅದು ಫಲಪ್ರದವಾಗುವುದಿಲ್ಲ. ಭಾರತದೊಂದಿಗೆ ನಮ್ಮ ಸಂಬಂಧಗಳ ಮೇಲೆ ಯಾವುದೇ ಕೆಟ್ಟ ಪರಿಣಾಮ ಕಂಡುಬಂದಿಲ್ಲ ಎಂದು ತಿಳಿಸಿದರು.
ಭಾರತದ ಆರ್ಥಿಕ ಪ್ರಗತಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ನಿರಂತರ ಪರಿಶ್ರಮದ ಫಲ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ದೇಶವಾಗಿದ್ದು, ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸುವುದು ರಷ್ಯಾ-ಭಾರತ ಸಂಬಂಧಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ.
"ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯವೆಂದು ಭಾವಿಸುವ ಎಲ್ಲ ರಾಷ್ಟ್ರಗಳೊಂದಿಗೆ ಸಂಬಂಧ ಬೆಳೆಸುತ್ತಿರುವುದು ನಮಗೆ ಸಂತೋಷದ ವಿಷಯ. ಭಾರತ ನಮ್ಮ ವಿಶ್ವಾಸಾರ್ಹ ಪಾಲುದಾರ. ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳು ಐತಿಹಾಸಿಕವಾಗಿದ್ದು, ಭವಿಷ್ಯದಲ್ಲಿಯೂ ಅವು ಮತ್ತಷ್ಟು ವಿಸ್ತರಿಸಲಿವೆ ಎಂದು ಹೇಳಿದರು.
ಇದೇ ವೇಳೆ ಉಕ್ರೇನ್ ಸಂಘರ್ಷದ ಕುರಿತು ಮಾತನಾಡಿದ ಪುಟಿನ್, ಸಮಸ್ಯೆ ಪರಿಹಾರಕ್ಕೆ ತಾವು ಸಿದ್ಧರಾಗಿದ್ದು, ಈಗ ಕೀವ್ ಸರ್ಕಾರವನ್ನು ಮನವೊಲಿಸುವುದು ಮುಖ್ಯವಾಗಿದೆ. ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸುವ ಬದಲು ಉಕ್ರೇನ್‌ನ್ನು ರಾಜಿ ಮಾಡಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಅಧ್ಯಕ್ಷೀಯ ಅವಧಿ ಮುಕ್ತಾಯಗೊಂಡಿದೆ. ಚುನಾವಣೆ ನಡೆಸುವ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಹೇಳಿದರು.
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಕುರಿತು ಪ್ರತಿಕ್ರಿಯಿಸಿ, ಪರಿಸ್ಥಿತಿ ಶಮನಗೊಳಿಸುವ ಯಾವುದೇ ಕ್ರಮಕ್ಕೆ ರಷ್ಯಾ ಬೆಂಬಲ ನೀಡಲು ಸಿದ್ಧವಿದೆ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಕಡಿಮೆ ಮಾಡುವಂತೆ ಅಮೆರಿಕ ಸೇರಿದಂತೆ ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಭಾರತವನ್ನು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಪುಟಿನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



