ವಿದೇಶ

'Please stop, ಭೇಟಿಯಾಗೋಣ' ಎಂದು ಬೇಡಿಕೊಂಡಿದ್ದರು; Iran ಮನವಿಗೆ ಮಣಿದು ದಾಳಿ ನಿಲ್ಲಿಸಿದೆವು: ಡೊನಾಲ್ಡ್ ಟ್ರಂಪ್

ಅವರು ತುಂಬಾ ವಿನಯದಿಂದ ‘ದಯವಿಟ್ಟು ದಾಳಿ ನಿಲ್ಲಿಸಿ, ಭೇಟಿಯಾಗೋಣ’ ಎಂದು ಕೇಳಿಕೊಂಡರು. ಈಗ ನಾವು ಅದೇ ಹಂತದಲ್ಲಿದ್ದೇವೆ. ಏನಾಗುತ್ತದೆ ನೋಡೋಣ. ಒಪ್ಪಂದ ಆಗದಿದ್ದರೆ ಮತ್ತೆ ಅದೇ ರೀತಿಯ ಬಲಿಷ್ಠ ಕ್ರಮಕ್ಕೆ ಮರಳುತ್ತೇವೆ.

'Please stop, ಭೇಟಿಯಾಗೋಣ' ಎಂದು ಬೇಡಿಕೊಂಡಿದ್ದರು; Iran ಮನವಿಗೆ ಮಣಿದು ದಾಳಿ ನಿಲ್ಲಿಸಿದೆವು: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published On :

ವಾಷಿಂಗ್ಟನ್: ಇರಾನ್‌ನ ಮೇಲೆ ಅಮೆರಿಕ ನಡೆಸುತ್ತಿದ್ದ ವೈಮಾನಿಕ ದಾಳಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕಾರಣವೇ ಇರಾನ್‌ನ ಮನವಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

"ದಯವಿಟ್ಟು ದಾಳಿ ನಿಲ್ಲಿಸಿ, ಮಾತುಕತೆ ನಡೆಸೋಣ" ಎಂದು ಇರಾನ್ ಮನವಿ ಮಾಡಿದ್ದರಿಂದಲೇ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಈಗ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಸೋಮವಾರ (ಜುಲೈ 27) ಏರ್ ಫೋರ್ಸ್ ಒನ್ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಕಳೆದ ಎರಡು ವಾರಗಳಿಂದ ಅಮೆರಿಕದ ನಿರಂತರ ದಾಳಿಯ ಬಳಿಕ ಇರಾನ್ ರಾಜತಾಂತ್ರಿಕ ಮಾರ್ಗಗಳ ಮೂಲಕ ಹಾಗೂ ನೇರವಾಗಿ ಮಾತುಕತೆಗೆ ಮುಂದಾಗಿದೆ ಎಂದು ಹೇಳಿದರು.

ಅವರು ತುಂಬಾ ವಿನಯದಿಂದ ‘ದಯವಿಟ್ಟು ದಾಳಿ ನಿಲ್ಲಿಸಿ, ಭೇಟಿಯಾಗೋಣ’ ಎಂದು ಕೇಳಿಕೊಂಡರು. ಈಗ ನಾವು ಅದೇ ಹಂತದಲ್ಲಿದ್ದೇವೆ. ಏನಾಗುತ್ತದೆ ನೋಡೋಣ. ಒಪ್ಪಂದ ಆಗದಿದ್ದರೆ ಮತ್ತೆ ಅದೇ ರೀತಿಯ ಬಲಿಷ್ಠ ಕ್ರಮಕ್ಕೆ ಮರಳುತ್ತೇವೆ" ಎಂದು ಹೇಳಿದರು.

ಇರಾನ್‌ನೊಂದಿಗೆ ಉತ್ತಮ ಮಟ್ಟದ ಮಾತುಕತೆ ನಡೆಯುತ್ತಿದ್ದು, ಅಮೆರಿಕದ ನಿರಂತರ ಸೇನಾ ಒತ್ತಡವೇ ಅವರನ್ನು ಸಂಧಾನಕ್ಕೆ ಬರಲು ಕಾರಣವಾಗಿದೆ. ನಾವು ಈಗ ಇರಾನ್ ಜೊತೆ ಉತ್ತಮ ಮಾತುಕತೆ ನಡೆಸುತ್ತಿದ್ದೇವೆ. ನಾವು ದುರ್ಬಲವಾಗಿದ್ದರೆ ಅವರು ಮಾತುಕತೆಗೆ ಕೇಳುತ್ತಿರಲಿಲ್ಲ. ನಾವು ಅವರಿಗೆ ತೀವ್ರ ಹೊಡೆತ ನೀಡಿದ್ದರಿಂದಲೇ ಅವರು ಭೇಟಿಗೆ ಮುಂದಾಗಿದ್ದಾರೆ ಎಂದು ಹೇಳಿದರು.

ಮಾತುಕತೆ ವಿಫಲವಾದರೆ ಮತ್ತೆ ಸೇನಾ ದಾಳಿ

ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿದ್ದರೂ, ಮಾತುಕತೆ ಫಲಿಸದಿದ್ದರೆ ಮತ್ತೆ ಕಠಿಣ ಸೇನಾ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನಾವು ಇರಾನ್ ಜೊತೆ ಗಂಭೀರ ಮಾತುಕತೆಯಲ್ಲಿದ್ದೇವೆ. ಅದು ವಿಫಲವಾದರೆ ಮತ್ತೆ ಅತ್ಯಂತ ಬಲಿಷ್ಠ ಸೇನಾ ಕಾರ್ಯಾಚರಣೆಗೆ ಮರಳುತ್ತೇವೆ" ಎಂದು ಹೇಳಿದರು.

ಮಾತುಕತೆಗೆ ಎಷ್ಟು ಸಮಯ ನೀಡುತ್ತೀರಿ ಎಂಬ ಪ್ರಶ್ನೆಗೆ, "ಹೆಚ್ಚು ಸಮಯ ಕೊಡುವುದಿಲ್ಲ. ಬೇಗ ಒಪ್ಪಂದವಾಗಬೇಕು, ಇಲ್ಲದಿದ್ದರೆ ಆಗುವುದೇ ಇಲ್ಲ" ಎಂದು ಉತ್ತರಿಸಿದರು.

ಮಧ್ಯಸ್ಥಿಕೆ ವಹಿಸುತ್ತಿರುವ ಹಲವು ರಾಷ್ಟ್ರಗಳು ಹಾಗೂ ಪ್ರಾದೇಶಿಕ ಸರ್ಕಾರಗಳು ದಾಳಿ ಮುಂದುವರಿಸದಂತೆ ಮನವಿ ಮಾಡಿದ್ದರಿಂದಲೇ ತಾವು ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡೆವು. ಇರಾನ್ ಜೊತೆ ವ್ಯವಹರಿಸುತ್ತಿರುವ ಎಲ್ಲರೂ ‘ಈಗ ದಾಳಿ ಮಾಡಬೇಡಿ’ ಎಂದು ನನ್ನನ್ನು ಕೇಳಿಕೊಂಡರು. ಇದರಿಂದ ಏನೂ ನಷ್ಟವಾಗಿಲ್ಲ, ಲಾಭವೂ ಕಳೆದುಕೊಂಡಿಲ್ಲ" ಎಂದು ಹೇಳಿದರು.

"ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರಗಳಿವೆ. ಹಿಂದಿನ ಜೋ ಬೈಡನ್ ಆಡಳಿತ ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರ ಕಳುಹಿಸಿತ್ತು. ಈಗ ನಾವು ಮತ್ತೆ ನಮ್ಮ ಸಂಗ್ರಹವನ್ನು ಹೆಚ್ಚಿಸುತ್ತಿದ್ದೇವೆ. ವಿಶೇಷವಾಗಿ ಪ್ಯಾಟ್ರಿಯಟ್ ಕ್ಷಿಪಣಿ ವ್ಯವಸ್ಥೆಗಳ ಉತ್ಪಾದನೆ ನಡೆಯುತ್ತಿದೆ. ಮಾತುಕತೆಯ ಫಲಿತಾಂಶವೇ ಮುಂದಿನ ಕ್ರಮವನ್ನು ನಿರ್ಧರಿಸಲಿದೆ. ಒಪ್ಪಂದ ಸಾಧ್ಯವಾಗದಿದ್ದರೆ ಅಮೆರಿಕ ಮತ್ತೆ ಸೇನಾ ಕಾರ್ಯಾಚರಣೆ ಆರಂಭಿಸಲಿದೆ ಎಂದು ಪುನರುಚ್ಚರಿಸಿದರು.

ಮಾತುಕತೆಯ ಪ್ರಮುಖ ಅಂಶಗಳಲ್ಲಿ ಹಾರ್ಮುಜ್ ಜಲಸಂಧಿಯನ್ನು ಮರುತೆರೆಯುವುದು ಹಾಗೂ ಇರಾನ್‌ನೊಂದಿಗೆ ಅಣು ಒಪ್ಪಂದದ ಮಾತುಕತೆಯನ್ನು ಪುನರಾರಂಭಿಸುವುದು ಸೇರಿದೆ.

ಈ ಮಾತುಕತೆಯಲ್ಲಿ ಇರಾನ್, ಒಮಾನ್, ಕತಾರ್, ಪಾಕಿಸ್ತಾನ, ಈಜಿಪ್ಟ್, ಜೊತೆಗೆ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್‌ಕಾಫ್ ಹಾಗೂ ಹಿರಿಯ ಸಲಹೆಗಾರ ಜಾರೆಡ್ ಕುಶ್ನರ್ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ದಾಳಿಯಿಂದ ಸಂಘರ್ಷ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಜಂಟಿ ಸೇನಾ ಮುಖ್ಯಸ್ಥರ ಅಧ್ಯಕ್ಷ ಜನರಲ್ ಡ್ಯಾನ್ ಕೇನ್ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಇದೇ ವೇಳೆ, ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್, ಹಾರ್ಮುಜ್ ಜಲಸಂಧಿ ಸುತ್ತಲಿನ ಬಾಂಬ್ ದಾಳಿಯನ್ನು ಸ್ಥಗಿತಗೊಳಿಸುವಂತೆ ಶಿಫಾರಸು ಮಾಡಿದ್ದರು. ಕಾರ್ಯಾಚರಣೆ ತನ್ನ ಗರಿಷ್ಠ ಪರಿಣಾಮ ತಲುಪಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.