ವಿದೇಶ

ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಜೊತೆ ಪ್ರಾಂಬನನ್ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ; Video

ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರೊಂದಿಗೆ ಯೋಗ್ಯಕಾರ್ತದಿಂದ ಪ್ರಾಂಬನನ್ ದೇವಾಲಯದತ್ತ ಪ್ರಯಾಣಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಜೊತೆ ಪ್ರಾಂಬನನ್ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ; Video
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಜೊತೆ ವಿಮಾನದಲ್ಲಿ
Published On :

ಜಕಾರ್ತಾ/ಯೋಗ್ಯಕಾರ್ತಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬುಧವಾರ ಇಂಡೋನೇಷ್ಯಾದ ಯೋಗ್ಯಕಾರ್ತದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಭವ್ಯ ಪ್ರಾಂಬನನ್ ದೇವಾಲಯಕ್ಕೆ ತೆರಳುವ ವೇಳೆ ಅದರ ವೈಮಾನಿಕ ದೃಶ್ಯವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರೊಂದಿಗೆ ಯೋಗ್ಯಕಾರ್ತದಿಂದ ಪ್ರಾಂಬನನ್ ದೇವಾಲಯದತ್ತ ಪ್ರಯಾಣಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ನಿನ್ನೆ ಪ್ರಧಾನಿ ಮೋದಿ, ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಯೋಗ್ಯಕಾರ್ತದ ಪ್ರಾಂಬನನ್ ದೇವಾಲಯದ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯಕ್ಕೆ ಭಾರತ ಸಹಕಾರ ನೀಡುವುದಾಗಿ ಘೋಷಿಸಿದ್ದರು. ಈ ಮೂಲಕ ಭಾರತ ಮತ್ತು ಇಂಡೋನೇಷ್ಯಾ ನಡುವಿನ ಆಳವಾದ ನಾಗರಿಕತೆ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತೊಮ್ಮೆ ಪುನರುಚ್ಚರಿಸಿದರು.

Story image

ಜಕಾರ್ತಾದ ಇಸ್ತಾನಾ ಮರ್ಡೆಕಾ ಅರಮನೆಯಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರೊಂದಿಗೆ ನಡೆದ ನಿಯೋಗ ಮಟ್ಟದ ಮಾತುಕತೆಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಇಂದು ಯೋಗ್ಯಕಾರ್ತದಲ್ಲಿ ಉಭಯ ನಾಯಕರು ದೇವಾಲಯದ ಸಂರಕ್ಷಣಾ ಯೋಜನೆಗೆ ಜಂಟಿಯಾಗಿ ಚಾಲನೆ ನೀಡುವುದಾಗಿ ಘೋಷಿಸಿದರು.

ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಯೋಗ್ಯಕಾರ್ತದಲ್ಲಿರುವ ಪ್ರಾಂಬನನ್ ದೇವಾಲಯದ ಸಂರಕ್ಷಣಾ ಯೋಜನೆಗೆ ಚಾಲನೆ ನೀಡುವ ಗೌರವ ನನಗೆ ಸಿಗಲಿದೆ. ಸಾವಿರ ವರ್ಷಗಳಿಗೂ ಹಳೆಯದಾದ ಈ ದೇವಾಲಯವು ಭಾರತ ಮತ್ತು ಇಂಡೋನೇಷ್ಯಾದ ಹಂಚಿಕೊಂಡಿರುವ ಸಾಂಸ್ಕೃತಿಕ ಪರಂಪರೆಯ ಶಾಶ್ವತ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸಂರಕ್ಷಣಾ ಯೋಜನೆಯು ಭಾರತದ 'ಆ್ಯಕ್ಟ್ ಈಸ್ಟ್' ನೀತಿ ಹಾಗೂ ಸಾಂಸ್ಕೃತಿಕ ರಾಜತಾಂತ್ರಿಕತೆಯ ಭಾಗವಾಗಿದ್ದು, ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ ಐತಿಹಾಸಿಕ ಮತ್ತು ಜನ-ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

Story image

ಈ ಯೋಜನೆಯಡಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಇಂಡೋನೇಷ್ಯಾದ ಅಧಿಕಾರಿಗಳೊಂದಿಗೆ ಸೇರಿ, ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಪ್ರಾಂಬನನ್ ದೇವಾಲಯ ಸಮುಚ್ಚಯದೊಳಗಿನ ಹಲವು ಸಣ್ಣ ದೇವಾಲಯಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯ ಕೈಗೊಳ್ಳಲಿದೆ.

ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕಾರ್ತ ಸಮೀಪವಿರುವ ಪ್ರಾಂಬನನ್ ದೇಶದ ಅತಿದೊಡ್ಡ ಹಿಂದೂ ದೇವಾಲಯ ಸಮುಚ್ಚಯವಾಗಿದ್ದು, ಇದು ಕ್ರಿ.ಶ. 9ನೇ ಶತಮಾನಕ್ಕೆ ಸೇರಿದೆ. ಭಗವಾನ್ ಶಿವ, ವಿಷ್ಣು ಮತ್ತು ಬ್ರಹ್ಮ ಅವರಿಗೆ ಸಮರ್ಪಿತವಾಗಿರುವ ಈ ದೇವಾಲಯ ಸಮುಚ್ಚಯವು ಮೂಲತಃ ಮೂರು ಸಾಂದ್ರ ಚೌಕಗಳ ವಿನ್ಯಾಸದಲ್ಲಿ ನಿರ್ಮಿಸಲಾದ 240 ದೇವಾಲಯಗಳನ್ನು ಒಳಗೊಂಡಿತ್ತು.

Story image

ಇದರಲ್ಲಿನ ಅತ್ಯಂತ ಪ್ರಮುಖ ದೇವಾಲಯವೆಂದರೆ 47 ಮೀಟರ್ ಎತ್ತರದ ಶಿವ ದೇವಾಲಯ. ಇದರ ಉತ್ತರ ಭಾಗದಲ್ಲಿ ಬ್ರಹ್ಮ ದೇವಾಲಯ ಮತ್ತು ದಕ್ಷಿಣ ಭಾಗದಲ್ಲಿ ವಿಷ್ಣು ದೇವಾಲಯಗಳಿವೆ. ಇಂಡೋನೇಷ್ಯಾದ ರಾಮಾಯಣ ಕಥೆಯ ಶಿಲ್ಪಕಲೆಗಳನ್ನು ಒಳಗೊಂಡಿರುವ ಈ ದೇವಾಲಯವು ಆಗ್ನೇಯ ಏಷ್ಯಾದ ಶ್ರೇಷ್ಠ ಸಾಂಪ್ರದಾಯಿಕ ಹಿಂದೂ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.

ಇಂಡೋನೇಷ್ಯಾ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿ, ಪ್ರಾಂಬನನ್ ದೇವಾಲಯ ಸಮುಚ್ಚಯವನ್ನು ಭಾರತ ಮತ್ತು ಇಂಡೋನೇಷ್ಯಾವನ್ನು ಸಾವಿರ ವರ್ಷಗಳಿಂದ ಜೋಡಿಸಿರುವ ಆಳವಾದ ಸಾಂಸ್ಕೃತಿಕ ಹಾಗೂ ನಾಗರಿಕತೆಯ ಸಂಬಂಧದ ಮತ್ತೊಂದು ಅದ್ಭುತ ಸಾಕ್ಷ್ಯವೆಂದು ಬಣ್ಣಿಸಿದ್ದರು.

Story image

ಶತಮಾನಗಳ ಅವಧಿಯಲ್ಲಿ ಭೂಕಂಪ, ಜ್ವಾಲಾಮುಖಿ ಸ್ಫೋಟಗಳು ಹಾಗೂ ರಾಜಕೀಯ ಅಶಾಂತಿಯಿಂದ ಈ ದೇವಾಲಯಗಳು ತೀವ್ರ ಹಾನಿಗೊಳಗಾಗಿದ್ದವು. 2006ರ ಜಾವಾ ಭೂಕಂಪವು ಹೆಚ್ಚಿನ ಹಾನಿ ಉಂಟುಮಾಡಿತ್ತು. 1918ರಿಂದ ಸಾಂಪ್ರದಾಯಿಕ ಕಲ್ಲು ಜೋಡಣೆ ತಂತ್ರಜ್ಞಾನ ಮತ್ತು ಆಧುನಿಕ ಎಂಜಿನಿಯರಿಂಗ್ ವಿಧಾನಗಳ ಮೂಲಕ ಪುನರುಜ್ಜೀವನ ಕಾರ್ಯ ನಡೆಯುತ್ತಿದ್ದರೂ, ಸಮುಚ್ಚಯದ ಹಲವು ದೇವಾಲಯಗಳಿಗೆ ಇನ್ನೂ ಸಂರಕ್ಷಣೆಯ ಅಗತ್ಯವಿದೆ.

ಯುನೆಸ್ಕೋ, ಇಂಡೋನೇಷ್ಯಾದ ಶೈವ ಸಂಪ್ರದಾಯದ ಶ್ರೇಷ್ಠ ಕಲಾ ಮತ್ತು ವಾಸ್ತುಶಿಲ್ಪದ ಪ್ರತೀಕವೆಂದು ಪರಿಗಣಿಸಿ ಪ್ರಾಂಬನನ್ ದೇವಾಲಯ ಸಮುಚ್ಚಯವನ್ನು ವಿಶ್ವ ಪರಂಪರೆ ತಾಣವೆಂದು ಗುರುತಿಸಿದೆ. 1998ರಲ್ಲಿ ಇದನ್ನು ಇಂಡೋನೇಷ್ಯಾದ ರಾಷ್ಟ್ರೀಯ ಸಾಂಸ್ಕೃತಿಕ ಆಸ್ತಿಯಾಗಿಯೂ ಘೋಷಿಸಲಾಯಿತು.

ಪ್ರಧಾನಿಯವರ ಇಂದಿನ ಪ್ರವಾಸದ ವೇಳೆ ಘೋಷಿಸಲಾದ ಮತ್ತೊಂದು ಮಹತ್ವದ ಸಾಂಸ್ಕೃತಿಕ ಉಪಕ್ರಮವಾಗಿ, ರವೀಂದ್ರನಾಥ ಟ್ಯಾಗೋರ್ ಅವರ ಇಂಡೋನೇಷ್ಯಾ ಭೇಟಿಯ ಶತಮಾನೋತ್ಸವದ ಅಂಗವಾಗಿ ಮುಂದಿನ ವರ್ಷವನ್ನು 'ಟ್ಯಾಗೋರ್–ದೇವಂತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಾಜತಾಂತ್ರಿಕ ವರ್ಷದಾಗಿ' ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಆಚರಿಸಲಿವೆ ಎಂದು.

ಈ ಉಪಕ್ರಮವು ಗುರುದೇವ ರವೀಂದ್ರನಾಥ ಟ್ಯಾಗೋರ್ ಹಾಗೂ ಇಂಡೋನೇಷ್ಯಾದ ಪ್ರಥಮ ಶಿಕ್ಷಣ ಸಚಿವ ಕಿ ಹಜರ್ ದೇವಂತರ ಅವರ ನಡುವಿನ ಬೌದ್ಧಿಕ ಪರಂಪರೆ ಮತ್ತು ಶಿಕ್ಷಣ ಕ್ಷೇತ್ರದ ಶಾಶ್ವತ ಸಂಬಂಧವನ್ನು ಸ್ಮರಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.