"ಒಂದೇ ಶಾಟ್‌ನಲ್ಲಿ ಇರಾನ್‌ನ ಎಲ್ಲಾ ನಾಯಕರು ಖತಂ ಆಗುತ್ತಿದ್ದರು"... ಆದರೆ, ಅಮೆರಿಕಾ ಸುಮ್ಮನಿರುವುದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಟ್ರಂಪ್..!
ಅವರೆಲ್ಲರೂ ಒಂದೇ ಸ್ಥಳದಲ್ಲಿದ್ದರು. ಒಂದೇ ಹೊಡೆತದಲ್ಲಿ ಎಲ್ಲರನ್ನೂ ಮುಗಿಸಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ. ಏಕೆಂದರೆ ನಂತರ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ.

ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ಸಂಸ್ಕಾರದ ವೇಳೆ ಅಲ್ಲಿ ನೆರೆದಿದ್ದ ಇಡೀ ಇರಾನ್ ನಾಯಕತ್ವವನ್ನು ಒಂದೇ ದಾಳಿಯಲ್ಲಿ ("ಒನ್ ಶಾಟ್") ನಿರ್ನಾಮ ಮಾಡುವ ಅವಕಾಶ ಅಮೆರಿಕಕ್ಕಿತ್ತು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದು, ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇರಾನ್‌ನ ಮಾಜಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ದೇಶದ ಬಹುತೇಕ ಉನ್ನತ ನಾಯಕರು ಒಂದೇ ಸ್ಥಳದಲ್ಲಿ ಸೇರಿದ್ದನ್ನು ಉಲ್ಲೇಖಿಸಿದ ಟ್ರಂಪ್, ಅಮೆರಿಕ ಬಯಸಿದ್ದರೆ ಅವರನ್ನು "ಒಂದೇ ಹೊಡೆತದಲ್ಲಿ ನಿರ್ಮೂಲನೆ ಮಾಡಬಹುದಿತ್ತುೃ. ಆದರೆ, ಅಂತಹ ಕ್ರಮ ಕೈಗೊಳ್ಳುವ ಉದ್ದೇಶ ಅಮೆರಿಕಕ್ಕಿಲ್ಲ. ಇರಾನ್‌ನೊಂದಿಗೆ ನಡೆಯುತ್ತಿರುವ ಮಾತುಕತೆಗಳನ್ನು ಮುಂದುವರಿಸುವುದು ತಮ್ಮ ಆದ್ಯತೆ ಎಂದು ಹೇಳಿದ್ದಾರೆ.
ಅಮೆರಿಕದ Axios ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ಅವರೆಲ್ಲರೂ ಒಂದೇ ಸ್ಥಳದಲ್ಲಿದ್ದರು. ಒಂದೇ ಹೊಡೆತದಲ್ಲಿ ಎಲ್ಲರನ್ನೂ ಮುಗಿಸಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ. ಏಕೆಂದರೆ ನಂತರ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ" ಎಂದು ತಿಳಿಸಿದ್ದಾರೆ.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಂತರರಾಷ್ಟ್ರೀಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇದಷ್ಟೇ ಅಲ್ಲದೆ, ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಕಣ್ಣೀರು ಹಾಕುತ್ತಿರುವ ದೃಶ್ಯಗಳ ಬಗ್ಗೆ ಕೂಡ ಟ್ರಂಪ್ ವ್ಯಂಗ್ಯವಾಡಿದ್ದಾರೆ.
"ಜನರು ಖಮೇನಿಯನ್ನು ದ್ವೇಷಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಅನೇಕರು ಅಳುತ್ತಿರುವುದನ್ನು ನೋಡಿದೆ. ಬಹುಶಃ ಅದು ನಕಲಿ ಕಣ್ಣೀರು ಇರಬಹುದು" ಎಂದು ಹೇಳಿದ್ದಾರೆ.
ಈ ಮಾತುಗಳು ಇರಾನ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್‌ಗೆ ತಿರುಗೇಟು ನೀಡಿದೆ.
"ನಿಮಗೆ ನಾಗರಿಕತೆ ಇಲ್ಲ, ಇತಿಹಾಸ ಇಲ್ಲ, ಗೌರವವೂ ಇಲ್ಲ. ಆದ್ದರಿಂದ ಇಂತಹ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದೆ.
ಇದಕ್ಕೂ ಮೊದಲು ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯಾದ 'ಫೋರ್ಥ್ ಆಫ್ ಜುಲೈ' ಕಾರ್ಯಕ್ರಮದ ಮುನ್ನ ಮಾತನಾಡಿದ್ದ ಟ್ರಂಪ್, ಇರಾನ್ ವಿರುದ್ಧ ಕಿಡಿಕಾರಿದ್ದರು.
"ನಾವು ಇರಾನ್‌ಗೆ ಭಾರೀ ಹೊಡೆತ ನೀಡಿದ್ದೇವೆ. ಈಗ ಅವರು ಒಪ್ಪಂದಕ್ಕಾಗಿ ಕಾತರರಾಗಿದ್ದಾರೆ. ಅಂತ್ಯಕ್ರಿಯೆ ನಡೆಸಿಕೊಳ್ಳಲು ನಾವು ಒಂದು ವಾರ ಸಮಯ ನೀಡಿದ್ದೇವೆ. ಏಕೆಂದರೆ ನಾವು ಒಳ್ಳೆಯವರಾಗಿದ್ದೇವೆ" ಎಂದು ಹೇಳುವ ಮೂಲಕ ಇರಾನ್ ಅನ್ನು ಲೇವಡಿ ಮಾಡಿದ್ದರು.
ಈ ಹೇಳಿಕೆಗಳ ನಡುವೆ ಇರಾನ್ ಕೂಡ ಅಮೆರಿಕ ಮತ್ತು ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದೆ. ಇರಾನ್‌ನ ಖತಮ್ ಅಲ್-ಅಂಬಿಯಾ ಕೇಂದ್ರ ಕಮಾಂಡ್‌ನ ಮುಖ್ಯಸ್ಥ ಅಲಿ ಅಬ್ದೊಲ್ಲಾಹಿ, "ಇರಾನ್ ವಿರುದ್ಧ ಯಾವುದೇ ತಪ್ಪು ಲೆಕ್ಕಾಚಾರ ಮಾಡಬೇಡಿ. ನಮ್ಮ ದೇಶದ ಮೇಲೆ ಯಾವುದೇ ರೀತಿಯ ದಾಳಿ ನಡೆದರೆ, ನಮ್ಮ ಸಶಸ್ತ್ರ ಪಡೆಗಳು ಅತ್ಯಂತ ಕಠಿಣ ಹಾಗೂ ನಿರ್ಣಾಯಕ ಪ್ರತೀಕಾರ ತೀರಿಸಲಿವೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದರ ಜೊತೆಗೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್‌ಚಿಯೂ ಇದೇ ರೀತಿಯ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ಜನರು ಅಥವಾ ದೇಶದ ನಾಯಕತ್ವದ ವಿರುದ್ಧ ಯಾವುದೇ ಬೆದರಿಕೆ ಅಥವಾ ದಾಳಿ ನಡೆದರೆ, ತಕ್ಷಣವೇ ಪ್ರಬಲ ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿದ್ದಾರೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು, ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ "ಸಾವಿನ ಅಂಚಿನಲ್ಲಿದ್ದಾರೆ" ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಅರಾಕ್‌ಚಿ ಈ ಎಚ್ಚರಿಕೆ ನೀಡಿದ್ದರು.
ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಮೆರವಣಿಗೆ ಜುಲೈ 3ರಂದು ಟೆಹ್ರಾನ್‌ನಲ್ಲಿ ಆರಂಭವಾಗಿದ್ದು, ಜುಲೈ 9ರಂದು ಅವರ ಹುಟ್ಟೂರು ಮಶ್ಹದ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಈ ಅವಧಿಯಲ್ಲಿ ಕೊಮ್ ಮತ್ತು ಇರಾಕ್‌ನಲ್ಲೂ ವಿಶೇಷ ಶ್ರದ್ಧಾಂಜಲಿ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಸಾವಿರಾರು ಜನರು ಹಾಗೂ ಇರಾನ್‌ನ ರಾಜಕೀಯ, ಧಾರ್ಮಿಕ ಮತ್ತು ಸೇನಾ ನಾಯಕರು ಪಾಲ್ಗೊಳ್ಳುತ್ತಿದ್ದಾರೆ.
ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳು ಈಗಾಗಲೇ ಉದ್ವಿಗ್ನವಾಗಿರುವ ಅಮೆರಿಕ–ಇರಾನ್ ಸಂಬಂಧಗಳಿಗೆ ಮತ್ತಷ್ಟು ತೀವ್ರತೆ ನೀಡುವ ಸಾಧ್ಯತೆ ಇದೆ. ಒಂದೆಡೆ ಮಾತುಕತೆಗೆ ಅವಕಾಶವಿದೆ ಎಂದು ಅಮೆರಿಕ ಹೇಳುತ್ತಿದ್ದರೆ, ಮತ್ತೊಂದೆಡೆ ಇಂತಹ ಕಠಿಣ ಮತ್ತು ಪ್ರಚೋದನಕಾರಿ ಹೇಳಿಕೆಗಳು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಂತರರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



