Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ; ವಿಶೇಷ ಟ್ರೇಡ್ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ; ರಫ್ತುದಾರರಲ್ಲಿ ಆತಂಕ
ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಭಾರತೀಯ ರಫ್ತುದಾರರಿಗೆ ಇನ್ನು ಮುಂದೆ ವಿಶೇಷ ಸ್ಥಾನಮಾನ ಇರುವುದಿಲ್ಲ. ಹೀಗಾಗಿ ನೆರೆಯ ಪಾಕಿಸ್ತಾನದ ರಫ್ತುದಾರರೊಂದಿಗೆ ನೇರ ಸ್ಪರ್ಧೆ ನಡೆಸಬೇಕಾಗುತ್ತದೆ.

ಚಂಡೀಗಢ: ಬಾಸ್ಮತಿ ಅಕ್ಕಿಯ ಮೇಲೆ ಭಾರತಕ್ಕೆ ವಿಶೇಷ ಹಕ್ಕು ಕಲ್ಪಿಸುವ ಪ್ರಯತ್ನಕ್ಕೆ ಆಸ್ಟ್ರೇಲಿಯಾದಲ್ಲಿ ಹಿನ್ನಡೆಯಾಗಿದೆ.
ಬಾಸ್ಮತಿ ಅಕ್ಕಿಗೆ ಭಾರತಕ್ಕೆ ಮಾತ್ರ ವಿಶೇಷ ಪ್ರಮಾಣೀಕರಣ ಟ್ರೇಡ್ಮಾರ್ಕ್ ನೀಡಬೇಕು ಎಂಬ ಎಪಿಇಡಿಎ ಮನವಿಯನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ತಿರಸ್ಕರಿಸಿದ್ದು, ಇದು ಭಾರತೀಯ ಬಾಸ್ಮತಿ ರಫ್ತುದಾರರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಈ ತೀರ್ಪಿನಿಂದ ಹರಿಯಾಣ ಮತ್ತು ಪಂಜಾಬ್ನ ಬಾಸ್ಮತಿ ರಫ್ತುದಾರರಿಗೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ. ದೇಶದ ಒಟ್ಟು ಬಾಸ್ಮತಿ ರಫ್ತಿನಲ್ಲಿ ಪಂಜಾಬ್ವೊಂದೇ ಸುಮಾರು ಶೇ.40ರಷ್ಟು ಪಾಲು ಹೊಂದಿದೆ.
ಹಾರ್ಮುಜ್ ಜಲಸಂಧಿ ಮೂಲಕ ಸರಕು ಸಾಗಣೆಯ ಕುರಿತು ಅನಿಶ್ಚಿತತೆ ಎದುರಾಗಿರುವ ಹಿನ್ನೆಲೆಯಲ್ಲಿ, ಈ ಎರಡೂ ರಾಜ್ಯಗಳ ಬಾಸ್ಮತಿ ರಫ್ತುದಾರರು ಪರ್ಯಾಯ ವಿದೇಶಿ ಮಾರುಕಟ್ಟೆಗಳನ್ನು ವಿಸ್ತರಿಸಲು ಮುಂದಾಗಿದ್ದ ಸಮಯದಲ್ಲೇ ಆಸ್ಟ್ರೇಲಿಯಾ ಕೋರ್ಟ್ನ ಈ ತೀರ್ಪು ಹೊರಬಿದ್ದಿದೆ.
ಬಾಸ್ಮತಿ ರಫ್ತುದಾರರ ಸಂಘದ ಉಪಾಧ್ಯಕ್ಷ ರಂಜಿತ್ ಸಿಂಗ್ ಜೋಸ್ಸನ್ ಮಾತನಾಡಿ, ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಭಾರತೀಯ ರಫ್ತುದಾರರಿಗೆ ಇನ್ನು ಮುಂದೆ ವಿಶೇಷ ಸ್ಥಾನಮಾನ ಇರುವುದಿಲ್ಲ. ಹೀಗಾಗಿ ನೆರೆಯ ಪಾಕಿಸ್ತಾನದ ರಫ್ತುದಾರರೊಂದಿಗೆ ನೇರ ಸ್ಪರ್ಧೆ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇತ್ತ, ಆಸ್ಟ್ರೇಲಿಯಾ ಕೋರ್ಟ್ನ ತೀರ್ಪನ್ನು ಪಾಕಿಸ್ತಾನ ಸ್ವಾಗತಿಸಿದೆ.
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA), ಭಾರತದಲ್ಲಿ ಬೆಳೆಯುವ ಬಾಸ್ಮತಿ ಅಕ್ಕಿಗೆ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಇದೆ. ಹೀಗಾಗಿ ಆಸ್ಟ್ರೇಲಿಯಾದಲ್ಲೂ ಅದಕ್ಕೆ ಪ್ರಮಾಣೀಕರಣ ಟ್ರೇಡ್ಮಾರ್ಕ್ ಮಾನ್ಯತೆ ನೀಡಬೇಕು ಎಂದು ವಾದಿಸಿತ್ತು.
ಆದರೆ, ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆನಡಾದಲ್ಲಿ ಭೌಗೋಳಿಕ ಸೂಚ್ಯಂಕದ ಮಾನ್ಯತೆ ‘ಷಾಂಪೇನ್’ಗೆ ಮಾತ್ರ ಸೀಮಿತವಾಗಿದೆ ಎಂಬ ಅಂಶವನ್ನು ಕೋರ್ಟ್ ಪರಿಗಣಿಸಿದೆ.
ಆಸ್ಟ್ರೇಲಿಯಾ ಅಧಿಕಾರಿಗಳ ಅಭಿಪ್ರಾಯದ ಪ್ರಕಾರ, ಗ್ರಾಹಕರು ‘ಬಾಸ್ಮತಿ’ ಎಂಬ ಪದವನ್ನು ಒಂದೇ ದೇಶದ ಪ್ರಮಾಣೀಕರಣಕ್ಕೆ ಸಂಬಂಧಿಸಿದ ಗುರುತಾಗಿ ನೋಡುವುದಿಲ್ಲ. ಬದಲಾಗಿ, ವಿಶಾಲ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿದ ನಿರ್ದಿಷ್ಟ ಅಕ್ಕಿಯ ವಿಧವೆಂದು ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ.
ಆಗಸ್ಟ್ 11ರಂದು ನ್ಯಾಯಮೂರ್ತಿ ಡೌಲಿಂಗ್ ನೀಡಿದ ತೀರ್ಪಿನಲ್ಲಿ, “ಬಾಸ್ಮತಿ ಅಕ್ಕಿಯನ್ನು ಹಿಮಾಲಯದ ತಪ್ಪಲಿನಲ್ಲಿರುವ ಇಂಡೋ-ಗಂಗಾ ಬಯಲು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಪ್ರದೇಶದಲ್ಲಿ ಉತ್ತರ ಭಾರತದ ಕೆಲವು ಭಾಗಗಳು ಮತ್ತು ಪಾಕಿಸ್ತಾನವೂ ಸೇರಿವೆ. ಪ್ರಮಾಣೀಕೃತ ಎಪಿಇಡಿಎ ಬಾಸ್ಮತಿ ಮತ್ತು ಇತರ ಬಾಸ್ಮತಿ ಅಕ್ಕಿಗಳ ನಡುವಿನ ವ್ಯತ್ಯಾಸವನ್ನು ‘ಬಾಸ್ಮತಿ’ ಎಂಬ ಪದ ಮಾತ್ರ ಸೂಚಿಸುವುದಿಲ್ಲ ಎಂದು ತಿಳಿಸಲಾಗಿದೆ.
ಆಸ್ಟ್ರೇಲಿಯಾದ ಟ್ರೇಡ್ಮಾರ್ಕ್ಸ್ ಕಾಯ್ದೆ 1995ರ ಸೆಕ್ಷನ್ 177(2)ರ ಅಂಶಗಳನ್ನು ಕೋರ್ಟ್ ಪರಿಗಣಿಸಿದೆ. ಪ್ರಮಾಣೀಕರಣ ಟ್ರೇಡ್ಮಾರ್ಕ್ ಹೊಂದಿರುವ ಉತ್ಪನ್ನಗಳು ನಿರ್ದಿಷ್ಟ ಮಾನದಂಡ ಅಥವಾ ಗುಣಲಕ್ಷಣಗಳನ್ನು ಪೂರೈಸುತ್ತವೆಯೇ ಎಂಬುದನ್ನು ಈ ನಿಯಮಗಳು ನಿರ್ಧರಿಸುತ್ತವೆ.
ಆಸ್ಟ್ರೇಲಿಯಾದಲ್ಲಿ ಬಾಸ್ಮತಿಗೆ ವಿಶೇಷ ಟ್ರೇಡ್ಮಾರ್ಕ್ ಪಡೆಯಲು ಎಪಿಇಡಿಎ 2019ರಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿತ್ತು. 1988ರಿಂದ 2018ರವರೆಗೆ ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಭಾರತೀಯ ಬಾಸ್ಮತಿ ಅಕ್ಕಿಯ ಗಮನಾರ್ಹ ಪ್ರಮಾಣದ ಮಾರಾಟವಾಗಿರುವುದನ್ನು ಅದು ಉಲ್ಲೇಖಿಸಿತ್ತು.
ಆಸ್ಟ್ರೇಲಿಯಾದ ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಅವಧಿಯಲ್ಲಿ ಸುಮಾರು 3,06,095 ಟನ್ ಭಾರತೀಯ ಬಾಸ್ಮತಿ ಅಕ್ಕಿ ಮಾರಾಟವಾಗಿದ್ದು, ಅದರ ಮೌಲ್ಯ ಸುಮಾರು 380 ಮಿಲಿಯನ್ ಡಾಲರ್ ಆಗಿತ್ತು. ಇದೇ ಅವಧಿಯಲ್ಲಿ ಪಾಕಿಸ್ತಾನದ ಬಾಸ್ಮತಿ ಅಕ್ಕಿಯ ಮಾರಾಟದ ಮೌಲ್ಯ ಸುಮಾರು 44.12 ಮಿಲಿಯನ್ ಡಾಲರ್ ಆಗಿತ್ತು.
ಆದರೆ, 2023ರ ಜನವರಿಯಲ್ಲಿ ಆಸ್ಟ್ರೇಲಿಯಾ ಟ್ರೇಡ್ಮಾರ್ಕ್ ಕಚೇರಿಯೂ ಎಪಿಇಡಿಎ ಅರ್ಜಿಯನ್ನು ತಿರಸ್ಕರಿಸಿತ್ತು. ಬಾಸ್ಮತಿ ಅಕ್ಕಿಯನ್ನು ಪಾಕಿಸ್ತಾನದಲ್ಲೂ ಬೆಳೆಯುವುದರಿಂದ ಭಾರತವನ್ನು ಏಕೈಕ ಉತ್ಪಾದಕ ದೇಶವೆಂದು ಗುರುತಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು.
ಇದನ್ನು ಪ್ರಶ್ನಿಸಿ ಎಪಿಇಡಿಎ ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಮನವಿ ಮಾಡಿತ್ತು.
ಬಾಸ್ಮತಿಗೆ ವಿಶೇಷ ಮಾನ್ಯತೆ ಪಡೆಯುವ ವಿಚಾರದಲ್ಲಿ ಎಪಿಇಡಿಎಗೆ ಈ ಹಿಂದೆ ನ್ಯೂಜಿಲೆಂಡ್ ಮತ್ತು ಕೀನ್ಯಾದಲ್ಲೂ ಇದೇ ರೀತಿಯ ಸಮಸ್ಯೆಗಳು ಎದುರಾಗಿದ್ದವು.
ಯುರೋಪಿಯನ್ ಒಕ್ಕೂಟದಲ್ಲಿ ಬಾಸ್ಮತಿ ಮಾನ್ಯತೆಗಾಗಿ ಎಪಿಇಡಿಎ ಸಲ್ಲಿಸಿರುವ ಅರ್ಜಿ 2018ರ ಜುಲೈನಿಂದ ಇನ್ನೂ ಬಾಕಿಯಲ್ಲಿದೆ.
ಈ ತೀರ್ಪು ನೇಪಾಳಕ್ಕೂ ಮಹತ್ವದ್ದಾಗಿದೆ. ನೇಪಾಳದಲ್ಲಿ ಉತ್ಪಾದಿಸಿ ಪ್ಯಾಕೇಜ್ ಮಾಡಲಾಗುವ ಬಾಸ್ಮತಿ ಅಕ್ಕಿಗೆ ಭಾರತ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ನಡುವೆ ಆಸ್ಟ್ರೇಲಿಯಾ ಕೋರ್ಟ್ನ ತೀರ್ಪು ದೊಡ್ಡ ಸವಾಲಾಗಿದೆ ಎಂದು ಬಾಸ್ಮತಿ ರಫ್ತುದಾರರು ಹೇಳಿದ್ದಾರೆ. ಆದರೆ, ಬಾಸ್ಮತಿ ಬೆಳೆಗಾರರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವುದೇ ಪ್ರಮುಖ ಆದ್ಯತೆಯಾಗಬೇಕು ಎಂದು ತಿಳಿಸಿದ್ದಾರೆ.
ಬಾಸ್ಮತಿ ಅಕ್ಕಿಗೆ ಉತ್ತಮ ಪ್ರಮಾಣೀಕರಣ, ಬಲವಾದ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ರಕ್ಷಣೆಯನ್ನು ಒದಗಿಸಲು ಎಪಿಇಡಿಎ ಜತೆಗೂಡಿ ಕೆಲಸ ಮಾಡಲು ಸಿದ್ಧರಿರುವುದಾಗಿ ರಫ್ತುದಾರರು ಹೇಳಿದ್ದಾರೆ.
ಇದರಿಂದ ರೈತರಿಗೆ ಉತ್ತಮ ಆದಾಯ ಹಾಗೂ ಬಾಸ್ಮತಿ ಬೆಳೆಗಾರರ ಭವಿಷ್ಯಕ್ಕೆ ಭದ್ರತೆ ಒದಗಿಸಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



