ವಿದೇಶ

'Hormuz ಮೇಲೆ ಅಮೆರಿಕಾ ಸಂಪೂರ್ಣ ಹಿಡಿತ' ಎಂದ Trump: 'ವಾಸ್ತವ ಬದಲಾಗಲ್ಲ', ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; Iran ತಿರುಗೇಟು..!

ಅಮೆರಿಕದ ಅಧಿಕಾರಿಗಳ ಸರಣಿ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ವಾಸ್ತವಾಂಶವನ್ನು ಬದಲಿಸುವುದಿಲ್ಲ. ಇರಾನ್‌ನ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಜಲಸಂಧಿ ಮುಚ್ಚಿಯೇ ಇರಲಿದೆ ಎಂದು PGSA ಪುನರುಚ್ಚರಿಸಿದೆ.

'Hormuz ಮೇಲೆ ಅಮೆರಿಕಾ ಸಂಪೂರ್ಣ ಹಿಡಿತ' ಎಂದ Trump: 'ವಾಸ್ತವ ಬದಲಾಗಲ್ಲ', ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; Iran ತಿರುಗೇಟು..!
ಡೊನಾಲ್ಡ್ ಟ್ರಂಪ್ ಮತ್ತು ಹಾರ್ಮುಜ್ ಜಲಸಂಧಿ (AI ಚಿತ್ರ)
Published On :

ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ತೀವ್ರವಾಗಿ ಖಂಡಿಸಿದ್ದು, ನಮ್ಮ ಷರತ್ತುಗಳಿಗೆ ಒಪ್ಪಿಗೆ ನೀಡದ ಹೊರತು ಜಲಸಂಧಿ ತೆರೆಯುವದಿಲ್ಲ ಎಂದು ತಿರುಗೇಟು ನೀಡಿದೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಪರ್ಷಿಯನ್ ಗಲ್ಫ್ ಸ್ಟ್ರೇಟ್ ಅಥಾರಿಟಿ (PGSA), ಹಾರ್ಮುಜ್ ಜಲಸಂಧಿ ನಿರ್ಬಂಧಮುಕ್ತವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಪದೇಪದೆ ಮಾಡುತ್ತಿರುವ ಹೇಳಿಕೆಗಳಿಂದ ವಾಸ್ತವಾಂಶ ಬದಲಾಗುವುದಿಲ್ಲ ಎಂದು ತಿಳಿಸಿದೆ.

“ಹಾರ್ಮುಜ್ ಜಲಸಂಧಿ ಇನ್ನೂ ನಿರ್ಬಂಧಿತವಾಗಿದೆ. ಇರಾನ್‌ನ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಅದನ್ನು ಮತ್ತೆ ತೆರೆಯಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ಹಾರ್ಮುಜ್ ಜಲಸಂಧಿಯ ನಿರ್ಬಂಧ ತೆರವುಗೊಳಿಸಲಾಗಿದೆ ಎಂಬ ಅಮೆರಿಕದ ಅಧಿಕಾರಿಗಳ ಹೇಳಿಕೆಗಳನ್ನೂ ಇರಾನ್ ತಳ್ಳಿಹಾಕಿದೆ.

ಅಮೆರಿಕದ ಅಧಿಕಾರಿಗಳ ಸರಣಿ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ವಾಸ್ತವಾಂಶವನ್ನು ಬದಲಿಸುವುದಿಲ್ಲ. ಇರಾನ್‌ನ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಜಲಸಂಧಿ ಮುಚ್ಚಿಯೇ ಇರಲಿದೆ ಎಂದು PGSA ಪುನರುಚ್ಚರಿಸಿದೆ.

ಇರಾನ್‌ನ ಈ ಪ್ರತಿಕ್ರಿಯೆ ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ಬಂದಿದೆ. ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ “ಸಂಪೂರ್ಣ ನಿಯಂತ್ರಣ” ಸಾಧಿಸಿದ್ದು, ಅದನ್ನು ಮುಂದುವರಿಸುವುದಾಗಿ ಟ್ರಂಪ್ ಹೇಳಿದ್ದರು.

“ನಾವು ಅದನ್ನು ಮುಂದುವರಿಸಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ. ನಮ್ಮ ನೌಕಾಪಡೆಯ ನಿರ್ಬಂಧವನ್ನು ಎಲ್ಲರೂ ‘ಉಕ್ಕಿನ ಗೋಡೆ’ ಎಂದು ಕರೆಯುತ್ತಿದ್ದಾರೆ. ಇದನ್ನು ತಡೆಯಲು ಇರಾನ್‌ಗೆ ಏನೂ ಮಾಡಲು ಸಾಧ್ಯವಿಲ್ಲ” ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಪೋಸ್ಟ್‌ನಲ್ಲಿ ಹೇಳಿದ್ದರು.

ಇರಾನ್‌ನ ಸೇನಾ ವ್ಯವಸ್ಥೆ ಭಾರೀ ಹಾನಿಗೊಳಗಾಗಿದೆ ಎಂದು ಕೂಡ ಟ್ರಂಪ್‌ ಪ್ರತಿಪಾದಿಸಿದ್ದಾರೆ. ಇರಾನ್‌ ಬಳಿ ನೌಕಾಪಡೆ ಅಥವಾ ವಾಯುಪಡೆ ಇಲ್ಲ, ಉಳಿದಿರುವ ಸೈನಿಕರಿಗೆ ವೇತನ ಪಾವತಿಯಾಗುತ್ತಿಲ್ಲ ಮತ್ತು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ (IRGC) ತೀವ್ರವಾಗಿ ದುರ್ಬಲಗೊಂಡಿದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಇರಾನ್‌ “ಸುಳ್ಳು ಸುದ್ದಿಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರ”ವನ್ನಷ್ಟೇ ಹೊಂದಿದೆ ಎಂದು ಟ್ರಂಪ್‌ ಟೀಕಿಸಿದ್ದಾರೆ.

ಮಧ್ಯಪ್ರಾಚ್ಯದ ಪ್ರಮುಖ ಸಾಗರ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ಪೆಟ್ರೋಲಿಯಂ ವ್ಯಾಪಾರದ ಸುಮಾರು 20 ಪ್ರತಿಶತ ಸಾಗುತ್ತದೆ.

ಇರಾನ್‌, ಇಸ್ರೇಲ್‌ ಮತ್ತು ಅಮೆರಿಕದ ಸೇನಾ ಪಡೆಗಳ ನಡುವೆ ಹಲವು ವಾರಗಳಿಂದ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಸಂಘರ್ಷದ ಆತಂಕವನ್ನು ಹೆಚ್ಚಿಸಿದೆ.

ಬಾಹ್ಯ ಒತ್ತಡ ಇರಾನ್‌ ಮೇಲೆ ಮುಂದುವರಿದರೆ ಸಮುದ್ರ ಸಾರಿಗೆಗೆ ನಿರ್ಬಂಧ ವಿಧಿಸುವುದಾಗಿ ಟೆಹ್ರಾನ್‌ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೊಲ್ಲಿ ಪ್ರದೇಶದಲ್ಲಿ ತನ್ನ ನೌಕಾಪಡೆಯ ಉಪಸ್ಥಿತಿಯನ್ನು ಹೆಚ್ಚಿಸಿದ್ದು, ಮುಕ್ತ ನೌಕಾಯಾನಕ್ಕೆ ಅವಕಾಶ ಕಲ್ಪಿಸುವುದು ಪ್ರಮುಖ ಭದ್ರತಾ ಗುರಿಯಾಗಿದೆ ಎಂದು ಹೇಳಿದೆ.

ಇದೇ ವೇಳೆ, ಅಮೆರಿಕ ಮತ್ತು ಇರಾನ್ ನಡುವೆ ತೆರೆಮರೆಯಲ್ಲಿ ರಾಜತಾಂತ್ರಿಕ ಮಾತುಕತೆಗಳೂ ನಡೆಯುತ್ತಿವೆ ಎಂದು ವರದಿ ಹೇಳಿದೆ.

ಇರಾನ್‌ ಷರತ್ತುಗಳೇನು?

ಇರಾನ್‌ನ ಹೊಸದಾಗಿ ನೇಮಕಗೊಂಡ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ (SNSC) ಮುಖ್ಯಸ್ಥ ಮೊಹ್ಸೆನ್ ರೆಜಾಯೀ ಅವರು, ಅಮೆರಿಕ ತನ್ನ ಎಲ್ಲ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ. ‘ಎಕ್ಸ್‌’ನಲ್ಲಿ ಸಂದೇಶ ಪ್ರಕಟಿಸಿರುವ ರೆಜಾಯೀ, ಇರಾನ್‌ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಮೆರಿಕ ಯುದ್ಧ ಮತ್ತು ನಿರ್ಬಂಧವನ್ನು ಕೊನೆಗೊಳಿಸಬೇಕು, ಇರಾನ್‌ನ ಸ್ಥಗಿತಗೊಳಿಸಲಾದ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಲೆಬನಾನ್‌ ಮತ್ತು ಗಾಜಾ ಸೇರಿದಂತೆ ಇಡೀ ಪ್ರದೇಶದಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು. ಈ ಎಲ್ಲ ಷರತ್ತುಗಳನ್ನು ಈಡೇರಿಸಿದ ಬಳಿಕವೇ ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.