ಸುಪ್ರೀಂ ಕೋರ್ಟ್ ತೀರ್ಪು ಬಳಿಕವೂ ಹಠ ಬಿಡದ ಟ್ರಂಪ್..! ಜನ್ಮಸಿದ್ಧ ಪೌರತ್ವಕ್ಕೆ ಮತ್ತೆ ಕತ್ತರಿ; ಎರಡು ಹೊಸ ಆದೇಶಗಳಿಗೆ ಸಹಿ..!
ಈ ಬಾರಿ ಹೊರಡಿಸಿರುವ ಆದೇಶಗಳು ಹಿಂದಿನ ಆದೇಶಕ್ಕಿಂತ ಸೀಮಿತ ವ್ಯಾಪ್ತಿಯಲ್ಲಿದ್ದು, ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯಲ್ಲಿರುವ ಜನ್ಮಸಿದ್ಧ ಪೌರತ್ವದ ಹಕ್ಕು ಅನ್ವಯಿಸದ ಕೆಲವು ವರ್ಗಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಶ್ವೇತಭವನ ತಿಳಿಸಿದೆ.

ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್ ಜನ್ಮಸಿದ್ಧ ಪೌರತ್ವವನ್ನು ನಿರ್ಬಂಧಿಸುವ ಹಿಂದಿನ ಆದೇಶವನ್ನು ಅಸಂವಿಧಾನಿಕ ಎಂದು ತಳ್ಳಿಹಾಕಿದರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತ್ರ ತಮ್ಮ ಹಠದಿಂದ ಹಿಂದೆ ಸರಿಯುತ್ತಿಲ್ಲ.
ಜನ್ಮಸಿದ್ಧ ಪೌರತ್ವಕ್ಕೆ ಮತ್ತಷ್ಟು ನಿರ್ಬಂಧ ಹೇರುವ ಉದ್ದೇಶದಿಂದ ಅವರು ಎರಡು ಹೊಸ ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿದ್ದು, ಅಮೆರಿಕದಲ್ಲಿ ಮತ್ತೆ ವಲಸೆ ನೀತಿ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಕುರಿತ ಚರ್ಚೆಗೆ ಕಿಡಿ ಹಚ್ಚಿದ್ದಾರೆ.
ಈ ಬಾರಿ ಹೊರಡಿಸಿರುವ ಆದೇಶಗಳು ಹಿಂದಿನ ಆದೇಶಕ್ಕಿಂತ ಸೀಮಿತ ವ್ಯಾಪ್ತಿಯಲ್ಲಿದ್ದು, ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯಲ್ಲಿರುವ ಜನ್ಮಸಿದ್ಧ ಪೌರತ್ವದ ಹಕ್ಕು ಅನ್ವಯಿಸದ ಕೆಲವು ವರ್ಗಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಶ್ವೇತಭವನ ತಿಳಿಸಿದೆ.
ಹೊಸ ಆದೇಶಗಳ ಪ್ರಕಾರ, 'ಬರ್ತ್ ಟೂರಿಸಂ' (Birth Tourism) ಉದ್ದೇಶದಿಂದ ಅಮೆರಿಕಕ್ಕೆ ಬರುವ ವಿದೇಶಿಯರ ಮಕ್ಕಳಿಗೆ, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಸರ್ಕಾರದ ನೌಕರರ ಮಕ್ಕಳಿಗೆ ಹಾಗೂ 'ಏಲಿಯನ್ ಎನಿಮೀಸ್' (Alien Enemies) ಎಂದು ವರ್ಗೀಕರಿಸಲಾದ ವ್ಯಕ್ತಿಗಳ ಮಕ್ಕಳಿಗೆ ಜನ್ಮಸಿದ್ಧ ಪೌರತ್ವ ಸೌಲಭ್ಯವನ್ನು ನಿರ್ಬಂಧಿಸುವ ಉದ್ದೇಶ ಹೊಂದಲಾಗಿದೆ.
ಜೊತೆಗೆ, ಅಮೆರಿಕದ ಕೆಲವು ಪ್ರದೇಶಗಳಲ್ಲಿ ಜನಿಸುವ ಮಕ್ಕಳಿಗೂ ಸ್ವಯಂಚಾಲಿತ ಪೌರತ್ವವನ್ನು ರದ್ದುಪಡಿಸುವ ಮಸೂದೆಗೆ ಕಾಂಗ್ರೆಸ್ ಅನುಮೋದನೆ ನೀಡಿದರೆ ಅದರ ಪರಿಣಾಮ ಬೀಳುವ ಸಾಧ್ಯತೆಯಿದೆ.
ಈ ಹೊಸ ಆದೇಶಗಳು ಜೂನ್ 30ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗುವುದಿಲ್ಲ. ಏಕೆಂದರೆ, ಸಂವಿಧಾನದ ಜನ್ಮಸಿದ್ಧ ಪೌರತ್ವದ ವ್ಯಾಪ್ತಿಗೆ ಬಾರದ ವರ್ಗಗಳಿಗೆ ಮಾತ್ರ ಇವು ಅನ್ವಯಿಸುತ್ತವೆ ಎಂದು ಆಡಳಿತ ವಾದಿಸಿದೆ.
ಆದೇಶಗಳಿಗೆ ಸಹಿ ಹಾಕಿದ ವೇಳೆ ಶ್ವೇತಭವನದ ಹಿರಿಯ ಸಲಹೆಗಾರ ಸ್ಟೀಫನ್ ಮಿಲ್ಲರ್ ಮಾತನಾಡಿ, "ಬರ್ತ್ ಟೂರಿಸಂ ಪದ್ಧತಿಯನ್ನು ಇಂದಿನಿಂದಲೇ ನಿಷೇಧಿಸಲಾಗಿದೆ. ಮಗುವಿಗೆ ಅಮೆರಿಕದ ಪೌರತ್ವ ಪಡೆಯುವ ಉದ್ದೇಶದಿಂದ ವೀಸಾ ಪಡೆದು ಯಾರೂ ಅಮೆರಿಕಕ್ಕೆ ಬರಲು ಅವಕಾಶ ಇರುವುದಿಲ್ಲ" ಎಂದು ಹೇಳಿದರು.
ಆದರೆ, ಈ ಆದೇಶಗಳಿಗೂ ತಕ್ಷಣವೇ ನ್ಯಾಯಾಲಯದಲ್ಲಿ ಕಾನೂನು ಸವಾಲು ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜನ್ಮಸಿದ್ಧ ಪೌರತ್ವವನ್ನು ನಿರ್ಬಂಧಿಸುವುದು ಟ್ರಂಪ್ ಅವರ ವಲಸೆ ನೀತಿಯ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿದೆ. ವಿಶೇಷವಾಗಿ, ಗರ್ಭಿಣಿಯರು ಮಗುವಿಗೆ ಅಮೆರಿಕದ ಪೌರತ್ವ ದೊರೆಯುವ ಉದ್ದೇಶದಿಂದ ಅಮೆರಿಕಕ್ಕೆ ಪ್ರಯಾಣಿಸುವ 'ಬರ್ತ್ ಟೂರಿಸಂ' ಪದ್ಧತಿಯನ್ನು ತಡೆಯುವುದಾಗಿ ಅವರು ಹಲವು ಬಾರಿ ಘೋಷಿಸಿದ್ದಾರೆ.
ಸೆಂಟರ್ ಫಾರ್ ಇಮಿಗ್ರೇಷನ್ ಸ್ಟಡೀಸ್ 2020ರಲ್ಲಿ ಪ್ರಕಟಿಸಿದ್ದ ಅಂದಾಜಿನ ಪ್ರಕಾರ, 2016-17ರ ಅವಧಿಯಲ್ಲಿ ಸುಮಾರು 20,000 ರಿಂದ 25,000 ಗರ್ಭಿಣಿಯರು ಈ ಉದ್ದೇಶಕ್ಕಾಗಿ ಅಮೆರಿಕಕ್ಕೆ ಪ್ರಯಾಣಿಸಿದ್ದರು. ಇದೇ ವೇಳೆ, 2025ರಲ್ಲಿ ಅಮೆರಿಕದಲ್ಲಿ ಸುಮಾರು 36 ಲಕ್ಷ ಮಕ್ಕಳು ಜನಿಸಿದ್ದಾರೆ.
ಈ ಹಿಂದೆ ಟ್ರಂಪ್ ಅವರು, ಸುಪ್ರೀಂ ಕೋರ್ಟ್ ನೀಡಿದ 6-3 ಬಹುಮತದ ತೀರ್ಪು ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
"ಜನ್ಮಸಿದ್ಧ ಪೌರತ್ವ ಕುರಿತಂತೆ ಸುಪ್ರೀಂ ಕೋರ್ಟ್ ಅತ್ಯಂತ ದುರದೃಷ್ಟಕರ ತೀರ್ಪು ನೀಡಿದೆ. ಜನರು ಇದನ್ನೇ ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ. ಹಣ ಕೊಟ್ಟು ಅಮೆರಿಕದ ಪೌರತ್ವ ಪಡೆಯುವ ವ್ಯವಸ್ಥೆಯನ್ನು ನಾವು ಮುಂದುವರಿಯಲು ಬಿಡುವುದಿಲ್ಲ" ಎಂದು ಹೇಳಿದ್ದರು. ಅಲ್ಲದೆ, 14ನೇ ತಿದ್ದುಪಡಿ ಜಾರಿಗೆ ಬಂದಿದ್ದ ಐತಿಹಾಸಿಕ ಸಂದರ್ಭವನ್ನೂ ಅವರು ಉಲ್ಲೇಖಿಸಿದರು.
"ಅಂತರ್ಯುದ್ಧದ ನಂತರ ಗುಲಾಮರ ಮಕ್ಕಳಿಗೆ ಹಕ್ಕು ನೀಡುವ ಉದ್ದೇಶದಿಂದ ಈ ನಿಯಮ ತರಲಾಗಿತ್ತು. ಈಗ ಅದರ ದುರುಪಯೋಗ ನಡೆಯುತ್ತಿದೆ" ಎಂದು ಆರೋಪಿಸಿದ್ದರು.
ಟ್ರಂಪ್ 2025ರಲ್ಲಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹೊರಡಿಸಿದ್ದ ಆದೇಶದಲ್ಲಿ, ಅಮೆರಿಕದಲ್ಲಿ ಜನಿಸಿದ ಮಗುವಿನ ಪೋಷಕರಲ್ಲಿ ಯಾರೂ ಅಮೆರಿಕದ ನಾಗರಿಕರಾಗಿರದಿದ್ದರೆ ಅಥವಾ ಶಾಶ್ವತ ನಿವಾಸಿಗಳಾಗಿರದಿದ್ದರೆ ಆ ಮಗುವಿಗೆ ಸ್ವಯಂಚಾಲಿತ ಪೌರತ್ವ ನೀಡಬಾರದು ಎಂದು ಸೂಚಿಸಿದ್ದರು. ಆದರೆ, ಅಮೆರಿಕದ ಸುಪ್ರೀಂ ಕೋರ್ಟ್ ಈ ಆದೇಶವನ್ನು ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿತ್ತು.
ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ತೀರ್ಪಿನಲ್ಲಿ, 14ನೇ ತಿದ್ದುಪಡಿಯ ಉದ್ದೇಶ ಅಮೆರಿಕದಲ್ಲಿ ಸ್ವತಂತ್ರವಾಗಿ ಜನಿಸಿದ ಪ್ರತಿಯೊಬ್ಬರಿಗೂ ವ್ಯಾಪಕವಾಗಿ ಪೌರತ್ವ ನೀಡುವುದಾಗಿತ್ತು ಎಂದು ಸ್ಪಷ್ಟಪಡಿಸಿದ್ದರು.
ಪೌರತ್ವ ಎನ್ನುವುದು ಹಕ್ಕುಗಳನ್ನು ಹೊಂದುವ ಹಕ್ಕು. ಆ ಭರವಸೆಯನ್ನು ನಾವು ಇಂದಿಗೂ ಉಳಿಸಿಕೊಂಡಿದ್ದೇವೆ" ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.
ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪೌರತ್ವ ಷರತ್ತು ಪ್ರಕಾರ, "ಅಮೆರಿಕದಲ್ಲಿ ಜನಿಸಿದ ಅಥವಾ ಕಾನೂನುಬದ್ಧವಾಗಿ ಪೌರತ್ವ ಪಡೆದ ಹಾಗೂ ಅಮೆರಿಕದ ನ್ಯಾಯವ್ಯಾಪ್ತಿಗೆ ಒಳಪಡುವ ಪ್ರತಿಯೊಬ್ಬ ವ್ಯಕ್ತಿಯೂ ಅಮೆರಿಕ ಮತ್ತು ಅವರು ವಾಸಿಸುವ ರಾಜ್ಯದ ನಾಗರಿಕರಾಗಿರುತ್ತಾರೆ" ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಗಮನಾರ್ಹ ಸಂಗತಿಯೆಂದರೆ, ಅಮೆರಿಕದಲ್ಲಿ 'ಬರ್ತ್ ಟೂರಿಸಂ' ಅನ್ನು ನೇರವಾಗಿ ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಆದರೆ, ಟ್ರಂಪ್ ಅವರ ಮೊದಲ ಅವಧಿಯಲ್ಲಿ 2020ರಲ್ಲಿ ಜಾರಿಗೆ ಬಂದ ನಿಯಮಗಳ ಪ್ರಕಾರ, ಮಗುವಿಗೆ ಅಮೆರಿಕದ ಪೌರತ್ವ ಪಡೆಯುವ ಉದ್ದೇಶದಿಂದ ಪ್ರವಾಸಿ ಅಥವಾ ವ್ಯವಹಾರ ವೀಸಾ ಬಳಸಿ ಅಮೆರಿಕಕ್ಕೆ ಪ್ರಯಾಣಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇಂತಹ ಪ್ರಕರಣಗಳಲ್ಲಿ ವಂಚನೆ ಸೇರಿದಂತೆ ವಿವಿಧ ಅಪರಾಧಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅವಕಾಶವೂ ಅಮೆರಿಕ ಸರ್ಕಾರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



