ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಭೀತಿ: ಸಿಕ್ಕ-ಸಿಕ್ಕ ವಿಮಾನ ಹತ್ತಿ ಹೊರಟು ಬನ್ನಿ; ತನ್ನ ನಾಗರಿಕರಿಗೆ ದೇಶ ತೊರೆಯಲು ಅಮೆರಿಕ ತುರ್ತು ಸೂಚನೆ..!
ವಾಣಿಜ್ಯ ವಿಮಾನಗಳು ಮತ್ತು ರಸ್ತೆ ಸಾರಿಗೆಗಳು ಸದ್ಯಕ್ಕೆ ಲಭ್ಯವಿದ್ದು, ಪರಿಸ್ಥಿತಿ ಕೈಮೀರುವ ಮುನ್ನವೇ ಅಮೆರಿಕನ್ನರು ಅಲ್ಲಿಂದ ಹೊರಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇರಾನ್ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿದ್ದು, ಯಾವುದೇ ಕ್ಷಣದಲ್ಲೂ ಯುದ್ಧ ತೀವ್ರಗೊಳ್ಳುವ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ತನ್ನ ಎಲ್ಲಾ ನಾಗರಿಕರಿಗೆ ತಕ್ಷಣವೇ ಆ ಪ್ರದೇಶವನ್ನು ತೊರೆಯುವಂತೆ ಅಥವಾ ಅಲ್ಪಾವಧಿಯ ನೋಟಿಸ್‌ನಲ್ಲಿ ಹೊರಡಲು ಸಿದ್ಧರಾಗಿರುವಂತೆ ತುರ್ತು ಭದ್ರತಾ ಎಚ್ಚರಿಕೆಯನ್ನು (Security Alert) ಜಾರಿಗೊಳಿಸಿದೆ.
ಅಮೆರಿಕದ ವಿದೇಶಾಂಗ ಇಲಾಖೆಯು ಬಹ್ರೇನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಒಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳಲ್ಲಿರುವ ತನ್ನ ರಾಯಭಾರ ಕಚೇರಿಗಳ ಮೂಲಕ ಈ ಪ್ರಮುಖ ಪ್ರಕಟಣೆಯನ್ನು ಹೊರಡಿಸಿದೆ,
ವಾಣಿಜ್ಯ ವಿಮಾನಗಳು ಮತ್ತು ರಸ್ತೆ ಸಾರಿಗೆಗಳು ಸದ್ಯಕ್ಕೆ ಲಭ್ಯವಿದ್ದು, ಪರಿಸ್ಥಿತಿ ಕೈಮೀರುವ ಮುನ್ನವೇ ಅಮೆರಿಕನ್ನರು ಅಲ್ಲಿಂದ ಹೊರಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ವಿಮಾನ ರದ್ದತಿ, ಪ್ರಾದೇಶಿಕ ವೈಮಾನಿಕ ಮಾರ್ಗಗಳ ಮುಚ್ಚುವಿಕೆ (Airspace closures) ಮತ್ತು ಪ್ರಯಾಣದ ಅಡಚಣೆಗಳು ಉಂಟಾಗಲಿದ್ದು, ನಾಗರಿಕರು ಮಾನಸಿಕವಾಗಿ ಸಿದ್ಧರಿರಬೇಕು ಎಂದು ಎಚ್ಚರಿಸಲಾಗಿದೆ.
ಕೇವಲ ಮಧ್ಯಪ್ರಾಚ್ಯ ಮಾತ್ರವಲ್ಲದೆ, ಇರಾನ್ ಮತ್ತು ಅದರ ಬೆಂಬಲಿತ ಸಶಸ್ತ್ರ ಗುಂಪುಗಳು ವಿಶ್ವದ ಯಾವುದೇ ಭಾಗದಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳು, ವ್ಯಾಪಾರ ಸಂಸ್ಥೆಗಳು ಅಥವಾ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಜಾಗತಿಕ ಎಚ್ಚರಿಕೆ (Worldwide Caution) ನೀಡಲಾಗಿದೆ.
ಸದ್ಯ ಮಧ್ಯಪ್ರಾಚ್ಯದ ಹೊರಗಿರುವ ಅಮೆರಿಕದ ನಾಗರಿಕರು ಆ ದೇಶಗಳ ಮೂಲಕ ಪ್ರಯಾಣಿಸುವುದನ್ನು ಅಥವಾ ಅಲ್ಲಿಗೆ ಭೇಟಿ ನೀಡುವುದನ್ನು ಸಂಪೂರ್ಣವಾಗಿ ಮರುಪರಿಶೀಲಿಸಬೇಕು ಅಥವಾ ರದ್ದುಗೊಳಿಸಬೇಕು ಎಂದು ಸೂಚಿಸಲಾಗಿದೆ.
ಕೌತುಕ ಹೆಚ್ಚಿಸಿದ ಟ್ರಂಪ್ ಹೇಳಿಕೆ!
ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿಗಳು ನಡೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಶ್ವೇತಭವನದ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನಾವು ಇರಾನ್ ಮೇಲೆ ಅತ್ಯಂತ ಘಾತಕವಾಗಿ ದಾಳಿ ನಡೆಸಲಿದ್ದೇವೆ. ಅವರು ಇನ್ನು ಮುಂದೆ ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ನಮ್ಮ ದಾಳಿ ಇರಲಿದೆ" ಎಂದು ಬಹಿರಂಗವಾಗಿ ಎಚ್ಚರಿಸಿದ್ದಾರೆ.
ಅಮೆರಿಕದ ಮಿಲಿಟರಿಯು ಇರಾನ್‌ನ ಇಂಧನ ಮೂಲಸೌಕರ್ಯ ಮತ್ತು ಶಕ್ತಿ ನೆಲೆಗಳ ಮೇಲೆ ಬೃಹತ್ ಬಾಂಬ್ ದಾಳಿ ನಡೆಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ವರದಿ ಮಾಡಿವೆ.
ಮತ್ತೊಂದೆಡೆ, ಅಮೆರಿಕಕ್ಕೆ ತನ್ನ ಭೂಪ್ರದೇಶವನ್ನು ಬಳಸಲು ಬಿಡುವ ಅಥವಾ ಸಹಕರಿಸುವ ಮಧ್ಯಪ್ರಾಚ್ಯದ ಯಾವುದೇ ದೇಶವನ್ನು ಸುಮ್ಮನೆ ಬಿಡುವುದಿಲ್ಲ, ಆ ದೇಶಗಳೂ "ಯುದ್ಧದ ಜ್ವಾಲೆಯಲ್ಲಿ ಭಸ್ಮವಾಗಲಿವೆ" ಎಂದು ಇರಾನ್ ಪ್ರತಿಜ್ಞೆ ಮಾಡಿದೆ.
ಈಗಾಗಲೇ ಕುವೈತ್ ಗಡಿಯಲ್ಲಿ ಇರಾನ್‌ನ ಡ್ರೋನ್‌ಗಳನ್ನು ಅಲ್ಲಿನ ವಾಯು ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿದ್ದು, ಯುದ್ಧದ ಕಿಡಿ ಇಡೀ ಮಧ್ಯಪ್ರಾಚ್ಯಕ್ಕೆ ವ್ಯಾಪಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



