ವಿದೇಶ

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌!

ಇರಾನ್ ಹಾಗೂ ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳು ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಮನವಿ ಮಾಡಿದ್ದರಿಂದ, ವಿಶ್ವದ ಹಿತದೃಷ್ಟಿಯಿಂದ ಮತ್ತು ಸಮೃದ್ಧ ಇರಾನ್ ಉಳಿಯಬೇಕೆಂಬ ಉದ್ದೇಶದಿಂದ ದಾಳಿಯನ್ನು ಸದ್ಯಕ್ಕೆ ರದ್ದುಪಡಿಸಲು ತಾವು ಒಪ್ಪಿದ್ದೇವೆ.

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published On :

ವಾಷಿಂಗ್ಟನ್: ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಮನವಿಯ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆ ಕ್ಷಣದಲ್ಲಿ ಇರಾನ್ ಮೇಲೆ ನಡೆಯಬೇಕಿದ್ದ ಭೀಕರ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಒಪ್ಪಂದಕ್ಕೆ ಬಾರದಿದ್ದರೆ ಭಾರೀ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ತಮ್ಮ ಟ್ರೂತ್ ಸೋಷಿಯಲ್ (Truth Social) ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್, ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧದ ಹೊಸ ದಾಳಿಯನ್ನು ಸದ್ಯಕ್ಕೆ ಮುಂದೂಡಲು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ದಾಳಿ ನಡೆಸಲು ಅಮೆರಿಕದ ಮಿಲಿಟರಿ ಸಂಪೂರ್ಣವಾಗಿ ಸಜ್ಜಾಗಿದೆ (Locked and Loaded) ಎಂದು ಟ್ರಂಪ್ ಎಚ್ಚರಿಸಿದ್ದಾರೆ.

"ಅಮೆರಿಕದ ಸೇನಾ ಶಕ್ತಿ ಎರಡನೇ ಮಹಾಯುದ್ಧದ ನಂತರ ಕಾಣದ ಮಟ್ಟಿಗೆ ಸಜ್ಜಾಗಿದೆ. ಅಗತ್ಯವಿದ್ದರೆ ಇರಾನ್ ವಿರುದ್ಧ ಸಂಪೂರ್ಣ ಶಕ್ತಿ ಬಳಸಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ ಹೇಳಿದ್ದಾರೆ.

ಇರಾನ್ ಹಾಗೂ ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳು ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಮನವಿ ಮಾಡಿದ್ದರಿಂದ, ವಿಶ್ವದ ಹಿತದೃಷ್ಟಿಯಿಂದ ಮತ್ತು ಸಮೃದ್ಧ ಇರಾನ್ ಉಳಿಯಬೇಕೆಂಬ ಉದ್ದೇಶದಿಂದ ದಾಳಿಯನ್ನು ಸದ್ಯಕ್ಕೆ ರದ್ದುಪಡಿಸಲು ತಾವು ಒಪ್ಪಿದ್ದೇವೆ ಎಂದು ತಿಳಿಸಿದ್ದಾರೆ.

ಈ ನಿರ್ಧಾರವು ಒಂದು ಷರತ್ತಿಗೆ ಒಳಪಟ್ಟಿದೆ ಎಂದು ಸ್ಪಷ್ಟಪಡಿಸಿರುವ ಅವರು, ಸಂಘರ್ಷ ಅಂತ್ಯಗೊಳ್ಳಬೇಕಾದರೆ ಇರಾನ್ ಶೀಘ್ರದಲ್ಲೇ ಒಪ್ಪಂದಕ್ಕೆ ಬರಬೇಕು. ಆ ಒಪ್ಪಂದದಲ್ಲಿ ಹಾರ್ಮುಜ್ ಜಲಸಂಧಿಯನ್ನು ತಕ್ಷಣ, ಸಂಪೂರ್ಣವಾಗಿ ತೆರೆಯುವುದು ಹಾಗೂ ಇರಾನ್‌ನ ಅಣು ಬೆದರಿಕೆಗೆ ಅಂತ್ಯ ಹಾಡುವುದು ಕಡ್ಡಾಯ ಷರತ್ತುಗಳಾಗಿವೆ ಎಂದು ಹೇಳಿದ್ದಾರೆ.

ಈ ಬದ್ಧತೆಯಲ್ಲಿ ಇಸ್ರೇಲ್ ಕೂಡ ನಮ್ಮೊಂದಿಗಿದೆ. ಎಲ್ಲರೂ ಕೆಲಸ ಆರಂಭಿಸಿ, ಒಪ್ಪಂದವನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ," ಎಂದು ಟ್ರಂಪ್ ಕರೆ ನೀಡಿದ್ದಾರೆ.

ಈ ನಡುವೆ ಇರಾನ್ ಮತ್ತು ಮಧ್ಯಪ್ರಾಚ್ಯದ ಮಿತ್ರರಾಷ್ಟ್ರಗಳ ಮನವಿ ಹಾಗೂ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ನಡೆದ ದೂರವಾಣಿ ಕರೆಯ ನಂತರ ಟ್ರಂಪ್, ದಾಳಿಯನ್ನು ನಿಲ್ಲಿಸಿದ್ದಾರೆಂದು ವರದಿಗಳು ತಿಳಿಸಿವೆ.

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಶನಿವಾರ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿ, ಇರಾನ್ ಮೇಲಿನ ದಾಳಿಯನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ ಎಂದು ಆಕ್ಸಿಯೊಸ್ (Axios) ವರದಿ ಮಾಡಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿಸದಂತೆ ಪರಿಸ್ಥಿತಿಯನ್ನು ಶಮನಗೊಳಿಸುವಂತೆ ಅವರು ಟ್ರಂಪ್‌ಗೆ ಸಲಹೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈ ಕುರಿತು ಶ್ವೇತಭವನದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ಟ್ರಂಪ್, ಇರಾನ್ ಮೇಲೆ "ಅತ್ಯಂತ ಕಠಿಣ ದಾಳಿ" ನಡೆಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧ ತೀವ್ರಗೊಳ್ಳುವ ಭೀತಿ ಹೆಚ್ಚಾಗಿತ್ತು.

ಅಮೆರಿಕ ಹಾಗೂ ಇಸ್ರೇಲ್ ಇರಾನ್‌ನ ತೈಲ ಶುದ್ಧೀಕರಣ ಘಟಕಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿ ಜಂಟಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದವು ಎಂಬ ವರದಿಗಳೂ ಪ್ರಕಟವಾಗಿದ್ದವು.

ಕಳೆದ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ದಾಳಿ ಆರಂಭಿಸಿದ ಬಳಿಕ ಐದು ತಿಂಗಳಿಗೂ ಹೆಚ್ಚು ಕಾಲ ಸಂಘರ್ಷ ಮುಂದುವರಿದಿದೆ. ಇತ್ತೀಚಿನ ವಾರಗಳಲ್ಲಿ ಎರಡೂ ಕಡೆಯಿಂದ ಪ್ರತಿದಾಳಿಗಳು ಹೆಚ್ಚಾಗಿರುವುದರಿಂದ ಯುದ್ಧ ಮತ್ತಷ್ಟು ವಿಸ್ತರಿಸುವ ಆತಂಕ ಎದುರಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.