ಹಾರ್ಮುಜ್ ಉದ್ವಿಗ್ನತೆ: ಶಾಂತಿ ಒಪ್ಪಂದ ಇನ್ನೂ ಅಂತಿಮ ಹಂತ ತಲುಪಿಲ್ಲ; ಟ್ರಂಪ್'ಗೆ ತಿವಿದ ಇರಾನ್
ಅಮೆರಿಕದೊಂದಿಗೆ ನಡೆದ ಮಾತುಕತೆಗಳಲ್ಲಿ ಕೆಲವು ಪ್ರಗತಿ ಕಂಡುಬಂದಿದೆಯಾದರೂ, ಇನ್ನೂ ಹಲವು ಮೂಲಭೂತ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ನಾವು ಇನ್ನೂ ಅಂತಿಮ ಹಂತದಿಂದ ದೂರದಲ್ಲಿದ್ದೇವೆ.

ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶಾಂತಿ ಒಪ್ಪಂದ ಇನ್ನೂ ಅಂತಿಮ ಹಂತ ತಲುಪಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ “ಮಾತುಕತೆಗಳು ಉತ್ತಮವಾಗಿ ಸಾಗುತ್ತಿವೆ” ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಇರಾನ್, ವಾಸ್ತವದಲ್ಲಿ ಒಪ್ಪಂದದ ದಾರಿ ಇನ್ನೂ ದೂರದಲ್ಲಿದ್ದು, ಅಂತಿಮ ಹಂತ ತಲುಪಿಲ್ಲ ಎಂದು ಹೇಳಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಅವರು ಮಾತನಾಡಿ, ಅಮೆರಿಕದೊಂದಿಗೆ ನಡೆದ ಮಾತುಕತೆಗಳಲ್ಲಿ ಕೆಲವು ಪ್ರಗತಿ ಕಂಡುಬಂದಿದೆಯಾದರೂ, ಇನ್ನೂ ಹಲವು ಮೂಲಭೂತ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ನಾವು ಇನ್ನೂ ಅಂತಿಮ ಹಂತದಿಂದ ದೂರದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ನಡುವೆ, ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿರುವುದಾಗಿ ಇರಾನ್ ಘೋಷಿಸಿದ್ದು, ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ತೆಗೆದುಹಾಕುವವರೆಗೂ ಸಂಚಾರವನ್ನು ಸಂಪೂರ್ಣವಾಗಿ ಪುನರಾರಂಭಿಸುವುದಿಲ್ಲ ಎಂದು ಎಚ್ಚರಿಸಿದೆ.
ಜಾಗತಿಕ ತೈಲ ಸಾಗಾಟದ ಪ್ರಮುಖ ಮಾರ್ಗವಾದ ಈ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದು ವಿಶ್ವ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಇರಾನ್ “ಅತಿಯಾಗಿ ಒತ್ತಡ ತರಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿ, ಅಮೆರಿಕ ಕಠಿಣ ನಿಲುವು ತಾಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
“ನಾವು ಉತ್ತಮ ಮಾತುಕತೆಗಳನ್ನು ನಡೆಸುತ್ತಿದ್ದೇವೆ, ಆದರೆ ಇರಾನ್ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಬಾರದು” ಎಂದು ಅವರು ಹೇಳಿದ್ದಾರೆ.
ಇದೀಗ, ಇರಾನ್ ರೆವಲ್ಯೂಷನರಿ ಗಾರ್ಡ್ (IRGC) ಕೂಡ ಕಠಿಣ ಎಚ್ಚರಿಕೆ ನೀಡಿದ್ದು, ಅನುಮತಿಯಿಲ್ಲದೆ ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುವ ಯಾವುದೇ ಹಡಗುಗಳನ್ನು “ಶತ್ರುಗಳಿಗೆ ಸಹಕಾರ” ಎಂದು ಪರಿಗಣಿಸಿ ಗುರಿಯಾಗಿಸಲಾಗುತ್ತದೆ ಎಂದು ಹೇಳಿದೆ.
ಕೆಲವು ಹಡಗುಗಳು ತಾತ್ಕಾಲಿಕವಾಗಿ ಸಂಚಾರ ನಡೆಸಿದರೂ, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅನೇಕ ಹಡಗುಗಳು ಹಿಂತಿರುಗಿರುವ ವರದಿಗಳು ಲಭ್ಯವಾಗಿವೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ ಎರಡು ಭಾರತೀಯ ಧ್ವಜದ ಹಡಗುಗಳ ಮೇಲೆ ನಡೆದ ಗುಂಡಿನ ದಾಳಿ ಹಿನ್ನೆಲೆಯಲ್ಲಿ, ಭಾರತ ವಿದೇಶಾಂಗ ಸಚಿವಾಲಯವು ನವದೆಹಲಿ ಯಲ್ಲಿನ ಇರಾನ್ ರಾಯಭಾರಿಯನ್ನು ಕರೆಯಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



