'ಘೋರ ಅಪರಾಧ..': Al Jazeera ಪತ್ರಕರ್ತನ ಸೋಗಿನಲ್ಲಿದ್ದ ಹಮಾಸ್ ಉಗ್ರನ ಹೊಡೆದುರುಳಿಸಿದ Israel ಸೇನೆ!
ಮಧ್ಯ ಪ್ರಾಚ್ಯದಲ್ಲಿ ಅಲ್ ಜಜೀರಾ ಸುದ್ದಿಸಂಸ್ಥೆಯ ವರದಿಗಾರನಾಗಿದ್ದ ಮುಬಾಶರ್ ವರದಿಗಾರ ಮೊಹಮ್ಮದ್ ವಿಶಾಹ್ ನನ್ನು ಕೊಂದು ಹಾಕಿದ್ದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.

ಟೆಲ್ ಅವೀವ್: ಲೆಬೆನಾನ್ ಜೊತೆ ಜೊತೆಯಲ್ಲೇ ಗಾಜಾಪಟ್ಟಿ ಮೇಲೂ ಮುಗಿಬಿದ್ದಿರುವ ಇಸ್ರೇಲ್ ಸೇನೆ Al Jazeera ಸುದ್ದಿಸಂಸ್ಥೆ ಪತ್ರಕರ್ತನ ಸೋಗಿನಲ್ಲಿದ್ದ ಹಮಾಸ್ ಏಜೆಂಟ್ ನ ಹೊಡೆದುರುಸಿದ್ದಾಗಿ ಘೋಷಣೆ ಮಾಡಿದೆ.
ಮಧ್ಯ ಪ್ರಾಚ್ಯದಲ್ಲಿ ಅಲ್ ಜಜೀರಾ ಸುದ್ದಿಸಂಸ್ಥೆಯ ವರದಿಗಾರನಾಗಿದ್ದ ಮುಬಾಶರ್ ವರದಿಗಾರ ಮೊಹಮ್ಮದ್ ವಿಶಾಹ್ ನನ್ನು ಕೊಂದು ಹಾಕಿದ್ದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಇಸ್ರೇಲ್ ಸೇನೆ, 'ಅಲ್ ಜಜೀರಾ ಪತ್ರಕರ್ತನ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಮಾಸ್ ಭಯೋತ್ಪಾದಕ ಮುಹಮ್ಮದ್ ಸಮೀರ್ ಮುಹಮ್ಮದ್ ವಾಶಾ (Muhammad Samir Muhammad Washah) ನನ್ನು ಇಸ್ರೇಲ್ ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ.
ಹಮಾಸ್‌ನ ರಾಕೆಟ್ ಮತ್ತು ಶಸ್ತ್ರಾಸ್ತ್ರ ಉತ್ಪಾದನಾ ಕೇಂದ್ರದಲ್ಲಿ ಪ್ರಮುಖ ಭಯೋತ್ಪಾದಕನಾಗಿದ್ದ ವಾಶಾ, ಗಾಜಾ ಮೂಲಕ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ವರ್ಗಾವಣೆಯಲ್ಲಿಯೂ ಭಾಗಿಯಾಗಿದ್ದ.
ಐಡಿಎಫ್ ಪಡೆಗಳ ವಿರುದ್ಧ ದಾಳಿಗಳನ್ನು ಯೋಜಿಸುವಲ್ಲಿ ಈತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದನು ಮತ್ತು ಆ ಪ್ರದೇಶದಲ್ಲಿನ ಪಡೆಗಳಿಗೆ ಕಾಂಕ್ರೀಟ್ ಬೆದರಿಕೆ ಒಡ್ಡಿದ್ದನು. ಇಂದು ಈತನನ್ನು ಐಡಿಎಫ್ ಪಡೆಗಳು ಯಶಸ್ವಿಯಾಗಿ ನಿರ್ಮೂಲನೆ ಮಾಡಿವೆ ಎಂದು ಎಕ್ಸ್ ನಲ್ಲಿ ಮಾಹಿತಿ ನೀಡಿದೆ.
ಆಗಿದ್ದೇನು?
ಬುಧವಾರ ಗಾಜಾ ನಗರದ ಪಶ್ಚಿಮ ಭಾಗದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಅಲ್ ಜಜೀರಾದ ಮುಬಾಶರ್ ವರದಿಗಾರ ಮೊಹಮ್ಮದ್ ವಿಶಾಹ್ ಸಾವನ್ನಪ್ಪಿದ್ದ.
2023ರ ಅಕ್ಟೋಬರ್‌ನಿಂದ ಈಚೆಗೆ ಪ್ಯಾಲೆಸ್ಟೀನಿಯನ್ ಪ್ರದೇಶದ ಮೇಲೆ ನಡೆದ ದಾಳಿಗಳಲ್ಲಿ ಕನಿಷ್ಠ 12 ಮಂದಿ ಅಲ್ ಜಜೀರಾ ಪತ್ರಕರ್ತರು ಹತರಾಗಿದ್ದಾರೆ. ಈ ಪೈಕಿ ಮೊಹಮ್ಮದ್ ಕೂಡ ಒಬ್ಬರು ಎಂದು ವರದಿಯಾಗಿದೆ.
ಅಲ್ ಜಜಿರಾ ಕಿಡಿ
ಇನ್ನು ತನ್ನ ವರದಿಗಾರನ ಹತ್ಯೆ ಕುರಿತು ಅಲ್ ಜಜೀರಾ ಸುದ್ದಿಸಂಸ್ಥೆ ಕಿಡಿಕಾರಿದ್ದು, '2023ರ ಅಕ್ಟೋಬರ್‌ನಲ್ಲಿ ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ವಿರುದ್ಧದ ಜನಾಂಗೀಯ ಹತ್ಯೆಯ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಅಂದಿನಿಂದ ಗಾಜಾದ ಮೇಲೆ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 262 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.
ಘೋರ ಅಪರಾಧ
ಅಂತೆಯೇ, 'ಅಲ್ ಜಜೀರಾ ಮೀಡಿಯಾ ನೆಟ್‌ವರ್ಕ್ "ಅಲ್ ಜಜೀರಾ ಮುಬಾಶರ್ ವರದಿಗಾರ ಮೊಹಮ್ಮದ್ ವಿಶಾಹ್ ಅವರನ್ನು ಗುರಿಯಾಗಿಸಿಕೊಂಡು ಕೊಂದ ಘೋರ ಅಪರಾಧವನ್ನು ಬಲವಾಗಿ ಖಂಡಿಸುತ್ತದೆ" ಎಂದು ಹೇಳಿಕೆ ಬಿಡುಗಡೆ ಮಾಡಿದೆ.
"ಇದು ಎಲ್ಲಾ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಹೊಸ ಮತ್ತು ಸ್ಪಷ್ಟ ಉಲ್ಲಂಘನೆಯಾಗಿದೆ. ಪತ್ರಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಮೂಲಕ ಸತ್ಯದ ಧ್ವನಿಯನ್ನು ನಿಶ್ಯಬ್ದಗೊಳಿಸುವ ನಿರಂತರ ವ್ಯವಸ್ಥಿತ ನೀತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಅದು ಹೇಳಿದೆ.
"2018ರಲ್ಲಿ ನೆಟ್‌ವರ್ಕ್‌ಗೆ ಸೇರಿದ ಅಲ್ ಜಜೀರಾ ತನ್ನ ವರದಿಗಾರ ಮೊಹಮ್ಮದ್ ವಿಶಾಹ್ ಸಾವಿಗೆ ಶೋಕ ವ್ಯಕ್ತಪಡಿಸಿದೆ. ಅವರ ಹತ್ಯೆಯು ಯಾದೃಚ್ಛಿಕ ಕೃತ್ಯವಲ್ಲ ಆದರೆ ಪತ್ರಕರ್ತರನ್ನು ಬೆದರಿಸಲು ಮತ್ತು ಅವರ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುವುದನ್ನು ತಡೆಯಲು ಉದ್ದೇಶಿಸಲಾದ ಉದ್ದೇಶಪೂರ್ವಕ ಮತ್ತು ಗುರಿಯಿಟ್ಟುಕೊಂಡ ಅಪರಾಧವಾಗಿದೆ ಎಂದು ಎಂದು ಹೇಳಿಕೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


