ವಿದೇಶ

West-Asia war: ಹಾರ್ಮುಜ್ ಮತ್ತೆಂದೂ ಹಿಂದಿನ ಸ್ಥಿತಿಗೆ ಮರಳಲ್ಲ; ನೆತನ್ಯಾಹು ಮಾತು ಕೇಳಿದರೆ ಹೊತ್ತಿ ಉರಿಯುತ್ತೀರಿ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ

ನೀವು ನೆತನ್ಯಾಹು ಅವರ ಸೂಚನೆಗಳನ್ನು ಅನುಸರಿಸುತ್ತಿರುವುದರಿಂದ ಸಂಪೂರ್ಣ ಪ್ರದೇಶವೇ ಬೆಂಕಿಗಾಹುತಿಯಾಗಲಿದೆ. ಯುದ್ಧದಿಂದ ಯಾವುದೇ ಪ್ರಯೋಜನವಿಲ್ಲ, ಇರಾನ್ ಜನರ ಹಕ್ಕುಗಳನ್ನು ಗೌರವಿಸುವುದೇ ಏಕೈಕ ಪರಿಹಾರ.

West-Asia war: ಹಾರ್ಮುಜ್ ಮತ್ತೆಂದೂ ಹಿಂದಿನ ಸ್ಥಿತಿಗೆ ಮರಳಲ್ಲ; ನೆತನ್ಯಾಹು ಮಾತು ಕೇಳಿದರೆ ಹೊತ್ತಿ ಉರಿಯುತ್ತೀರಿ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ
ಅಮೆರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್-ಇರಾನ್ ಸರ್ವಾಧಿಕಾರಿ ಖಮೇನಿ — online desk
Published On :

ಹಾರ್ಮುಜ್ ಕುರಿತ ಸಂಘರ್ಷ ತೀವ್ರಗೊಂಡಿದ್ದು, ಈ ನಡುವಲ್ಲೇ ಅಮೆರಿಕಾ ವಿರುದ್ಧ ಇರಾನ್ ತೀವ್ರವಾಗಿ ಕಿಡಿಕಾರಿದೆ. ಹಾರ್ಮುಜ್ ಜಲಸಂಧಿ ಮತ್ತೆಂದೂ ಹಿಂದಿನ ಸ್ಥಿತಿಗೆ ಮರಳುವುದಿಲ್ಲ. ನೆತನನ್ಯಾಹು ಆಜ್ಞೆ ಪಾಲಿಸಿದರೆ ಹೊತ್ತಿ ಉರಿಯುತ್ತೀರಿ ಎಂದು ಖಡಕ್ ಎಚ್ಚರಿಕೆ ನೀಡಿದೆ.

ಟ್ರಂಪ್ ಇತ್ತೀಚೆಗೆ ನೀಡಿದ ಹೇಳಿಕೆಗಳಲ್ಲಿ ಇರಾನ್ ವಿರುದ್ಧ ಕಠಿಣ ಹಾಗೂ ಅಸಭ್ಯ ಪದಗಳನ್ನು ಬಳಸಿದ್ದು, ಹಾರ್ಮುಜ್ ಸಮುದ್ರ ಮಾರ್ಗವನ್ನು ತಕ್ಷಣ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಘಟಕಗಳು ಮತ್ತು ಸೇತುವೆಗಳನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಶಾಂತಿ ಪ್ರಸ್ತಾವಕ್ಕೆ ಒಪ್ಪಿಕೊಳ್ಳಿ. ಇಲ್ಲವಾದರೆ ಎಲ್ಲವನ್ನೂ ಸ್ಫೋಟಗೊಳಿಸಿ ತೈಲವನ್ನು ವಶಕ್ಕೆ ಪಡೆಯುತ್ತೇವೆ” ಎಂಬ ಅವರ ಟ್ರಂಪ್ ಹೇಳಿಕೆ ಜಾಗತಿಕ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ, ಏಪ್ರಿಲ್ 6ರೊಳಗೆ ನಿರ್ಧಾರ ಕೈಗೊಳ್ಳದಿದ್ದರೆ ದಾಳಿ ಖಚಿತ ಎಂಬ ಸಂದೇಶವನ್ನು ಕೂಡ ನೀಡಿದ್ದಾರೆ.

ಈ ಬೆದರಿಕೆಗೆ ತಿರುಗೇಟು ನೀಡಿದ ಇರಾನ್ ಸಂಸತ್ ಅಧ್ಯಕ್ಷ ಮೊಹಮ್ಮದ್-ಬಾಘರ್ ಘಾಲಿಬಾಫ್, ಟ್ರಂಪ್‌ನ ಕ್ರಮಗಳು ಅಮೆರಿಕಾವನ್ನೇ “ಜೀವಂತ ನರಕಕ್ಕೆ” ತಳ್ಳುತ್ತಿವೆ ಎಂದು ಎಚ್ಚರಿಸಿದ್ದಾರೆ.

“ನೀವು ನೆತನ್ಯಾಹು ಅವರ ಸೂಚನೆಗಳನ್ನು ಅನುಸರಿಸುತ್ತಿರುವುದರಿಂದ ಸಂಪೂರ್ಣ ಪ್ರದೇಶವೇ ಬೆಂಕಿಗಾಹುತಿಯಾಗಲಿದೆ” ಎಂದು ಹೇಳಿದ್ದಾರೆ. ಯುದ್ಧದಿಂದ ಯಾವುದೇ ಪ್ರಯೋಜನವಿಲ್ಲ, ಇರಾನ್ ಜನರ ಹಕ್ಕುಗಳನ್ನು ಗೌರವಿಸುವುದೇ ಏಕೈಕ ಪರಿಹಾರ ಎಂದೂ ತಿಳಿಸಿದ್ದಾರೆ.

ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಎಸ್ಮಾಯಿಲ್ ಬಘಾಯೀ ಕೂಡ ಟ್ರಂಪ್ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದು, ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು “ಅಪರಾಧ” ಹಾಗೂ “ಮಾನವತೆಯ ವಿರುದ್ಧದ ಅಪರಾಧ” ಎಂದು ಹೇಳಿದ್ದಾರೆ. ಇಂತಹ ದಾಳಿಗಳು ಸಾಮಾನ್ಯ ಜನರ ಜೀವಕ್ಕೆ ಅಪಾಯ ಉಂಟುಮಾಡುತ್ತವೆ ಎಂದು ಎಚ್ಚರಿಸಿದರು.

ಇದೇ ವೇಳೆ ಇರಾನ್ ಸಚಿವ ಸಯ್ಯದ್ ರೆಜಾ ಸಲಿಹಿ-ಅಮಿರಿ, ಟ್ರಂಪ್ ಅವರನ್ನು “ಅಸ್ಥಿರ ಮತ್ತು ಭ್ರಮಿತ ನಾಯಕ” ಎಂದು ಟೀಕಿಸಿದ್ದಾರೆ.

ಇದಲ್ಲದೆ, ರಷ್ಯಾದ ಹಿರಿಯ ರಾಜತಾಂತ್ರಿಕ ಸೆರ್ಗೆಯ್ ವಿಕ್ಟೋರೊವಿಚ್ ಲಾವ್ರೊವ್ ಅವರು, ಅಮೆರಿಕವು "ಎಚ್ಚರಿಕೆಯ ಭಾಷೆ"ಯನ್ನು ಬಿಟ್ಟು ಮಾತುಕತೆಗೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿ ಜಗತ್ತಿನ ತೈಲ ಸಾಗಣೆಯ ಪ್ರಮುಖ ದ್ವಾರವಾಗಿದ್ದು, ವಿಶ್ವದ ಸುಮಾರು 20% ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದರೆ ಜಾಗತಿಕ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀಳುತ್ತದೆ. ಈಗಾಗಲೇ ತೈಲ ಬೆಲೆ ಏರಿಕೆ ಆತಂಕ ಎದುರಾಗಿದ್ದು, ಸಾಗಣೆ ವ್ಯತ್ಯಯ ಕೂಡ ಉಂಟಾಗಿದೆ.

ಇದರ ನಡುವಲ್ಲೂ ಮತ್ತಷ್ಟು ಆತಂಕ ಹುಟ್ಟಿಸುತ್ತಿರುವುದು ಇರಾನ್ ಪ್ರತಿಕ್ರಿಯೆ, ಇರಾನ್ ಹಾರ್ಮುಜ್ ಮತ್ತೆಂದೂ ಹಿಂದಿನ ರೀತಿ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಹೇಳಿಕೆ ಮುಂದಿನ ದಿನಗಳಲ್ಲಿ ಗಲ್ಫ್ ಪ್ರದೇಶದಲ್ಲಿ ಶಾಶ್ವತ ಬದಲಾವಣೆ ಸಂಭವಿಸಬಹುದು ಎಂಬ ಸೂಚನೆಯನ್ನೂ ನೀಡುತ್ತಿದೆ.

ಇದು ಕೇವಲ ತಾತ್ಕಾಲಿಕ ರಾಜಕೀಯ ಪ್ರತಿಕ್ರಿಯೆಯಲ್ಲ; ಅಮೆರಿಕಾ ಮತ್ತು ಅದರ ಮೈತ್ರಿಕೂಟದ ಪ್ರಭಾವವನ್ನು ಪ್ರಶ್ನಿಸುವ ದೀರ್ಘಕಾಲಿಕ ತಂತ್ರವಾಗಿದೆ. ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡರೆ, ಇದು ವ್ಯಾಪಕ ಯುದ್ಧಕ್ಕೆ ತಿರುಗುವ ಸಾಧ್ಯತೆ ಇರುವುದರಿಂದ ಜಗತ್ತಿನ ಗಮನ ಈಗ ಮಧ್ಯಪ್ರಾಚ್ಯದತ್ತ ನೆಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.