'ನಿಮ್ಮ ಜೊತೆ ದೃಢವಾಗಿ ನಿಲ್ಲುತ್ತೇವೆ': ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಚೀನಾ ಬೆಂಬಲ; ಭಾರತ ಕೆಂಗಣ್ಣು
ಪಾಕಿಸ್ತಾನದ ವಿದೇಶಾಂಗ ಕಚೇರಿಯು ಅದನ್ನು ದೃಢೀಕರಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ನವದೆಹಲಿ: ಸತತ 4 ದಿನಗಳ ಸೇನಾ ಸಂಘರ್ಷದ ಬಳಿಕ ಕೊನೆಗೂ ಭಾರತ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಹೊರತಾಗಿಯೂ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಪೋಸ್ಟ್ ಗಳತ್ತ ದಾಳಿ ಮಾಡುತ್ತಿರುವ ಪಾಕಿಸ್ತಾನದ ಬೆಂಬಲಕ್ಕೆ ಮತ್ತೆ ಚೀನಾ ನಿಂತಿದೆ.
ನಿನ್ನೆ ಸಂಜೆ ಭಾರತ ಮತ್ತು ಪಾಕಿಸ್ತಾನ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಪಾಕಿಸ್ತಾನ ಸೇನೆ ಮತ್ತೆ ಭಾರತೀಯ ಗಡಿಯಲ್ಲಿ ಡ್ರೋನ್ ದಾಳಿ ನಡೆಸಿದ್ದು, ಈ ಬಗ್ಗೆ ಸ್ವತಃ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ. ಕದನ ವಿರಾಮ ಉಲ್ಲಂಘನೆ ಕೇವಲ ನಾಮ್ ಕೇವಾಸ್ತೆಯಾಗಿದ್ದು, ಕಣಿವೆಯಲ್ಲಿ ಪಾಕಿಸ್ತಾನದ ಡ್ರೋನ್ ದಾಳಿ ನಿಂತಿಲ್ಲ ಎಂದು ಸಾಮಾಜಿಕ ಮಾಧ್ಯಮ ತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.
ಪಾಕಿಸ್ತಾನದ ಈ ಉದ್ಧಟತನದ ಹೊರತಾಗಿಯೂ ಇದೀಗ ಚೀನಾ ಮತ್ತೆ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದು, ಇದು ಭಾರತದ ಹುಬ್ಬೇರುವಂತೆ ಮಾಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಚೀನಾ ವಿದೇಶಾಂಗ ಸಚಿವಾಲಯ "ಬೀಜಿಂಗ್ ಇಸ್ಲಾಮಾಬಾದ್ ಜೊತೆ ದೃಢವಾಗಿ ನಿಲ್ಲುತ್ತದೆ" ಎಂದು ಹೇಳಿದೆ.
"ಪಾಕಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯ"ವನ್ನು ಎತ್ತಿಹಿಡಿಯುವಲ್ಲಿ ಬೀಜಿಂಗ್ ಇಸ್ಲಾಮಾಬಾದ್ ಜೊತೆ ನಿಂತಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ತಮ್ಮ ಪಾಕಿಸ್ತಾನಿ ಸಹವರ್ತಿ ಇಶಾಕ್ ದಾರ್ ಅವರಿಗೆ ದೂರವಾಣಿ ಸಂಭಾಷಣೆಯ ಸಮಯದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ದೂರವಾಣಿ ಸಂಭಾಷಣೆಯ ನಂತರ, ಪಾಕಿಸ್ತಾನದ ವಿದೇಶಾಂಗ ಕಚೇರಿಯು ಅದನ್ನು ದೃಢೀಕರಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ಹೇಳಿಕೆಯ ಪ್ರಕಾರ, ಇಶಾಕ್ ದಾರ್ ಅವರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ವಿನಿಮಯ ಮತ್ತು ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಚೀನಾದ ವಿದೇಶಾಂಗ ಸಚಿವರಿಗೆ ವಿವರಿಸಿದರು ಎನ್ನಲಾಗಿದೆ.
ಪಾಕ್ ಶ್ಲಾಘಿಸಿದ ಚೀನಾ
ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ವರದಿಯ ಪ್ರಕಾರ, ಚೀನಾದ ವಿದೇಶಾಂಗ ಸಚಿವರು "ಪಾಕಿಸ್ತಾನದ ಸಂಯಮವನ್ನು ಒಪ್ಪಿಕೊಂಡರು ಮತ್ತು ಸವಾಲಿನ ಸಂದರ್ಭಗಳಲ್ಲಿ ಅದರ ಜವಾಬ್ದಾರಿಯುತ ವಿಧಾನವನ್ನು ಶ್ಲಾಘಿಸಿದರು. ಅಲ್ಲದೆ ಸ್ನೇಹಿತನಾಗಿ ಚೀನಾ ತನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಪಾಕಿಸ್ತಾನದ ಜೊತೆ ದೃಢವಾಗಿ ನಿಲ್ಲುತ್ತದೆ ಎಂದು ಅವರು ಪುನರುಚ್ಚರಿಸಿದರು" ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.
ಪದೇ ಪದೇ ಕದನ ವಿರಾಮ ಉಲ್ಲಂಘನೆ
ಇನ್ನು ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾದ ಸ್ವಲ್ಪ ಸಮಯದ ನಂತರ, ಭಾರತ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ''ಕದನ ವಿರಾಮ ಘೋಷಣೆಯಾದ ಕಳೆದ ಕೆಲವು ಗಂಟೆಗಳಿಂದ ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ ನಿನ್ನೆ ಸಂಜೆ ಆರಂಭದಲ್ಲಿ ಮಾಡಿಕೊಂಡ ತಿಳುವಳಿಕೆಯ ಪದೇ ಪದೇ ಉಲ್ಲಂಘನೆಯಾಗುತ್ತಿದೆ. ಇದು ಇಂದು ಮುಂಚೆ ಮಾಡಿಕೊಂಡ ತಿಳುವಳಿಕೆಯ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದೆ.
"ಈ ಉಲ್ಲಂಘನೆಗಳಿಗೆ ಸಶಸ್ತ್ರ ಪಡೆಗಳು ಸಮರ್ಪಕ ಮತ್ತು ಸೂಕ್ತ ಪ್ರತಿಕ್ರಿಯೆಯನ್ನು ನೀಡುತ್ತಿವೆ ಮತ್ತು ನಾವು ಈ ಉಲ್ಲಂಘನೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಈ ಉಲ್ಲಂಘನೆಗಳನ್ನು ಪರಿಹರಿಸಲು ಮತ್ತು ಪರಿಸ್ಥಿತಿಯನ್ನು ಗಂಭೀರತೆ ಮತ್ತು ಜವಾಬ್ದಾರಿಯಿಂದ ನಿಭಾಯಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಪಾಕಿಸ್ತಾನವನ್ನು ಒತ್ತಾಯಿಸುತ್ತೇವೆ. ಸಶಸ್ತ್ರ ಪಡೆಗಳು ಪರಿಸ್ಥಿತಿಯ ಬಗ್ಗೆ ಬಲವಾದ ಜಾಗರೂಕತೆಯನ್ನು ಕಾಯ್ದುಕೊಂಡಿವೆ. ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಗಡಿ ಉಲ್ಲಂಘನೆಗಳ ಪುನರಾವರ್ತನೆಯ ಯಾವುದೇ ನಿದರ್ಶನಗಳನ್ನು ಬಲವಾಗಿ ಎದುರಿಸಲು ಅವರಿಗೆ ಸೂಚನೆಗಳನ್ನು ನೀಡಲಾಗಿದೆ" ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



