ವಿದೇಶ

Volcano Eruption: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; Air India ವಿಮಾನ ವಾಪಸ್!

ಜ್ವಾಲಾಮುಖಿ ಸ್ಫೋಟವಾಗುತ್ತಲೇ ಬೂದಿ ಗಾಳಿಯಲ್ಲಿ 10,000 ಮೀಟರ್ ಎತ್ತರಕ್ಕೆ ಹಾರಿದೆ. ಭೂಕಂಪನ ಚಟುವಟಿಕೆಯಲ್ಲಿ ತೀವ್ರ ಹೆಚ್ಚಳದ ನಂತರ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Volcano Eruption: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; Air India ವಿಮಾನ ವಾಪಸ್!
ಇಂಡೋನೇಷ್ಯಾ ಜ್ವಾಲಾಮುಖಿ ಸ್ಫೋಟ
Published On :

ನವದೆಹಲಿ: ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಾದ್ಯಂತ ಮೌಂಟ್ ಲೆವೊಟೊಬಿ ಲಕಿ-ಲಕಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಆಗಸದಾದ್ಯಂತ ದಟ್ಟ ಬೂದಿ ಆವರಿಸಿದೆ.

ಬೂದಿ ಆಕಾಶವನ್ನು ತುಂಬುತ್ತಿದ್ದಂತೆ ಗ್ರಾಮಸ್ಥರು ಭಯ ಭೀತಗೊಂಡರು. ಮಂಗಳವಾರ ಮಧ್ಯಾಹ್ನ ಜ್ವಾಲಾಮುಖಿಯು 150 ಕಿಲೋಮೀಟರ್ ದೂರದವರೆಗೂ ಗೋಚರಿಸುವ ದಟ್ಟವಾದ ಮೋಡಗಳನ್ನು ಸೃಷ್ಟಿಸಿದೆ. ಜ್ವಾಲಾಮುಖಿ ಸ್ಫೋಟವಾಗುತ್ತಲೇ ಬೂದಿ ಗಾಳಿಯಲ್ಲಿ 10,000 ಮೀಟರ್ ಎತ್ತರಕ್ಕೆ ಹಾರಿದೆ. ಭೂಕಂಪನ ಚಟುವಟಿಕೆಯಲ್ಲಿ ತೀವ್ರ ಹೆಚ್ಚಳದ ನಂತರ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇವಲ ಎರಡು ಗಂಟೆಗಳಲ್ಲಿ, 50 ಆಳವಾದ ಜ್ವಾಲಾಮುಖಿ ಭೂಕಂಪಗಳು ದಾಖಲಾಗಿವೆ. ಅಂತೆಯೇ ಅಪಾಯ ವಲಯ ವಿಸ್ತರಿಸುತ್ತಿದ್ದು, ಗ್ರಾಮಗಳಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳು ಜ್ವಾಲಾಮುಖಿಯ ಎಚ್ಚರಿಕೆಯ ಮಟ್ಟವನ್ನು ಅದರ ಅತ್ಯುನ್ನತ ಸ್ಥಿತಿಗೆ ಏರಿಸಿದ್ದಾರೆ.

ಸುರಕ್ಷತೆಗಾಗಿ ಕುಳಿಯ ಸುತ್ತಲಿನ ಅಪಾಯ ವಲಯವನ್ನು ಎಂಟು ಕಿಲೋಮೀಟರ್‌ಗಳಿಗೆ ವಿಸ್ತರಿಸಲಾಗಿದೆ. ಬೀದಿಗಳು ಜಲ್ಲಿಕಲ್ಲು, ಮರಳು ಮತ್ತು ಭಾರೀ ಬೂದಿಯಿಂದ ತುಂಬಿರುವುದರಿಂದ ಹತ್ತಿರದ ಎರಡು ಹಳ್ಳಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಆದಾಗ್ಯೂ, ಮಳೆಯಿಂದಾಗಿ ಸಂಭವನೀಯ ಲಾವಾ ಹರಿವಿನ ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಭಯಭೀತರಾದ ಸ್ಥಳೀಯರು ದೂರದಿಂದ ವೀಕ್ಷಿಸುತ್ತಿದ್ದಂತೆ ಮೋಡಗಳು ಬೃಹತ್ ಅಣಬೆ ಆಕಾರಕ್ಕೆ ವಿಸ್ತರಿಸುತ್ತಿರುವುದನ್ನು ವೀಡಿಯೊಗಳು ಸೆರೆಹಿಡಿದಿವೆ.

Air India ವಿಮಾನ ವಾಪಸ್

ಇನ್ನು ಜ್ವಾಲಾಮುಖಿ ಸ್ಫೋಟದಿಂದಾಗಿ ದೆಹಲಿಯಿಂದ ಬಾಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ AI2145 ವಿಮಾನವು ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟದಿಂದಾಗಿ ದೆಹಲಿಗೆ ಮರಳಿದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಮತ್ತು ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಇಳಿಸಲಾಗಿದೆ.

ಪ್ರಯಾಣಿಕರಿಗಾದ ಅನಾನುಕೂಲತೆಗೆ ವಿಮಾನಯಾನ ಸಂಸ್ಥೆಯು ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದು, ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ಒದಗಿಸುವ ಮೂಲಕ ಅನಕೂಲ ಒದಗಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೇಳಿದೆ. ಇದಲ್ಲದೆ, ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಟಿಕೆಟ್ ರದ್ದತಿಯ ಸಂಪೂರ್ಣ ಮರುಪಾವತಿ ಅಥವಾ ಅವರ ಆಯ್ಕೆಯ ಉಚಿತ ವಿಮಾನ ಪ್ರಯಾಣ ಸಹ ನೀಡಿದೆ.

ಹಲವು ವಿಮಾನಗಳು ರದ್ದು

ಅಂತೆಯೇ ಇಂಡೋನೇಷ್ಯಾದ ಬಾಲಿ ಬಳಿ ಪ್ರಬಲ ಜ್ವಾಲಾಮುಖಿ ಸ್ಫೋಟದಿಂದಾಗಿ ಅನೇಕ ಅಂತರರಾಷ್ಟ್ರೀಯ ವಿಮಾನಗಳು ರದ್ದಾಗಿವೆ. ಹಲವು ವಿಮಾನಗಳು ಪ್ರಯಾಣದ ಮಧ್ಯದಲ್ಲೇ ಹಿಂತಿರುಗಿವೆ. ಲೆವೊಟೊಬಿ ಲಕಿ-ಲಕಿ ಪರ್ವತದಿಂದ ಭಾರೀ ಬೂದಿ ಆಕಾಶವನ್ನು ಆವರಿಸಿ ಸುಮಾರು 10 ಸಾವಿರ ಮೀಟರ್ ಎತ್ತರಕ್ಕೆ ಹಾರಿದೆ. ಇದರಿಂದಾಗಿ ಏರ್ ಇಂಡಿಯಾ ಸೇರಿದಂತೆ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳನ್ನು ಸ್ಥಗಿತಗೊಳಿಸಿವೆ.

ಮಂಗಳವಾರ ಸಂಜೆ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ 14 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಭೋಪಾಲ್‌ಗೆ ಆರು ವಿಮಾನಗಳು, ಚಂಡೀಗಢಕ್ಕೆ ಮೂರು, ಅಮೃತಸರಕ್ಕೆ ಎರಡು, ಅಹಮದಾಬಾದ್, ವಾರಣಾಸಿ ಮತ್ತು ಲಕ್ನೋಗೆ ತಲಾ ಒಂದು ವಿಮಾನಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.