ವಿದೇಶ

ಇಸ್ರೇಲ್-ಗಾಜಾ ಯುದ್ಧ ಅಂತ್ಯ?: ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕರಡು ಒಪ್ಪಂದಕ್ಕೆ ಹಮಾಸ್ ಸಮ್ಮತಿ

2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ್ದ ಮಾರಣಾಂತಿಕ ದಾಳಿ ಹಾಗೂ ನೂರಾರು ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿತ್ತು.

ಇಸ್ರೇಲ್-ಗಾಜಾ ಯುದ್ಧ ಅಂತ್ಯ?: ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕರಡು ಒಪ್ಪಂದಕ್ಕೆ ಹಮಾಸ್ ಸಮ್ಮತಿ
ಸಂಗ್ರಹ ಚಿತ್ರ
Published On :

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ನಿಲ್ಲುವ ಹಂತಕ್ಕೆ ತಲುಪಿದೆ. ಗಾಜಾ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕುರಿತ ಕರಡು ಒಪ್ಪಂದವನ್ನು ಹಮಾಸ್ ಒಪ್ಪಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಸ್ರೇಲ್ ಸಹ ಒಪ್ಪಂದವನ್ನು ಪರಿಗಣಿಸಲಿದೆ. ಸೋಮವಾರವೇ ಕದನ ವಿರಾಮದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಕದನ ವಿರಾಮ ಮಾತುಕತೆಯಲ್ಲಿನ ಪ್ರಗತಿಯನ್ನು ಒಪ್ಪಿಕೊಂಡ ಅಧಿಕಾರಿಗಳು, ಪಶ್ಚಿಮ ಏಷ್ಯಾದ ಬಹುಭಾಗವನ್ನು ಅಸ್ಥಿರಗೊಳಿಸಿರುವ ಈ ಯುದ್ಧವನ್ನು ಕೊನೆಗೊಳಿಸಲು ಮುಂಬರುವ ದಿನಗಳು ನಿರ್ಣಾಯಕವಾಗುತ್ತವೆ ಎಂದು ಹೇಳಿದ್ದರು.

2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ್ದ ಮಾರಣಾಂತಿಕ ದಾಳಿ ಹಾಗೂ ನೂರಾರು ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿತ್ತು. ನಂತರ ಇಸ್ರೇಲ್ ಗಾಜಾಪಟ್ಟಿ ಮೇಲೆ ದಾಳಿ ಶುರು ಮಾಡಿತ್ತು. ನಂತರ ಹಮಾಸ್ ನ ಪ್ರಮುಖ ಉಗ್ರರನ್ನು ಹತ್ಯೆ ಮಾಡಿದ್ದ ಇಸ್ರೇಲ್ ಹಮಾಸ್ ನ ಆರ್ಥಿಕ ಮೂಲಗಳ ಬೇರುಗಳನ್ನು ನಾಶಪಡಿಸಿತ್ತು. ನಂತರ ಕದನ ವಿರಾಮ ಕುರಿತಂತೆ ಮಾತುಕತೆಗಳು ಶುರುವಾಗಿದ್ದವು. ಇದೀಗ ಕದನ ವಿರಾಮಕ್ಕೆ ಹಮಾಸ್ ಮುಂದಾಗಿದೆ. ಇನ್ನು ಒತ್ತೆಯಾಳ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್, ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿವೆ. ಗಾಜಾದೊಳಗೆ ಇನ್ನೂ ಸುಮಾರು 100 ಇಸ್ರೇಲಿ ಒತ್ತೆಯಾಳುಗಳಿದ್ದಾರೆ ಮತ್ತು ಅವರಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಜನರು ಸತ್ತಿದ್ದಾರೆ ಎಂದು ಸೇನೆ ನಂಬುತ್ತದೆ.

ಮಾತುಕತೆಯ ಬಗ್ಗೆ ಕುರಿತಂತೆ ಮಾತನಾಡಿರುವ ಅಧಿಕಾರಿಯೊಬ್ಬರು ರಾತ್ರೋರಾತ್ರಿ ಪ್ರಗತಿ ಸಾಧಿಸಲಾಗಿದೆ. ಒಪ್ಪಂದದ ಪ್ರಸ್ತಾವಿತ ಕರಡನ್ನು ಮಂಡಿಸಲಾಗಿದೆ ಎಂದು ಹೇಳಿದರು. ಇಸ್ರೇಲಿ ಮತ್ತು ಹಮಾಸ್ ಸಮಾಲೋಚಕರು ಈಗ ಅದನ್ನು ಅಂತಿಮ ಅನುಮೋದನೆಗಾಗಿ ತಮ್ಮ ನಾಯಕರಿಗೆ ಕಳುಹಿಸುತ್ತಾರೆ ಎಂದು ವಿವರಿಸಿದರು. ಗಲ್ಫ್ ರಾಷ್ಟ್ರ ಕತಾರ್‌ನ ಮಧ್ಯವರ್ತಿಗಳು ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಹಮಾಸ್ ಮೇಲೆ ಹೊಸ ಒತ್ತಡ ಹೇರಿದ್ದಾರೆ. ಮತ್ತೊಂದೆಡೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಯಭಾರಿ ಸ್ಟೀವ್ ವಿಟ್ಕಾಫ್ ಇಸ್ರೇಲಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆ ವ್ಯಕ್ತಿ ಹೇಳಿದ್ದಾರೆ.

ಕದನ ವಿರಾಮದಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಆದರೆ ಇದು ಇನ್ನೂ ಕೆಲವು ದಿನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಈಜಿಪ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಈ ಒಪ್ಪಂದವನ್ನು ಸಾಧಿಸುವ ಗುರಿ ಇದೆ ಎಂದು ಅಧಿಕಾರಿ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.