ವಿದೇಶ

ಜೂನ್ 22ಕ್ಕೆ ಅಮೆರಿಕಾಗೆ ಪ್ರಧಾನಿ ಮೋದಿ ಭೇಟಿ; ಶ್ವೇತಭವನದ ಹೊರಗೆ ರಾರಾಜಿಸುತ್ತಿದೆ ತ್ರಿವರ್ಣ ಧ್ವಜ!

ಜೂನ್ 20 ರಿಂದ 25ರ ವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದು, ಅಮೆರಿಕಾ ಮತ್ತು ಈಜಿಪ್ಟ್'ಗೆ ಪ್ರತ್ಯೇಕ ಭೇಟಿ ನೀಡಲಿದ್ದಾರೆ. ಮೋದಿ ಭೇಟಿಗೂ ಮುನ್ನವೇ ಶ್ವೇತಭವನದ ಹೊರಗಡೆ ಭಾರತದ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.

ಜೂನ್ 22ಕ್ಕೆ ಅಮೆರಿಕಾಗೆ ಪ್ರಧಾನಿ ಮೋದಿ ಭೇಟಿ; ಶ್ವೇತಭವನದ ಹೊರಗೆ ರಾರಾಜಿಸುತ್ತಿದೆ ತ್ರಿವರ್ಣ ಧ್ವಜ!
ಶ್ವೇತಭನದ ಹೊರಗೆ ರಾರಾಜಿಸುತ್ತಿರುವ ತ್ರಿವರ್ಣ ಧ್ವಜ.
Published On :

ವಾಷಿಂಗ್ಟನ್: ಜೂನ್ 20 ರಿಂದ 25ರ ವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದು, ಅಮೆರಿಕಾ ಮತ್ತು ಈಜಿಪ್ಟ್'ಗೆ ಪ್ರತ್ಯೇಕ ಭೇಟಿ ನೀಡಲಿದ್ದಾರೆ. ಮೋದಿ ಭೇಟಿಗೂ ಮುನ್ನವೇ ಶ್ವೇತಭವನದ ಹೊರಗಡೆ ಭಾರತದ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.

ಶ್ವೇತಭವನದ ಹೊರಗೆ ಭಾರತೀಯ ಧ್ವಜ ರಾರಾಜಿಸುತ್ತಿರುವುದನ್ನು ಕಂಡು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ನ್ಯೂಜೆರ್ಸಿಯಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಜೆಸಲ್ ನಾರ್ ಎಂಬುವವರು ಮಾತನಾಡಿ "ನಮ್ಮ ತ್ರಿವರ್ಣ ಧ್ವಜವನ್ನು ನೋಡುವುದು ನಿಜವಾಗಿಯೂ ಗೌರವ ಮತ್ತು ಹೆಮ್ಮೆಯ ವಿಚಾರ, ಕೆಲಸದ ಉದ್ದೇಶಕ್ಕಾಗಿ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ತಿರುಗಾಡುವಾಗ ನಾನು ತ್ರಿವರ್ಣ ಧ್ವಜವನ್ನು ತೆಗೆದುಕೊಂಡೇ ಹೋಗುತ್ತಿರುತ್ತೇನೆ" ಎಂದು ಹೇಳಿದ್ದಾರೆ.

"ಶ್ವೇತಭವನದ ಮುಂದೆ ತ್ರಿವರ್ಣ ಧ್ವಜವು ಮುಕ್ತವಾಗಿ ಹಾರಾಡುತ್ತಿರುವುದನ್ನು ನೋಡಿದಾಗ ನಮ್ಮ ಗೌರವಾನ್ವಿತ ಪ್ರಧಾನಿ ಮೋದಿಯವರು ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುವುದನ್ನು ಸೂಚಿಸುತ್ತಿದೆ. ಭಾರತದಲ್ಲಿ ಹೆಚ್ಚಿನ ತಾಂತ್ರಿಕ ಪ್ರಗತಿ ಸಾಧಿಸಲು ಈ ಭೇಟಿಯು ಹೆಚ್ಚು ಮಹತ್ವದಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಅವರು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದಾರೆ. ಜೂನ್ 20-24 ರವರೆಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ, ಹಲವಾರು ಅಮೆರಿಕನ್​​ ರಾಜಕಾರಣಿಗಳು, ಪ್ರಮುಖ ನಾಗರಿಕರು ಮತ್ತು ವಲಸೆಗಾರ ಜೊತೆ ಚರ್ಚೆ ನಡೆಸಲಿದ್ದಾರೆ.

ಈ ಮಧ್ಯೆ, ಶ್ವೇತಭವನದ ದಕ್ಷಿಣ ಲಾನ್‌ನಲ್ಲಿ ಪ್ರಧಾನಿ ಮೋದಿ ಔಪಚಾರಿಕ ಸ್ವಾಗತಕ್ಕಾಗಿ ತಯಾರಿ ಭರದಿಂದ ನಡೆಯುತ್ತಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪತ್ನಿ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ನ್ಯೂಯಾರ್ಕ್​ಕ್ಕೆ ಭೇಟಿ ನೀಡಲಿದ್ದು, ಜೂನ್ 21 ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವವನ್ನ ವಹಿಸಲಿದ್ದಾರೆ.

ನಂತರ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಜೂನ್ 22 ರಂದು ಶ್ವೇತಭವನದಲ್ಲಿ ವಿಧ್ಯುಕ್ತ ಸ್ವಾಗತ ಸ್ವೀಕರಿಸಲಿದ್ದಾರೆ. ಬಳಿಕ, ಉನ್ನತ ಮಟ್ಟದ ಮಾತುಕತೆ ನಡೆಸುವ ಸಲುವಾಗಿ ಅಧ್ಯಕ್ಷ ಬೈಡನ್ ಅವರನ್ನು ಭೇಟಿ ಮಾಡಲಿದ್ದಾರೆ.

ಅಂದು ಸಂಜೆಯೇ ಶ್ವೇತಭವನದಲ್ಲಿ ಬೈಡನ್ ಮತ್ತು ಜಿಲ್ ಬೈಡನ್ ದಂಪತಿ ಪ್ರಧಾನಿ ಮೋದಿ ಅವರಿಗೆ ಗೌರವಾರ್ಥ ಔತಣಕೂಟ ಆಯೋಜಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಕೆವಿನ್ ಮೆಕಾರ್ಥಿ ಮತ್ತು ಸೆನೆಟ್‌ನ ಸ್ಪೀಕರ್ ಚಾರ್ಲ್ಸ್ ಶುಮರ್ ಸೇರಿದಂತೆ ಯುಎಸ್ ಕಾಂಗ್ರೆಸ್ ನಾಯಕರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರು ಜೂನ್ 22 ರಂದು ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಜೂನ್ 23 ರಂದು, ಪ್ರಧಾನ ಮಂತ್ರಿಗಳಿಗಾಗಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಾಜ್ಯ ಕಾರ್ಯದರ್ಶಿ ಆಂಟೋನಿ ಬಿಲ್ನ್ಕೆನ್ ಅವರು ಜಂಟಿಯಾಗಿ ಭೋಜನಕೂಟವನ್ನು ಆಯೋಜಿಸಿದ್ದು, ಅದರಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಪ್ರಮುಖ ಸಿಇಒಗಳು, ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ. ಅದೇ ದಿನ ಭಾರತೀಯ ಅನಿವಾಸಿ ಸದಸ್ಯರನ್ನೂ ಭೇಟಿಯಾಗಲಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.