ದ್ವಿಪಕ್ಷೀಯ ಸಂಬಂಧಕ್ಕೆ ಕಾಶ್ಮೀರವೊಂದೇ ತಡೆಯಾಗಿದ್ದು, ಶಾಂತಿ ಸ್ಥಾಪನೆಗೆ ಭಾರತವೇ ಮೊದಲ ಹೆಜ್ಜೆ ಇಡಬೇಕು: ಪಾಕಿಸ್ತಾನ
ಭಾರತ ಮತ್ತು ಪಾಕಿಸ್ತಾನದ ಸಂಬಂಧಕ್ಕೆ ಕಾಶ್ಮೀರವೊಂದೇ ತಡೆಯಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಭಾರತವೇ ಮೊದಲ ಹೆಜ್ಜೆ ಇಡಬೇಕೆಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಹೇಳಿದ್ದಾರೆ.

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ಸಂಬಂಧಕ್ಕೆ ಕಾಶ್ಮೀರವೊಂದೇ ತಡೆಯಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಭಾರತವೇ ಮೊದಲ ಹೆಜ್ಜೆ ಇಡಬೇಕೆಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಹೇಳಿದ್ದಾರೆ.
ಇಸ್ಲಾಮಾಬಾದ್‌ನ ಭದ್ರತೆ ಕುರಿತ 2 ದಿನಗಳ ಚರ್ಚೆಯ ಉದ್ಘಾಟನಾ ಭಾಷಣ ಮಾಡಿರುವ ಇಮ್ರಾನ್ ಖಾನ್ ಅವರು ಕಾಶ್ಮೀರದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ಫೆಬ್ರವರಿ 24ರಂದು ಭಾರತ ಮತ್ತು ಪಾಕಿಸ್ತಾನಗಳು 2003ರ ಕದನವಿರಾಮ ಒಪ್ಪಂದಕ್ಕೆ ಬದ್ಧರಾಗಿರುವುದಾಗಿ ಮತ್ತೆ ಘೋಷಿಸಿದ್ದವು. ಆ ಬಳಿಕ, ಇಮ್ರಾನ್ ಖಾನ್ ಉಭಯ ರಾಷ್ಟ್ರಗಳ ಸಂಬಂಧದ ಬಗ್ಗೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ಒಂದೇ ಸಮಸ್ಯೆಯಾಗಿದೆ. ಉಭಯ ರಾಷ್ಟ್ರಗಳ ಸಂಬಂಧ ಬಲಪಡಿಸಲು ಕಾಶ್ಮೀರ ವಿಚಾರವೊಂದೇ ತಡೆಯಾಗಿದ್ದು, ಕಾಶ್ಮೀರ ಸಮಸ್ಯೆಗೆ ಪರಿಹಾರದ ಹೆಜ್ಜೆ ಮುಂದಿಡುವ ಮೂಲಕ ಭಾರತವೇ ಎರಡೂ ದೇಶಗಳ ಸಂಬಂಧ ಉತ್ತಮವಾಗಲು ಸಹಕರಿಸಬೇಕೆಂದು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸಂಬಂಧವನ್ನು ಉತ್ತಮಪಡಿಸಲು ಇರುವ ಒಂದೇ ಒಂದು ತಡೆ ಎಂದರೆ ಅದು ಕಾಶ್ಮೀರ. ಇದನ್ನು ಸರಿಪಡಿಸುವ ಬಗ್ಗೆ ನಾವು ನಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತೇವೆ. ಅದಕ್ಕೂ ಮೊದಲು ಈ ನಿಟ್ಟಿನಲ್ಲಿ ಭಾರತವೇ ಮೊದಲ ಹೆಜ್ಜೆ ಮುಂದಿಡಬೇಕು. ಆಗಸ್ಟ್ 5, 2019ರ ಬಳಿಕ ಭಾರತ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆ. ಹಾಗಾಗಿ, ಭಾರತವೇ ಕಾಶ್ಮೀರದ ವಿಚಾರವಾಗಿ ಮೊದಲು ಕ್ರಮ ಕೈಗೊಳ್ಳಬೇಕು.
2018ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತದೊಂದಿಗಿನ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿದೆ. ಆದರೆ, ಆಗಸ್ಟ್ 5ರ ಬಳಿಕ ಎರಡೂ ದೇಶಗಳ ನಡುವೆ ಸಂಬಂಧ ಬಿರುಕು ಬಿಟ್ಟಿತು ಭಾರತವು ಕಾಶ್ಮೀರಕ್ಕೆ ಸೂಕ್ತ ಸ್ಥಾನಮಾನವನ್ನು ನೀಡಬೇಕು. ಇದರಿಂದ ಭಾರತ ಹಾಗೂ ಪಾಕ್ ಎರಡೂ ದೇಶಗಳಿಗೂ ಒಳಿತಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾತುಕತೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಿದರೆ, ಎರಡೂ ದೇಶಗಳಿಗೆ ಲಾಭವಾಗಲಿದೆ. ಕಾಶ್ಮೀರದಲ್ಲಿ ಬಡತನದ ಇದೆ. ಅಲ್ಲಿ ವ್ಯಾಪಾರ, ವಹಿವಾಟು ಹಾಗೂ ಪ್ರಾದೇಶಿಕ ವ್ಯವಹಾರಗಳಿಗೆ ಅವಕಾಶ ಸಿಕ್ಕರೆ ಬಡತನ ನಿರ್ಮೂಲನೆಗೂ ಸಹಾಯವಾಗಲಿದೆ. ಕೇಂದ್ರ ಏಷ್ಯಾಕ್ಕೆ ಸಂಪರ್ಕ ಹೊಂದುವ ಮೂಲಕ ಭಾರತವೂ ಇದರ ಲಾಭ ಪಡೆಯಲಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಪಾಕಿಸ್ತಾನದ ರಾಷ್ಟ್ರೀಯ ಭದ್ರತೆ ಕೇವಲ ಸೇನೆಯ ಕುರಿತಾಗಿ ಇರುವುದಲ್ಲ. ಬದಲಾಗಿ, ಹವಾಮಾನ ಬದಲಾವಣೆ, ಆಹಾರ ಭದ್ರತೆ ಮತ್ತು ಆರ್ಥಿಕ ವಿಚಾರಗಳನ್ನೂ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ವ್ಯಾಪಾರ ವಹಿವಾಟಿನ ವಿಚಾರದಲ್ಲಿ ನಾವು ಚೀನಾದೊಂದಿಗೆ ಸಂಪರ್ಕ ಹೊಂದಿದ್ದೇವೆ. ಮತ್ತು ಭಾರತದ ಜೊತೆಗೂ ಸಂಬಂಧ ಹೊಂದಿದರೆ, ವಿಶ್ವದ ಎರಡು ಅತಿದೊಡ್ಡ ರಾಷ್ಟ್ರಗಳೊಂದಿಗೆ ಸಂಬಂಧ ಹೊಂದಿದಂತಾಗಲಿದೆ ಎಂದು ಭಾರತ-ಪಾಕ್ ವ್ಯಾವಹಾರಿಕ ಸಂಬಂಧದ ಬಗ್ಗೆ ಇಮ್ರಾನ್ ಖಾನ್ ಮಾತನಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


