ಡೋಕ್ಲಾಮ್ ವಿವಾದ: ನಮ್ಮ ಸಂಯಮಕ್ಕೂ ಮಿತಿ ಇದೆ, ಸಹನೆಯ ಕಟ್ಟೆಯೊಡೆದಿದೆ- ಚೀನಾ
ಡೋಕ್ಲಾಮ್ ಗಡಿ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ವಾಕ್ಸಮರ ಮುಂದುವರೆದಿದ್ದು, ಮತ್ತೊಮ್ಮೆ ಭಾರತಕ್ಕೆ ಬೆದರಿಕೆ ಹಾಕುವ ಪ್ರಯತ್ನಗಳನ್ನು ಚೀನಾ ಮುಂದುವರೆಸಿದೆ...

Published On :
ಬೀಜಿಂಗ್: ಡೋಕ್ಲಾಮ್ ಗಡಿ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ವಾಕ್ಸಮರ ಮುಂದುವರೆದಿದ್ದು, ಮತ್ತೊಮ್ಮೆ ಭಾರತಕ್ಕೆ ಬೆದರಿಕೆ ಹಾಕುವ ಪ್ರಯತ್ನಗಳನ್ನು ಚೀನಾ ಮುಂದುವರೆಸಿದೆ.
ಡೋಕ್ಲಾಮ್ ವಿವಾದ ಸಂಬಂಧ ಚೀನಾ ಗರಿಷ್ಠ ಸಂಯಮವನ್ನು ತೋರಿದ್ದು, ತನ್ನ ನಿಲುವನ್ನು ಭಾರತ ಬದಲಿಸದಿರುವುದರಿಂದ ನಮ್ಮ ತಾಳ್ಮೆಯ ಕಟ್ಟೆಯೊಡಿದಿದೆ ಎಂಚು ಚೀನಾ ಹೇಳಿಕೊಂಡಿದೆ.
ನಿನ್ನೆಯಷ್ಟೇ ಡೋಕ್ಲಾಮ ವಿವಾದ ಸಂಬಂಧ ಸಂಸತ್ತಿನಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಭಾರತ-ಚೀನಾ ನಡುವಿನ ಗಡಿ ವಿವಾದಕ್ಕೆ ಯುದ್ಧವೇ ಪರಿಹಾರವಲ್ಲ. ಪರಸ್ಪರ ಮಾತುಕತೆಯ ಪರಿಹಾರ. ಒಂದು ವೇಳೆ ಯುದ್ಧ ಸಂಭವಿಸಿದರೂ ಮತ್ತೆ ಶಾಂತಿ, ಸೌಹಾರ್ದ ಸ್ಥಾಪನೆಗೆ ಮಾತುಕತೆಯೇ ಮುಖ್ಯವಾಗುತ್ತದೆ. ಯಾವುದೇ ಸಮಸ್ಯೆಗಳನ್ನು ನಿವಾರಿಸಲು ತಾಳ್ಮೆ ಮುಖ್ಯವಾಗಿದ್ದು, ಒಂದು ವೇಳೆ ತಾಳ್ಮೆ ಕಳೆದುಕೊಂಡರೆ ಇನ್ನೊಂದು ಕಡೆಯಿಂದ ಪ್ರಚೋದನಾತ್ಮಕ ನಡೆ ಉಂಟಾಗಬಹುದು. ಹೀಗಾಗಿ ತಾಳ್ಮೆ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚೀನಾ ರಕ್ಷಣಾ ಸಚಿವಾಲಯ, ಡೋಕ್ಲಾಮ್ ವಿವಾದದಲ್ಲಿ ಚೀನಾ ಗರಿಷ್ಟ ಸಂಯಮವನ್ನು ತೋರಿಸಿದೆ. ಆದರೆ, ಇದೀಗ ನಮ್ಮ ತಾಳ್ಮೆಯ ಕಟ್ಟೆಯೊಡೆದಿದೆ. ಭಾರತ ಇನ್ನು ತಿಳಿಯಬೇಕಿದ್ದು, ಮೊದಲು ಡೋಕ್ಲಾಮ್ ನಿಂದ ತನ್ನ ಸೇನಾಪಡೆಗಳನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದೇ ಹೋದರೆ, ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ವಿವಾದ ಭುಗಿಲೆದ್ದ ಬಳಿಕ ಚೀನಾ ಗರಿಷ್ಟ ಸಂಯಮವನ್ನು ಪ್ರದರ್ಶಿಸಿದೆ. ರಾಜತಾಂತ್ರಿಯ ಮಾರ್ಗದ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಭಾರತದೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತ್ತು. ಚೀನಾದ ಸೇನೆ ಕೂಡ ಸಾಕಷ್ಟು ತಾಳ್ಮೆಯನ್ನು ತೋರಿದೆ. ಸಂಯಮ ತೋರಿಸುವುದು ನಮ್ಮ ತತ್ತ್ವವಾಗಿದ್ದು, ಇದೀಗ ನಮ್ಮ ತಾಳ್ಮೆಯ ಕಟ್ಟೆಯೊಡೆದಿದೆ.
ನಮ್ಮ ತಂತ್ರಗಳು ತಡವಾಗುತ್ತಿವೆ ಎಂಬ ಭ್ರಮೆಯಲ್ಲಿರುವವರು ಯಾವುದೇ ದೇಶವನ್ನು ಕಡಿಮೆಯಿಂದೆ ಎಂದು ಆಂದಾಜಿಸಬಾರದು. ದೇಶದ ಹಿತಾಸಕ್ತಿ, ಶಾಂತಿ ಹಾಗೂ ಸಾರ್ವಭೌಮತ್ವತೆಯನ್ನು ರಕ್ಷಿಸಲು ಚೀನಾ ಸೇನೆ ಸಾಮರ್ಥ್ಯವನ್ನು ಹೊಂದಿದೆ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ರೆನ್ ಗುವೊಕ್ಯಾಂಗ್ ಹೇಳಿದ್ದಾರೆ.
ಡೋಕ್ಲಾಮ್ ಗಡಿ ವಿವಾದ ಸಂಬಂಧ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿಕೆ ನೀಡಿದ್ದರೂ ಚೀನಾ ಮಾತ್ರ ಪದೇ ಪದೇ ಕದನೋತ್ಸಾಹ ತೋರಿಸುತ್ತಿರುವುದು, ಗೊಡ್ಡು ಬೆದರಿಕೆಗಳನ್ನು ಹಾಕುತ್ತಿರುವುದು ಭಾರತವನ್ನು ಮತ್ತಷ್ಟು ಕೆರಳುವಂತೆ ಮಾಡುತ್ತಿದೆ.
ಭಾರತ, ಚೀನಾ, ಭೂತಾನ್ ಗಡಿಗಳ ಸಂಗಮದಂತಹ ಸ್ಥಳದಲ್ಲಿ ಡೋಕ್ಲಾಮ್ ಇದ್ದು, ಅದು ತನಗೇ ಸೇರಿದ್ದು ಎಂದು ಚೀನಾ ವಾದಿಸುತ್ತಿರುವುದರಿಂದ ವಿವಾದ ಭುಗಿಲೆದ್ದಿದೆ.
ವಿವಾದ ಸಂಬಂಧ ಹಲವು ದಿನಗಳಿಂದಲೂ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದೆ. ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ಈ ಹಿಂದೆ ನಾಶ ಮಾಡಿದ್ದರು. ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.
ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ ಎಂದು ಹೇಳಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತIndian ArmyChinaಚೀನಾಭಾರತೀಯ ಸೇನೆಡೋಕ್ಲಾಮ್ ವಿವಾದDoklam standoffRestraintChina defense ministryಸಂಯಮಚೀನಾ ರಕ್ಷಣಾ ಸಚಿವಾಲಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


