ಪಾಕಿಸ್ತಾನದ ಸಚಿವ ಶುಜ ಕಂಝಡ ಸೇರಿ 8 ಜನರ ಹತ್ಯೆ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗೃಹ ಸಚಿವ ಶುಜ ಕಂಝಡ ಭಾನುವಾರ ಆತ್ಮಹತ್ಯಾ ದಾಳಿಯಲ್ಲಿ...

ಲಾಹೋರ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗೃಹ ಸಚಿವ ಶುಜ ಕಂಝಡ ಭಾನುವಾರ ಆತ್ಮಹತ್ಯಾ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅತ್ತೋಕ್ ಜಿಲ್ಲೆಯಲ್ಲಿರುವ ಶಾದಿ ಖಾಲ್ ಗ್ರಾಮದಲ್ಲಿ ಆತ್ಮಹತ್ಯಾ ದಾಳಿಕೋರ ಗೃಹ ಸಚಿವರ ಮನೆಯಲ್ಲಿ ಸ್ಫೋಟಿಸಿಕೊಂಡಾಗ ಘಟನೆ ನಡೆದಿದ್ದು, ಡಿಎಸ್ಪಿ ಶೌಕತ್ ಶ್ಹಾ ಸೇರಿದಂತೆ ಇತರ ಎಂಟು ಮಂದಿ ಕೂಡ ಸಾವನ್ನಪ್ಪಿದ್ದಾರೆ.
ಇನ್ನು ಹಲವಾರು ಮಂದಿಗೆ ಗಾಯಗಳಾಗಿವೆ ಎಂದು ರಾವಲ್ಪಿಂಡಿ ಪ್ರದೇಶದ ಆಯುಕ್ತ ಜಹೀದ್ ಸಯೀದ್ ತಿಳಿಸಿದ್ದಾರೆ.ಈ ದಾಳಿಯಲ್ಲಿ ಗೃಹ ಸಚಿವ ಶುಜ ಕಂಝಡ ಅವರ ನೆರೆ ಹೊರೆಯ ಮನೆಗಳ ಕಿಟಕಿಗಳೂ ಹಾನಿಗೀಡಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಬಾಂಬ್ ದಾಳಿಗೆ ಕಟ್ಟಡಗಳು ಕುಸಿದಿದ್ದು, ಅವುಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರ ಹುಡುಕಾಟ ನಡೆಯುತ್ತಿದೆ.
ನಿವೃತ್ತ ಕರ್ನಲ್ ಗೃಹ ಸಚಿವ ಶುಜ ಕಂಝಡ ಅವರು ಇಸ್ಲಾಮಾಬಾದ್ ನಿಂದ 100 ಕಿ.ಮೀ ದೂರದಲ್ಲಿರುವ ತಮ್ಮ ನಿವಾಸದಲ್ಲಿ ಅಲ್ಲಿನ ಪ್ರದೇಶದ ಜನರ ಜತೆಗೂಡಿ ಸಭೆ ನಡೆಸುತ್ತಿದ್ದರು. ರಕ್ಷಣಾ ಸಿಬ್ಬಂದಿ ಸಚಿವರ ಹತ್ತಿರವೇ ಇದ್ದ ಕಾರಣ ಸುಲಭದಲ್ಲಿ ಒಳನುಗ್ಗಿದ ಆತ್ಮಹತ್ಯಾ ದಾಳಿಕೋರ ತಾನೇ ಸ್ಫೋಟಿಸಿಕೊಂಡಿದ್ದಾನೆ. ಸಭೆ ನಡೆಯುತ್ತಿದ್ದ ಕೊಠಡಿ ಸಂಪೂರ್ಣ ಕುಸಿದುಬಿದ್ದಿದ್ದು, ಅದರಲ್ಲಿ ಸುಮಾರು 30ರಿಂದ 35 ಜನ ಸಿಲುಕಿರಬಹುದು ಎಂದು ಕಾನೂನು ಸಚಿವ ರಾಣಾ ಸನೌಲ್ಲ ತಿಳಿಸಿದ್ದಾರೆ.
ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಭಯೋತ್ಪಾದಕರನ್ನು ನಿಗ್ರಹಿಸುವ ಕಾರ್ಯ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಶುಜ ಕಂಝಡ ಅವರು ಕಳೆದ ವರ್ಷ ಅಕ್ಟೋಬರ್ ನಲ್ಲಿ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕ ಗುಂಪುಗಳನ್ನು ನಿಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು.
ಅವರು ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಪಾಕಿಸ್ತಾನದ ಆಲ್-ಖೈದಾ ಮುಖ್ಯಸ್ಥ ಮತ್ತು ಆತನ ಸಹಚರರನ್ನು ಲಾಹೋರ್ ಹೊರವಲಯದಲ್ಲಿ ಕೊಂದಿರುವುದಾಗಿ ಘೋಷಿಸಿದ್ದರು. ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. ಅವರಿಗೆ ಆಲ್ ಖೈದಾ ಮತ್ತು ತಹ್ರೀಕ್-ಇ-ತಾನಿಬಾನ್ ಭಯೋತ್ಪಾದಕ ಸಂಘಟನೆಯಿಂದ ಜೀವ ಬೆದರಿಕೆಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


