ಹೆಲಿಕ್ಯಾಪ್ಟರ್ ಮೂಲಕ ಶಹರಾನ್ಪುರಕ್ಕೆ ತೆರಳುವ ಮನವಿಯನ್ನು ತಿರಸ್ಕರಿಸಲಾಯಿತು: ಮಾಯಾವತಿ
ಗಲಭೆನಿರತ ಶಹರಾನ್ಪುರದ ದಲಿತ ಸಮುದಾಯದ ಜೊತೆಗೆ ಚರ್ಚಿಸಲು ಹೆಲಿಕ್ಯಾಪಿಟರ್ ಮೂಲಕ ಅಲ್ಲಿಗೆ ತೆರಳುವ ತಮ್ಮ ಮನವಿಗೆ ನಗರದ ಜಿಲ್ಲಾ ಮೆಜೆಸ್ಟ್ರೇಟ್ ನಿರಾಕರಿಸಿದರು ಎಂದು

Published On :
ಲಖನೌ: ಗಲಭೆನಿರತ ಶಹರಾನ್ಪುರದ ದಲಿತ ಸಮುದಾಯದ ಜೊತೆಗೆ ಚರ್ಚಿಸಲು ಹೆಲಿಕ್ಯಾಪಿಟರ್ ಮೂಲಕ ಅಲ್ಲಿಗೆ ತೆರಳುವ ತಮ್ಮ ಮನವಿಗೆ ನಗರದ ಜಿಲ್ಲಾ ಮೆಜೆಸ್ಟ್ರೇಟ್ ನಿರಾಕರಿಸಿದರು ಎಂದು ಬಹುಜನ ಸಮಾಜ ಪಕ್ಷದ (ಬಿ ಎಸ್ ಪಿ) ಅಧ್ಯಕ್ಷೆ ಮಾಯಾವತಿ ದೂರಿದ್ದಾರೆ.
ಅಲ್ಲಿಗೆ ಭೇಟಿ ನೀಡುವುದಕ್ಕೂ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಯಾವತಿ "ಬಿಜೆಪಿ ಸರ್ಕಾರ ಉತ್ತರಪ್ರದೇಶವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಒಡೆಯುತ್ತಿದೆ. ಶಹರಾನ್ಪುರದಲ್ಲಿ ನಡೆದ ಇತ್ತೀಚಿನ ಘಟನೆಗೆ ಬಿಜೆಪಿ ಕಾರಣ" ಎಂದಿರುವ ಅವರು "ಹೆಲಿಕ್ಯಾಪ್ಟರ್ ಮೂಲಕ ಶಹರಾನ್ಪುರಕ್ಕೆ ಭೇಟಿ ನೀಡುವ ಮನವಿಯನ್ನು ನಗರದ ಜಿಲ್ಲಾ ಮೆಜೆಸ್ಟ್ರೇಟ್ ತಿರಸ್ಕರಿಸಿ, ಇದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪರವಾನಗಿ ಬೇಕು ಎಂದರು" ಎಂದು ಕೂಡ ತಿಳಿಸಿದ್ದಾರೆ.
"ಈಗ ಶಹರಾನ್ಪುರಕ್ಕೆ ನಾನು ರಸ್ತೆಯ ಮೂಲಕವೇ ತೆರಳುತ್ತಿದ್ದೇನೆ. ನನಗಾಗಲಿ ನನ್ನ ಪಕ್ಷದ ಸದಸ್ಯರಿಗಾಗಲಿ ಏನಾದರೂ ಆದರೆ ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣವಾಗಲಿದೆ" ಎಂದಿದ್ದಾರೆ.
ಬಿ ಎಸ್ ಪಿ ಶಿಸ್ತಿನ ಪಕ್ಷ ಎಂದಿರುವ ಅವರು ತಮ್ಮ ಪಕ್ಷದ ಸದಸ್ಯರು ಎಂದಿಗೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ ಎಂದಿದ್ದಾರೆ.
ಈಮಧ್ಯೆ ಜಾತಿ ರಾಜಕಾರಣ ಬಿಟ್ಟು, ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಯೋಗಿ ಆದಿತ್ಯನಾಥ್ ಅವರಿಗೆ ಸಹಾಯ ಮಾಡುವಂತೆ ಬಿಜೆಪಿ ಪಕ್ಷ ಮಾಯಾವತಿ ಅವರಿಗೆ ಆಗ್ರಹಿಸಿದೆ.
ರಜಪೂತ ರಾಜ ಮಹಾರಾಣಾ ಪ್ರತಾಪ್ ಅವರ ಜಯಂತಿಯ ಆಚರಣೆಗೆ ಠಾಕೂರರು ಹೊರಟಿದ್ದ ಮೆರವಣಿಗೆಗೆ ದಲಿತರು ಆಕ್ಷೇಪಿಸಿದ್ದಕ್ಕೆ ಶುಕ್ರವಾರ ಶಹರಾನ್ಪುರದ ಶಬೀರಪುರ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಕನಿಷ್ಠ ೧೫ ಜನರಿಗೆ ಗಾಯಗಳಾಗಿದ್ದವು.
ದಲಿತರನ್ನು ಒಳಗೊಂಡಂತೆ ಶಹರಾನ್ಪುರದಲ್ಲಿ ಕಳೆದ ೧೫ ದಿನಗಳಲ್ಲಿ ನಡೆದ ಎರಡನೇ ಘರ್ಷಣೆ ಇದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


