"ದಿ ಮ್ಯಾನ್ ಆಫ್ ಆ್ಯಕ್ಷನ್": ಚುನಾವಣಾ ಗೆಲುವಿನ ನಿಮಿತ್ತ ಪ್ರಧಾನಿ ಮೋದಿ ಕೊಂಡಾಡಿದ ಅಮೆರಿಕ ತಜ್ಞರು!
ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಪಕ್ಷದ ಅಭೂತಪೂರ್ವ ಗೆಲುವನ್ನು ಅಮೆರಿಕದ ರಾಜಕೀಯ ತಜ್ಞರೂ ಕೊಂಡಾಡಿದ್ದು, ಪ್ರಧಾನಿ ಮೋದಿ ಅವರನ್ನು "ದಿ ಮ್ಯಾನ್ ಆಫ್ ಆ್ಯಕ್ಷನ್" ಎಂದು ಬಣ್ಣಿಸಿದೆ.

ವಾಷಿಂಗ್ಟನ್: ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಪಕ್ಷದ ಅಭೂತಪೂರ್ವ ಗೆಲುವನ್ನು ಅಮೆರಿಕದ ರಾಜಕೀಯ ತಜ್ಞರೂ ಕೊಂಡಾಡಿದ್ದು, ಪ್ರಧಾನಿ ಮೋದಿ ಅವರನ್ನು "ದಿ ಮ್ಯಾನ್ ಆಫ್ ಆ್ಯಕ್ಷನ್" ಎಂದು ಬಣ್ಣಿಸಿದೆ.
ನಿನ್ನೆ ಪ್ರಕಟವಾದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಉತ್ತರ ಪ್ರದೇಶದಲ್ಲಿ 325 ಸ್ಥಾನಗಳನ್ನು ಗಳಿಸಿದ್ದರೆ, ಉತ್ತರಾಖಂಡದಲ್ಲಿ 57 ಸ್ಥಾನಗಳನ್ನು ಗಳಿಸುವ ಮೂಲಕ 5 ವರ್ಷಗಳ ಬಳಿಕ ಅಧಿಕಾರಕ್ಕೇರುತ್ತಿದೆ. ಪ್ರಮುಖವಾಗಿ ಇಡೀ ದೇಶದ ಗಮನ ಸೆಳೆದಿದ್ದ ಉತ್ತರ ಪ್ರದೇಶ ಚುನಾವಣೆ ಕೇವಲ ಭಾರತೀಯರನ್ನು ಮಾತ್ರವಲ್ಲ ವಿಶ್ವದ ದೊಡ್ಡಣ್ಣ ಅಮೆರಿಕದ ಕುತೂಹಲವನ್ನು ಕೂಡ ಕೆರಳಿಸಿತ್ತು.
ಉತ್ತರ ಪ್ರದೇಶ ಚುನಾವಣೆಗೆ ಸಂಬಂಧಿಸಿದಂತೆ ಅಮೆರಿಕ ಖ್ಯಾತ ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಸಂಸ್ಥೆಯ ದಕ್ಷಿಣ ಏಷ್ಯಾ ಕಾರ್ಯಕ್ರಮದ ಮುಖ್ಯಸ್ಥ ಮಿಲನ್ ವೈಷ್ಣವ್ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು "ದಿ ಮ್ಯಾನ್ ಆಫ್ ಆ್ಯಕ್ಷನ್" ಎಂದು ಬಣ್ಣಿಸಿದ್ದಾರೆ. "ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಭಾರತದ ಜನರು ನರೇಂದ್ರ ಮೋದಿಯವರನ್ನು ‘ಅತ್ಯುತ್ತಮ ಕೆಲಸಗಾರ' ಎಂದು ನಂಬಿರುವುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.
"ಜನಸಂಖ್ಯೆಯಲ್ಲಿ ಭಾರತದ ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶವನ್ನು ಗೆದ್ದಿದ್ದು ಬಿಜೆಪಿಗೆ ಸಿಕ್ಕ ಅತ್ಯಂತ ಪ್ರತಿಷ್ಠಿತ ಬಹುಮಾನ. ನೋಟು ನಿಷೇಧದ ಬಗ್ಗೆ ಜನರು ಏನೇ ಯೋಚಿಸಿರಲಿ, ಮೋದಿಯವರನ್ನು ಉತ್ತಮ ಕೆಲಸಗಾರ ಎಂದು ಅವರು ನಂಬಿರುವುದಕ್ಕೆ ಉತ್ತರ ಪ್ರದೇಶ ಚುನಾವಣಾ ಫಲಿತಾಂಶವೇ ಸಾಕ್ಷಿ ಎಂದು ವೈಷ್ಣವ್ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಕುರಿತೂ ಪ್ರತಿಕ್ರಿಯಿಸಿರುವ ವೈಷ್ಣವ್ ಅವರು, ಇತ್ತೀಚಿನ ದಿನಗಳಲ್ಲಿ ತನ್ನ ವರ್ಚಸ್ಸು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಗೆ ಪಂಜಾಬ್ ಗೆಲುವು ಜೀವ ನೀಡಿದ್ದು, ಕೇವಲ ಒಂದು ರಾಜ್ಯ (ಕರ್ನಾಟಕ)ದಲ್ಲಿ ಮಾತ್ರ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದ ಕಾಂಗ್ರೆಸ್ ಗೆ ಪಂಜಾಬ್ ಗೆಲುವು ಅನಿವಾರ್ಯವಾಗಿತ್ತು ಎಂದು ವೈಷ್ಣವ್ ಹೇಳಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಇವರು ಬರೆದ ‘ವೆನ್ ಕ್ರೈಮ್ ಫೇಸ್: ಮನಿ ಅಂಡ್ ಮಸಲ್ ಇನ್ ಇಂಡಿಯನ್ ಪಾಲಿಟಿಕ್ಸ್' ಕೃತಿ ಭಾರತದಲ್ಲಿ ಬಿಡುಗಡೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


