ಪ್ರಧಾನ ಸುದ್ದಿ

ಜಲ್ಲಿಕಟ್ಟು ಆಚರಣೆಗೆ ಮಾರ್ಗದರ್ಶಿ ಸೂಚನೆ ಬಿಡುಗಡೆ ಮಾಡಿದ ತಮಿಳುನಾಡು ಸರ್ಕಾರ

ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಆಚರಣೆಗಾಗಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವಂತೆಯೇ ಸುಗ್ರೀವಾಜ್ಞೆ ಮೂಲಕ ಸಾಂಪ್ರದಾಯಿಕ ಕ್ರೀಡೆ ಮೇಲಿದ್ದ ನಿಷೇಧವನ್ನು ತಮಿಳುನಾಡು ಸರ್ಕಾರ ತೆರವುಗೊಳಿಸಿದ್ದು, ಅಂತೆಯೇ ಕೆಲ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ.

ಜಲ್ಲಿಕಟ್ಟು ಆಚರಣೆಗೆ ಮಾರ್ಗದರ್ಶಿ ಸೂಚನೆ ಬಿಡುಗಡೆ ಮಾಡಿದ ತಮಿಳುನಾಡು ಸರ್ಕಾರ
ಸಂಗ್ರಹ ಚಿತ್ರ
Published On :

ಚೆನ್ನೈ: ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಆಚರಣೆಗಾಗಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವಂತೆಯೇ ಸುಗ್ರೀವಾಜ್ಞೆ ಮೂಲಕ ಸಾಂಪ್ರದಾಯಿಕ ಕ್ರೀಡೆ ಮೇಲಿದ್ದ ನಿಷೇಧವನ್ನು ತಮಿಳುನಾಡು ಸರ್ಕಾರ ತೆರವುಗೊಳಿಸಿದ್ದು,  ಅಂತೆಯೇ ಕೆಲ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ.

ಸುಗ್ರೀವಾಜ್ಞೆ ಬೆನ್ನಲ್ಲೇ ನಿನ್ನೆ ತಮಿಳುನಾಡಿನ ವಿವಿಧೆಡೆ ನಡೆದ ಜಲ್ಲಿಕಟ್ಟು ಆಚರಣೆಯಲ್ಲಿ ಇಬ್ಬರು ಸಾವನ್ನಪ್ಪಿ 28ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಹಿನ್ನಲೆಯಲ್ಲಿ ಇದೀಗ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಆಚರಣೆಗಾಗಿ  ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಅಂತೆಯೇ ಜಲ್ಲಿಕಟ್ಟು ಆಚರಣೆ ವೇಳೆ ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶ ಹೊರಡಿಸಿದೆ. ಅಂತೆಯೇ ಎಲ್ಲ ಜಿಲ್ಲಾಡಳಿತಗಳಿಗೆ ಮತ್ತು ಆಯೋಜಕರಿಗೆ  ಸರ್ಕಾರ ಸೂಚನೆ ನೀಡಿದೆ.

ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂಚನೆಗಳು ಇಂತಿವೆ.
1. ಜಲ್ಲಿಕಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಹಾಗೂ ಗೂಳಿಗಳನ್ನು ಮೊದಲೇ ನೊಂದಾಯಿಸಿಕೊಳ್ಳಬೇಕು. ಈ ತಂಡವನ್ನು ಮೇಲ್ವಿಚಾರಕರು ಆಗ್ಗಾಗ್ಗೆ ಮೇಲ್ವಿಚಾರಣೆ ನಡೆಸುತ್ತಿರಬೇಕು.

2.ಜಲ್ಲಿಕಟ್ಟುಗೆ ಬಳಕೆ ಮಾಡುವ ಗೂಳಿಗಳಿಗೆ ಕ್ರೀಡೆ ಆರಂಭಕ್ಕೂ ಮುನ್ನ ಕನಿಷ್ಠ 20 ನಿಮಿಷಗಳ ವಿಶ್ರಾಂತಿ ನೀಡಬೇಕು ಮತ್ತು ಗೂಳಿ ಅಖಾಡಕ್ಕೆ ಇಳಿಯುವ ಮುನ್ನ ಪಶುವೈದ್ಯರು ಗೂಳಿಯನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ  ಮಾಡಬೇಕು.

3.ಗೂಳಿ ಕಾಳಗ ಅಖಾಡ ಕನಿಷ್ಠ 60 ಸ್ಕ್ವೇರ್ ಫೀಟ್ ಪ್ರದೇಶ ಹೊಂದಿರಬೇಕು. ಗೂಳಿಗಳ ಮಾಲೀಕರು ಹಾಗೂ ಆಯೋಜಕರು ಸ್ಥಳದಲ್ಲಿದ್ದು, ಸುರಕ್ಷತೆಯ ಮೇಲ್ವಿಚಾರಣೆ ನಡೆಸಬೇಕು. ಕಾಳಗ ನಡೆಯುವ ಅಖಾಡದ ಸುತ್ತಮುತ್ತ  ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಬೇಕು.

4. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಕನಿಷ್ಠ 15 ಮೀಟರ್ ಅಂತರವನ್ನು ಕಾಯ್ದು ಕೊಳ್ಳಬೇಕು. ಅಂತೆಯೇ ಯಾವುದೇ ಕಾರಣಕ್ಕೂ ಗೂಳಿ ಬಾಲವನ್ನು ಹಿಡಿದು ಎಳೆಯುವುದಾಗಲೀ ಅಥವಾ ಕಚ್ಚುವುದಾಗಲಿ ಮಾಡಬಾರದು.

5.ಜಲ್ಲಿಕಟ್ಟು ಕ್ರೀಡೆಯನ್ನು ಜನವರಿಯಿಂದ ಮೇ ವರೆಗೆ ಮಾತ್ರ ಆಯೋಜನೆ ಮಾಡಬೇಕು, ಕ್ರೀಡೆ ಆಯೋಜನೆಗೂ ಮುನ್ನ 30 ದಿನಗಳ ಮೊದಲೇ ಜಿಲ್ಲಾಡಳಿತಕ್ಕ ಈ ಬಗ್ಗೆ ಮನವಿ ಸಲ್ಲಿಕೆ ಮಾಡಿ ಅನುಮತಿ ಪಡೆಯಬೇಕು ಮತ್ತು  ಜಿಲ್ಲಾಡಳಿತ ದೊಡ್ಡ ಮೈದಾನಗಳಲ್ಲಿ ಮಾತ್ರ ಕ್ರೀಡೆ ಆಯೋಜನೆಗೆ ಅನುಮತಿ ನೀಡಬೇಕು.

6.ಗೂಳಿ ಓಡು ಮಾರ್ಗದ ಅಕ್ಕಪಕ್ಕದ ಸ್ಥಳಗಳಲ್ಲಿ ಭದ್ರವಾದ ಬ್ಯಾರಿಕೇಡ್ ಗಳನ್ನು ಹಾಕಬೇಕು. ಪ್ರೇಕ್ಷಕರ ಮೇಲೆ ಗೂಳಿ ದಾಳಿ ನಡೆಸದಂತೆ ಆಯೋಜಕರು ಮುನ್ನೆಚ್ಚರಿಕೆ ನಡೆಸಬೇಕು.

7.ಜಲ್ಲಿಕಟ್ಟು ಆಚರಣೆ ವೇಳೆ ಕಡ್ಡಾಯವಾಗಿ ಪಶುವೈದ್ಯರು ಹಾಗೂ ಸಾಮಾನ್ಯ ವೈದ್ಯರು ಮತ್ತು ಒಂದು ಆ್ಯಂಬುಲೆನ್ಸ್ ಸ್ಥಳದಲ್ಲಿರಬೇಕು. ಕಾಳಗ ಆರಂಭಕ್ಕೂ ಮುನ್ನ ವೈದ್ಯರು ಗೂಳಿ ಮತ್ತು ಸ್ಪರ್ಧಾಳುಗಳನ್ನು ಪರೀಕ್ಷಿಸಬೇಕು.  ಜಲ್ಲಿಕಟ್ಟು ಸ್ಪರ್ಧಾಳುಗಳು ಮತ್ತು ಗೂಳಿಗಳಿಗೆ ಯಾವುದೇ ರೀತಿಯ ಅಮಲು ಬರಿಸುವ ಪದಾರ್ಥಗಳು ನೀಡಿರಬಾರದು. ಇದನ್ನು ವೈದ್ಯರು ಪರೀಕ್ಷಿಸಿದ ಬಳಿಕವೇ ಕ್ರೀಡೆಗೆ ಚಾಲನೆ ನೀಡಬೇಕು.

8.ಕ್ರೀಡೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಾಳುಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು. ಸಮವಸ್ತ್ರ ಧರಿಸದ ಅಥವಾ ಪ್ರೇಕ್ಷೇಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಗೂಳಿ ಹಿಡಿಯುವ ವೇಳೆ ಅಪಾಯವಾದರೆ ಅದಕ್ಕೇ ಸ್ವರ್ಧಾಳು  ಮಾತ್ರವೇ ಜವಾಬ್ದಾರಿಯುತನಾಗಿರುತ್ತಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.