ನೋಟು ನಿಷೇಧ: ಸಂಸದೀಯ ಸಮಿತಿ ವಿಚಾರಣೆ ವೇಳೆ ಆರ್ ಬಿಐ ನೆರವಿಗೆ ಧಾವಿಸಿದ ಮನಮೋಹನ್ ಸಿಂಗ್
ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಚ್ಚರಿ ಎಂಬಂತೆ ಬುಧವಾರ ನಡೆದ ಸಂಸದೀಯ ಸಮಿತಿಯ ವಿಚಾರಣೆ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ನ ನೆರವಿಗೆ ಧಾವಿಸಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ನವದೆಹಲಿ: ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಚ್ಚರಿ ಎಂಬಂತೆ ಬುಧವಾರ ನಡೆದ ಸಂಸದೀಯ ಸಮಿತಿಯ ವಿಚಾರಣೆ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ನ ನೆರವಿಗೆ ಧಾವಿಸಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ನೋಟು ನಿಷೇಧ ನಂತರ ದೇಶಾದ್ಯಂತ ಎದ್ದಿದ್ದ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಆರ್ ಬಿಐ ತೆಗೆದುಕೊಂಡ ಕ್ರಮಗಳ ಕುರಿತು ಬುಧವಾರ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಸಂಸದೀಯ ಸಮಿತಿ ವಿಚಾರಣೆಗೊಳಪಡಿಸಿತ್ತು. ಈ ವೇಳೆ ಊರ್ಜಿತ್ ಪಟೇಲ್ ಅವರಿಗೆ ಸಮಿತಿ ಸದಸ್ಯರು ಕಠಿಣ ಪ್ರಶ್ನೆಗಳನ್ನು ಕೇಳುತಿದ್ದರಂತೆ. ಸಮಿತಿ ಸದಸ್ಯರಾದ ಸಂಸದರು ಊರ್ಜಿತ್ ಪಟೇಲ್ ಅವರಿಗೆ ನೋಟುನಿಷೇಧದಿಂದ ಸಮಸ್ಯೆ ತಲೆದೋರಿದ ಸಮಯದಲ್ಲಿ ಅವುಗಳಿಗೆ ಕಡಿವಾಣ ಹಾಕಲು ಕಾಲಮಿತಿಯನ್ನು ಹಾಕಲು ಏಕೆ ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿದ್ದರಂತೆ.
ಇದಕ್ಕೆ ಉತ್ತರಿಸಿದ್ದ ಊರ್ಜಿತ್ ಪಟೇಲ್ ಅವರು, "ಈವರೆಗೆ ಅಂದರೆ ನೋಟು ನಿಷೇಧ ಪ್ರಕ್ರಿಯೆ ಘೋಷಣೆಯಾದ ನಂತರ ಅಪಮೌಲ್ಯೀಕರಿಸಿದ ಹಣದಲ್ಲಿ ಶೇ.60 (9.2 ಲಕ್ಷ ಕೋಟಿ) ರಷ್ಟು ಹಣವನ್ನು ಹೊಸ ನೋಟುಗಳ ರೂಪದಲ್ಲಿ ಚಲಾವಣೆಗೆ ಬಿಡಲಾಗಿದೆ. ಆದರೆ, ಈವರೆಗೆ ಬ್ಯಾಂಕುಗಳಿಗೆ ಹಿಂದಿರುಗಿದ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳೆಷ್ಟು ಎಂಬ ನಿಖರ ಮಾಹಿತಿ ನೀಡುವಲ್ಲಿ ಅವರು ಊರ್ಜಿತ್ ಪಟೇಲ್ ವಿಫಲರಾದರು. ಈ ಸಮಯದಲ್ಲಿ ಪಟೇಲ್ ಅವರನ್ನು ಸಮಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.
ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಪ್ರಧಾನಿ ಹಾಗೂ ಈ ಹಿಂದೆ ಆರ್ ಬಿಐ ಗವರ್ನರ್ ಕೂಡ ಆಗಿ ಸೇವೆ ಸಲ್ಲಿಸಿದ್ದ ಮನಮೋಹನ್ ಸಿಂಗ್ ಅವರು ಊರ್ಜಿತ್ ಪಟೇಲ್ ಅವರ ನೆರವಿಗೆ ಧಾವಿಸಿ, "ಸಮಸ್ಯೆ ತಂದ್ದೊಡ್ಡುವ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ" ಎಂದು ಹೇಳಿದರಂತೆ. ಸಮಿತಿಯ ಇತರೆ ಸದಸ್ಯರು ಮನಮೋಹನ್ ಸಿಂಗ್ ಅವರ ಮಾತಿಗೆ ಮರು ಮಾತನಾಡಲಿಲ್ಲ ಎಂದು ತಿಳಿದುಬಂದಿದೆ.
ಆ ಮೂಲಕ ಮಾಜಿ ಪ್ರಧಾನಿ ಸಿಂಗ್ ಆರ್ ಬಿಐಗೆ ನೆರವಾಗಿದ್ದಾರೆ. ಈ ಹಿಂದೆ ನಡೆದ ಅಧಿವೇಶನದಲ್ಲಿ ಇದೇ ಮನಮೋಹನ್ ಸಿಂಗ್ ಅವರು, ನೋಟು ನಿಷೇಧವನ್ನು "ವ್ಯವಸ್ಥಿತ ಲೂಟಿ" ಎಂದು ಟೀಕಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


