ಪ್ರಧಾನ ಸುದ್ದಿ

ರಾವಣನಿಗೂ ಅಗಲವಾದ ಭುಜ ಇತ್ತು; ಮೋದಿ ಮೇಲೆ ಮಮತಾ ಮತ್ತೆ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಪರೋಕ್ಷವಾಗಿ ಹೋಲಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿ ಅವರು ಭಾರತೀಯ ನೋಟುಗಳನ್ನು ಮತ್ತೆ

ರಾವಣನಿಗೂ ಅಗಲವಾದ ಭುಜ ಇತ್ತು; ಮೋದಿ ಮೇಲೆ ಮಮತಾ ಮತ್ತೆ ವಾಗ್ದಾಳಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published On :
ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಪರೋಕ್ಷವಾಗಿ ಹೋಲಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿ ಅವರು ಭಾರತೀಯ ನೋಟುಗಳನ್ನು ಮತ್ತೆ ನಿಷೇಧಿಸುವ ಹೊತ್ತಿಗೆ ದೇಶದ ಜನ ಅವರನ್ನೇ ನಿಷೇಧಿಸಿರುತ್ತಾರೆ ಎಂದಿದ್ದಾರೆ. 
ನೋಟು ಹಿಂಪಡೆತ ನಿರ್ಧಾರದ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎದುರು ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ ಧರಣಿಯ ವೇಳೆ ಮಾತನಾಡಿದ ಮಮತಾ, ಮೋದಿ ಸರ್ಕಾರ ವಿರೋಧವನ್ನು ಹತ್ತಿಕ್ಕಲು ಭಯೋತ್ಪಾದನಾ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿರುವುದಲ್ಲದೆ, ತಾವು ಮೋದಿ ವಿರೋಧಿ ಪ್ರತಿಭಟನೆಗಳಲ್ಲಿ ಮುನ್ನಲೆಯಲ್ಲಿ ಇರುವುದರಿಂದ ತಮ್ಮನ್ನು ವಿಮಾನ ಪತನ ಮಾಡಿ ಮುಗಿಸುವ ಸಂಚು ರೂಪಿಸಲಾಗಿತ್ತು ಎಂದು ಕೂಡ ದೂರಿದ್ದಾರೆ. 
ತಮ್ಮ ಆವೇಶಭರಿತ ಭಾಷಣದಲ್ಲಿ ಮಮತಾ, ಮೋದಿ ಅವರನ್ನು ರಾಮಾಯಣದ ರಾವಣನಿಗೆ ಕೂಡ ಹೋಲಿಸಿದ್ದಾರೆ. 
"ಹೊಸ ವರ್ಷಕ್ಕೂ ಒಂದು ದಿನ ಮುಂಚಿತವಾಗಿ, ನಗದು ಹಿಂಪಡೆತದ ಮೇಲಿರುವ ನಿರ್ಬಂಧಗಳನ್ನು ಹಿಂಪಡೆಯಬಹುದೆಂದು ಜನ ಟಿವಿಯ ಮುಂದೆ ಕುಳಿತಿದ್ದರು. ಆದರೆ ಅದು ಆಗಲಿಲ್ಲ, ಬದಲಾಗಿ ಅವರು ಭಾಷಣ ಮಾಡಿದರು. ಚಪ್ಪಾಳೆ ಮತ್ತು ಚಪ್ಪಾಳೆ. ಜೋರಾಗಿ ಚಪ್ಪಾಳೆ ಹೊಡೆಯುವ ಮೂಲಕ ಭಾಷಣ ಮಾಡುವುದು ಹೊಸ ಬಗೆ. ನಂತರ ತಮಗೆ ದೊಡ್ಡ ಎದೆ ಮತ್ತು ಭುಜ ಇರುವುದಾಗಿ ಕೂಡ ಹೇಳಿಕೊಳ್ಳುತ್ತಾರೆ. 
"ರಾವಣನಿಗೂ ದೊಡ ಭುಜವಿತ್ತು. ಮತ್ತು ಅವನಿಗೆ ೧೦ ತಲೆ ಕೂಡ ಇದ್ದವು. ನೋಟು ಹಿಂಪಡೆತದ ನಂತರ ೧೦೦೦ ರೂ ಬದಲಾಗಿ ೨೦೦೦ ರೂ ನೋಟುಗಳನ್ನು ಪರಿಚಯಿಸಿದ್ದೇಕೆ?"
"ಈಗ ಬಿಜೆಪಿಯವರು ಹೇಳುತ್ತಿದ್ದಾರೆ, ಸ್ವಲ್ಪ ದಿನಗಳ ನಂತರ ೨೦೦೦ ರೂ ನೋಟುಗಳನ್ನು ಕೂಡ ನಿಷೇಧಿಸಲಾಗುವುದೆಂದು. ಆದರೆ ಅದು ನಡೆಯುವುದಕ್ಕೂ ಮುಂಚಿತವಾಗಿ ಮೋದಿಯವರನ್ನೇ ನಿಷೇಧಿಸಲಾಗುತ್ತದೆ"
ನವೆಂಬರ್ ೩೦ ರಂದು ಅವರು ಪ್ರಯಾಣಿಸುತ್ತಿದ್ದ ವಿಮಾನ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ೪೦ ನಿಮಿಷಗಳ ಕಾಲ ಸುತ್ತಿದ್ದರ ಬಗ್ಗೆ ಪ್ರಸ್ತಾಪಿಸಿದ ಮಮತಾ, ಇದು ತಮ್ಮನ್ನು ಹತ್ಯೆಗೈಯ್ಯಲು ರೂಪಿಸಿದ್ದ ಸಂಚು ಎಂದಿದ್ದಾರೆ. 
"ವಿಮಾನ ಪತನದಲ್ಲಿ ನನ್ನನ್ನು ಕೊಲ್ಲಲು ಸಂಚು ಹೂಡಲಾಗಿತ್ತು. ನಂತರ ಅವರು ಇಬ್ಬರು ಪೈಲಟ್ ಗಳನ್ನು ವಜಾ ಮಾಡಿದರು. ವಿಮಾನ ಟ್ರಾಫಿಕ್ ನಿಯಂತ್ರಣ ಬೇರೆ ಯಾರನ್ನೋ ದೂಷಿಸುತ್ತಿದೆ. ಉಳಿದವರು ಮತ್ಯಾರ ಮೇಲೆಯೋ ಆರೋಪ ಹೊರಿಸುತ್ತಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಯಾವುದೇ ದಾಖಲೆ ನೀಡಲಾಗುತ್ತಿಲ್ಲ. 
"ಅವರು (ಸರ್ಕಾರ) ಬಹಳ ಅಪಾಯಕಾರಿ. ಅವರು ಯಾವುದನ್ನು ಮತ್ತು ಏನು ಬೇಕಾದರೂ ಮಾಡಬಹುದು" ಎಂದು ಸೋಮವಾರ ಪಕ್ಷ ಪ್ರಾರಂಭಿಸಿದ ಧರಣಿ ವೇಳೆ ಹೇಳಿದ್ದಾರೆ. 
"ಹಿಂದೆಂದೂ ನೋಡದ, ಅರ್ಥವಿಲ್ಲದ ಭಯೋತ್ಪಾದಕ ಪ್ರಚಾರ ದೇಶದಲ್ಲಿ ಜಾರಿಯಲ್ಲಿದೆ" ಎಂದು ಕೂಡ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.