ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯಕ್ಕೆ ಶಶಿಕಲಾ ಶರಣಾಗತಿ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯದಲ್ಲಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಬುಧವಾರ ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯದಲ್ಲಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿರುವ ವಿಕೆ ಶಶಿಕಲಾ ಮಧ್ಯಾಹ್ನದ ವೇಳೆ ಬೆಂಗಳೂರಿಗೆ ಆಗಮಿಸಿ ವಿಶೇಷ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಎಐಎಡಿಎಂಕೆಯಲ್ಲಿ ಉಂಟಾಗಿರುವ ಭಿನ್ನಮತ ಮತ್ತು ಪನ್ನೀರ್ ಸೆಲ್ವಂ ಬಣ ಯಾವುದೇ ಕಾರಣಕ್ಕೂ ಮೇಲುಗೈ ಸಾಧಿಸಬಾರದು ಎಂಬ ಕಾರಣಕ್ಕೆ ಶಶಿಕಲಾ ಮತ್ತು ಅವರ ಬೆಂಬಲಿತ ಶಾಸಕರು ಶತಾಯಗತಾಯ ಸರ್ಕಾರ ರಚನೆ ಮಾಡಲೇಬೇಕು ಎಂದು ನಿರ್ಧರಿಸಿದ್ದು, ಇದೇ ಕಾರಣಕ್ಕೆ ನಿನ್ನೆ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ತರಾತುರಿಯಲ್ಲಿ ಶಾಸಕರು ತಂಗಿದ್ದ ಗೋಲ್ಡನ್ ಬೇ ರೆಸಾರ್ಟ್ ನಲ್ಲೇ ಸಭೆ ನಡೆಸಲಾಗಿತ್ತು. ಅಂತೆಯೇ ಶಶಿಕಲಾ ಅವರ ಆಪ್ತ ಎಡಪಾಡಿ ಕೆ ಪಳನಿ ಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ಬಳಿ ಮನವಿ ಕೂಡ ಸಲ್ಲಿಸಲಾಗಿದೆ.
ಇದೇ ಕಾರಣಕ್ಕೆ ಶಶಿಕಲಾ ಶರಣಾಗತಿಗೆ ಕಾಲಾವಕಾಶ ಕೇಳಲು ಇಚ್ಛಿಸುತ್ತಿದ್ದು, ತಮ್ಮ ಬೆಂಬಲಿಗರನ್ನೇ ಸಿಎಂ ಕುರ್ಚಿಯಲ್ಲಿ ಕೂರಿಸುವ ಮೂಲಕ ತಮಿಳುನಾಡು ಸರ್ಕಾರವನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕು ಎನ್ನುವುದು ಶಶಿಕಲಾ ಆಲೋಚನೆಯಾಗಿದೆ. ಇದೇ ಕಾರಣಕ್ಕೆ ಅವರು ನ್ಯಾಯಾಲಯದ ಬಳಿ ಕಾಲಾವಕಾಶ ಕೋರಿ ಈ ಸಮಯದಲ್ಲಿ ತಮ್ಮ ಬೆಂಬಲಿತ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಪರಪ್ಪನ ಆಗ್ರಹಾರದ ಸುತ್ತಮುತ್ತ ವ್ಯಾಪಕ ಭದ್ರತೆ, ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಇದೇ ವೇಳೆ ಶಶಿಕಲಾ ಇಂದು ನ್ಯಾಯಾಲಯಕ್ಕೆ ಆಗಮಿಸುವ ಸಾಧ್ಯತೆ ಇರುವುದರಿಂದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಆದಮಿಸಿದ್ದು, ನೇರ ಪ್ರಸಾರಕ್ಕಾಗಿ ಸಿದ್ಧತೆ ನಡೆಸಿಕೊಂಡಿದ್ದಾರೆ. ಅಂತೆಯೇ ಅತ್ತ ಪರಪ್ಪನ ಆಗ್ರಹಾರದ ಸುತ್ತಮುತ್ತ ಕೂಡ ವ್ಯಾಪಕ ಭದ್ರತೆ ಒದಗಿಸಲಾಗಿದೆ.
ಒಟ್ಟಾರೆ ಇದೀಗ ಎಲ್ಲ ದೃಷ್ಟಿ ಶಶಿಕಲಾ ಮೇಲೆ ನೆಟ್ಟಿದ್ದು, ಇಂದು ಸಂಜೆ ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯಕ್ಕೆ ಶರಣಾಗುತ್ತಾರೆಯೇ ಅಥವಾ ಪೋಯಸ್ ಗಾರ್ಡನ್ ನಲ್ಲಿಯೇ ಇದ್ದು, ಶರಣಾಗತಿಗಾಗಿ ನ್ಯಾಯಾಲಯದ ಕಾಲಾವಕಾಶ ಕೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


