ಭಾರತದಲ್ಲಿ ರಹಸ್ಯ ಅಣ್ವಸ್ತ್ರ ನಗರವಿದೆ: ಪಾಕಿಸ್ತಾನ ಗಂಭೀರ ಆರೋಪ
ಅಣ್ವಸ್ತ್ರ ತಯಾರಿಕೆಯಲ್ಲಿ ಸ್ಪರ್ಧೆಗಳಿದಿರುವ ಭಾರತ ರಹಸ್ಯ ನಗರವೊಂದರಲ್ಲಿ ಭಾರಿ ಪ್ರಮಾಣದ ಅಣ್ವಸ್ತ್ರಗಳನ್ನು ತಯಾರಿಸುತ್ತಿದೆ ಎಂದು ಪಾಕಿಸ್ತಾನ ಗಂಭೀರ ಆರೋಪ ಮಾಡಿದೆ.

ನವದೆಹಲಿ: ಅಣ್ವಸ್ತ್ರ ತಯಾರಿಕೆಯಲ್ಲಿ ಸ್ಪರ್ಧೆಗಳಿದಿರುವ ಭಾರತ ರಹಸ್ಯ ನಗರವೊಂದರಲ್ಲಿ ಭಾರಿ ಪ್ರಮಾಣದ ಅಣ್ವಸ್ತ್ರಗಳನ್ನು ತಯಾರಿಸುತ್ತಿದೆ ಎಂದು ಪಾಕಿಸ್ತಾನ ಗಂಭೀರ ಆರೋಪ ಮಾಡಿದೆ.
ಪಾಕಿಸ್ತಾನದ ವಿದೇಶಾಂಗ ವಕ್ತಾರ ನಫೀಸ್ ಝಕಾರಿಯಾ ಅವರು ಇಂತಹ ಗಂಭೀರ ಆರೋಪ ಮಾಡಿದ್ದು, ದಕ್ಷಿಣ ಭಾರತದ ರಹಸ್ಯ ನಗರದಲ್ಲಿ ಭಾರತದ ದೊಡ್ಡ ಅಣ್ವಸ್ತ್ರ ತಯಾರಿಕಾ ಕೇಂದ್ರವಿದ್ದು, ಇಲ್ಲಿ ಅತ್ಯಾಧುನಿಕ ಅಣ್ವಸ್ತ್ರಗಳು, ಥರ್ಮೋ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳು (ವೇಗೋತ್ಕರ್ಷದ ಶಸ್ತ್ರಾಸ್ತ್ರಗಳು), ಖಂಡಾಂತರ ಕ್ಷಿಪಣಿಗಳು ಮತ್ತು ಅಣ್ವಸ್ತ್ರ ಸಿಡಿತಲೆಗಳ ಬಿಡಿಭಾಗಗಳನ್ನು ಸಂಗ್ರಹಿಸಿಟ್ಟುಕೊಂಡಿದೆ ಎಂದು ಹೇಳಿದ್ದಾರೆ. ಅಂತೆಯೇ ಭಾರತದ ಈ ಪ್ರಕ್ರಿಯೆಯಿಂದಾಗಿ ಈ ಭಾಗದ ವ್ಯೂಹಾತ್ಮಕ ಸಮತೋಲನದಲ್ಲಿ ಏರುಪೇರಾಗುತ್ತಿದೆ' ಎಂದು ಆರೋಪಿಸಿದ್ದಾರೆ.
ಆದರೆ ನಫೀಸ್ ಝಕಾರಿಯಾ ಅವರು ಭಾರತದ ಅಣ್ವಸ್ತ್ರ ನಗರ ಯಾವ ರಾಜ್ಯದಲ್ಲಿದೆ ಎಂದು ಹೇಳಿಲ್ಲ. ಆದರೆ, ಆ್ಯಡ್ರಿಯನ್ ಲೆವಿ ಎಂಬ ಲೇಖಕರು ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಬಗ್ಗೆ ಪುಸ್ತಕವೊಂದನ್ನು ಬರೆದು, ‘ಕರ್ನಾಟಕದ ಚಳ್ಳಕೆರೆ ಬಳಿ ಭಾರತ ‘ರಹಸ್ಯ ಅಣು ನಗರಿ' ನಿರ್ಮಿಸುತ್ತಿದೆ ಎಂದು ಬರೆದಿದ್ದರು. ಇದರ ಹಿನ್ನಲೆಯಲ್ಲೇ ಝಕಾರಿಯಾ ಅವರು ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
"ಕಪೋಲ ಕಲ್ಪಿತ ಹೇಳಿಕೆ ನೀಡುವುದನ್ನು ಪಾಕಿಸ್ತಾನ ಬಿಡಬೇಕು": ಭಾರತದಿಂದ ದಿಟ್ಟ ಉತ್ತರ
ಇನ್ನು ಪಾಕಿಸ್ತಾನದ ಈ ಗಂಭೀರ ಆರೋಪಕ್ಕೆ ದಿಟ್ಟ ಉತ್ತರ ನೀಡಿರುವ ಭಾರತ, ಪಾಕಿಸ್ತಾನ ತನ್ನ ಕಪೋಲದ ಕಲ್ಪಿತ ಹೇಳಿಕೆಗಳನ್ನು ನೀಡುವುದನ್ನು ಬಿಡಬೇಕು ಎಂದು ಕಟುವಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಅವರು, ಪಾಕಿಸ್ತಾನದ ಹೇಳಿಕೆ ಕೇವಲ ಕಲ್ಪನೆಯಾಗಿದ್ದು, ಇಂತಹ ಕಲ್ಪಿತ ಹೇಳಿಕೆಗಳನ್ನು ನೀಡುವುದನ್ನು ಪಾಕಿಸ್ತಾನ ಬಿಡಬೇಕು ಎಂದು ಹೇಳಿದ್ದಾರೆ.
ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿರುವಂತೆ ಭಾರತ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ಸ್ಥಾನ ಮತ್ತು ಎನ್ ಎಸ್ ಜಿ ಸದಸ್ಯ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದು, ಈ ಹೊತ್ತಿನಲ್ಲಿ ಇಂತಹ ಆರೋಪಗಳು ಅದಕ್ಕೆ ಮಾರಕವಾಗಬಹುದು ಎಂದ ಕಾರಣದಿಂದಲೇ ಪಾಕಿಸ್ತಾನ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


