ಯಾವುದೇ ದೇಶದಿಂದಲೂ ಭಯೋತ್ಪಾದನೆ ಮಾನ್ಯ ಮಾಡಲು ಸಾಧ್ಯವಿಲ್ಲ: ಪಾಕ್ ವಿರುದ್ದ ಪ್ರಧಾನಿ ಮೋದಿ ಕಿಡಿ
ವಿಶ್ವದ ಯಾವುದೇ ದೇಶದಿಂದಲೂ ಕೂಡ ಭಯೋತ್ಪಾದನೆಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.

ನವದೆಹಲಿ: ವಿಶ್ವದ ಯಾವುದೇ ದೇಶದಿಂದಲೂ ಕೂಡ ಭಯೋತ್ಪಾದನೆಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.
ಎರಡು ದಿನಗಳ ಪ್ರವಾಸದ ನಿಮಿತ್ತ ಭಾರತಕ್ಕೆ ಆಗಮಿಸಿದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರನ್ನು ಸ್ವಾಗತಿಸಿ ರಾಷ್ಟ್ರಪತಿ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಯೋತ್ಪಾದನೆಗೆ ಯಾವುದೇ ಗೊತ್ತು ಗುರಿಗಳಿಲ್ಲ. ವಿಶ್ವದ ಯಾವುದೇ ದೇಶದಿಂದಲೂ ಕೂಡ ಭಯೋತ್ಪಾದನೆಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ವಿಶ್ವ ಸಮುದಾಯ ಒಗ್ಗೂಡಿ ಈ ಭಯೋತ್ಪಾದನೆಯನ್ನು ಬುಡ ಸಹಿತ ಕಿತ್ತೊಗೆಯಬೇಕಿದೆ ಎಂದು ಹೇಳಿದರು.
ಇದೇ ವೇಳೆ ಪಾಕಿಸ್ತಾನದ ಹೆಸರನ್ನು ಬಳಕೆ ಮಾಡದೆಯೇ ಪಾಕ್ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, ಭಯೋತ್ಪಾದಕರಿಗೆ ಆಶ್ರಯ ನೀಡಿರುವ ದೇಶದ ವಿರುದ್ಧ ವಿಶ್ವ ಸಮುದಾಯ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಉಗ್ರರಿಗೆ ನೆರವು ನೀಡುತ್ತಿರುವ ರಾಷ್ಟರ ಮೊದಲು ತನ್ನ ನೆಲದ ಉಗ್ರರ ವಿರುದ್ಧ ಮೊದಲ ಕಠಿಣ ಕ್ರಮ ಕೈಗೊಳ್ಳಬೇಕಿದೆ. ನಿರ್ದಿಷ್ಟ ದೇಶದಿಂದ ಉಗ್ರರಿಗೆ ನೆರವು ದೊರೆಯುತ್ತಿದ್ದು, ಆ ನೆರವನ್ನು ಮೊದಲು ನಿಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ಭಾರತ ಮತ್ತು ಟರ್ಕಿ ದೇಶಗಳು ಜಂಟಿಯಾಗಿ ಹೋರಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಟರ್ಕಿ ಬೆಂಬಲ ಘೋಷಿಸಿದ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್
ಇನ್ನು ಇದೇ ವೇಳೆ ಮಾತನಾಡಿದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು, ಎನ್ಎಸ್ಜಿ ಸದಸ್ಯತ್ವ ಪಡೆಯಲು ಭಾರತಕ್ಕೆ ಟರ್ಕಿ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು. ಅಂತೆಯೇ ಭಾರತದೊಂದಿಗೆ ಉತ್ತಮ ವ್ಯಾಪಾರ ವಹಿವಾಟು ಸಂಬಂಧವನ್ನು ಟರ್ಕಿ ಬಯಸಲಿದೆ ಎಂದು ಅವರು ಹೇಳಿದರು.
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಸಮಸ್ಯೆ ಕುರಿತು ಉಭಯ ರಾಷ್ಟ್ರಗಳು ಬಗೆಹರಿಸಿಕೊಳ್ಳಬೇಕಿದೆ. ಭಾರತ ಇಬ್ಭಾಗವಾಗಿರುವುದೇ ದೊಡ್ಡ ಆಘಾತಕಾರಿ ಸಂಗತಿ. ಭಾರತದಿಂದ ಮತ್ತೊಂದು ದೇಶ ಬೇರ್ಪಟ್ಟಿರುವುದು ತೀವ್ರ ಬೇಸರದ ಸಂಗತಿಯೂ ಆಗಿದೆ. ಎರಡೂ ರಾಷ್ಟ್ರಗಳು ಸಮಸ್ಯೆ ಬಗೆಹರಿಸಿಕೊಳ್ಳುವ ವಿಶ್ವಾಸವಿದೆ. ಈ ವಿವಾದವನ್ನು ಹೀಗೆ ಮುಂದುವರಿಸುತ್ತಾ ಹೋದರೆ ಮುಂದಿನ ಪೀಳಿಗೆಗೂ ಈ ಸಮಸ್ಯೆ ಹೀಗೆ ಇರಲಿದೆ ಎಂದು ಎರ್ಡೋಗನ್ ಆತಂಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


