ಎಲ್ ಒಸಿ ಉಗ್ರ ಕ್ಯಾಂಪ್ ಗಳ ಮೇಲೆ ಮುಗಿಬಿದ್ದ ಸೇನೆ, 37 ಉಗ್ರರ ಹತ್ಯೆ!
ಗಡಿ ನಿಯಂತ್ರಣ ರೇಖೆಯಲ್ಲಿ ಅವಿತಿದ್ದ ಹಲವು ಉಗ್ರರ ವಿರುದ್ಧ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್ ಹೇಳಿದ್ದಾರೆ.

ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ ಅವಿತಿದ್ದ ಹಲವು ಉಗ್ರರ ವಿರುದ್ಧ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಣ್ ಬೀರ್ ಸಿಂಗ್ ಅವರು, ಸೇನೆಗೆ ದೊರೆತ ಖಚಿತ ಮಾಹಿತಿಗಳ ಆಧಾರದ ಮೇಲೆ ಕಳೆದ ರಾತ್ರಿ ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಸುಮಾರು 37 ಉಗ್ರರನ್ನು ಕೊಲ್ಲಲಾಗಿದ್ದು, ಅವರೊಂದಿಗಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದರು.
"ಸೇನೆಗೆ ದೊರೆತ ಖಚಿತ ಮಾಹಿತಿಯಾಧಾರದ ಮೇಲೆ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿದ್ದ ಹಲವು ಉಗ್ರರ ವಿರುದ್ಧ ದಾಳಿ ಮಾಡಲಾಗಿದೆ. ಈ ವೇಳೆ ಹಲವು ಉಗ್ರರು ಸಾವನ್ನಪ್ಪಿದ್ದು, ಅವರ ಬೆಂಬಲಿಗರೂ ಕೂಡ ಗಾಯಗೊಂಡಿದ್ದಾರೆ. ಭಾರತೀಯ ಸೇನಾ ವಲಯದಲ್ಲಿ ಯಾವುದೇ ರೀತಿಯ ಸಾವು-ನೋವುಗಳಾಗಿಲ್ಲ ಎಂದು ರಣ್ ಬೀರ್ ಸಿಂಗ್ ಹೇಳಿದ್ದಾರೆ. ಇದೇ ವೇಳೆ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಣ್ ಬೀರ್ ಸಿಂಗ್ ಅವರು, ಯಾವುದೇ ರೀತಿಯ ಭಾರತ ವಿರೋಧಿ ಕಾರ್ಯಾಚರಣೆಗಳನ್ನು ಸೇನೆ ಸಹಿಸುವುದಿಲ್ಲ. ಅಕ್ರಮ ನುಸುಳುವಿಕೆಯಂತಹ ಘಟನೆಗಳು ನಡೆದರೆ ಖಂಡಿತಾ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪಾಕ್ ಅಕ್ರಮಿತ ಕಾಶ್ಮೀರದಲ್ಲಿದ್ದ 6 ಉಗ್ರ ಕ್ಯಾಂಪ್ ಗಳು ಧ್ವಂಸ
ಇನ್ನು ಮೂಲಗಳ ಪ್ರಕಾರ ಕಳೆದ ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ಕೆಲ ನಿರ್ಧಿಷ್ಟ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಅಕ್ರಮಿತ ಕಾಶ್ಮೀರದ ಸುಮಾರು 3 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಡಿ ನಿಯಂತ್ರಣ ರೇಖೆ ಬಳಿಯ ಕೇಲ್ ಮತ್ತು ಭೀಮ್ ಬರ್ ಪ್ರದೇಶದಲ್ಲಿ ಸೀಮಿತ ದಾಳಿ ನಡೆಸಿದೆ. ಈ ವೇಳೆ ಸುಮಾರು 6 ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ಮಾಡಲಾಗಿದ್ದು, ಕ್ಯಾಂಪ್ ಸಂಪೂರ್ಣ ಧ್ವಂಸಗೊಂಡಿದೆ ಎಂದು ತಿಳಿದುಬಂದಿದೆ. ಉಗ್ರರು ಅಲ್ಲಿ ಮಾಡಿಕೊಂಡಿದ್ದ ಸಂಪೂರ್ಣ ಮೂಲಸೌಕರ್ಯಗಳು ಕೂಡ ಧ್ವಂಸವಾಗಿದೆ ಎಂದು ಹೇಳಲಾಗುತ್ತಿದೆ.
ಅಜಿತ್ ಧೋವಲ್ ನಿರ್ದೇಶನದ ಮೇರೆಗೆ ಕಾರ್ಯಾಚರಣೆ
ಇನ್ನು ರಾತ್ರಿ ನಡೆದ ಸೇನಾ ಕಾರ್ಯಾಚರಣೆಯ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಪಾತ್ರವಿದೆ ಎಂದು ಹೇಳಲಾಗುತ್ತಿದ್ದು, ಅಜಿತ್ ಧೋವಲ್ ನಿರ್ದೇಶನದ ಮೇರೆಗೆ ರಾತ್ರಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಧೋವಲ್ ನಿರ್ದೇಶನದ ಮೇರೆಗೆ ಗಡಿ ನಿಯಂತ್ರಣ ರೇಖೆಯಲ್ಲಿರುವ ಉಗ್ರರ ಕ್ಯಾಂಪ್ ಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಅಪ್ರಚೋದಿತ ದಾಳಿಗಳಾದರೆ ಅದಕ್ಕೆ ಸಂಪೂರ್ಣ ಬಲದೊಂದಿಗೆ ಉತ್ತರ ನೀಡಿ ಎಂದು ಸೈನಿಕರಿಗೆ ಹೇಳಿದ್ದರು. ಇದರ ಬೆನ್ನಲ್ಲೇ ಕಳೆದ ರಾತ್ರಿ ಪಾಕಿಸ್ತಾನಿ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಇದೀಗ ಸ್ವತಃ ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್ ಅವರು ಸೈನಿಕ ಕಾರ್ಯಾಚರಣೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಭಾರತ ನಡೆಸಿದ ಈ ಕಾರ್ಯಾಚರಣೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, 18 ಯೋಧರ ಸಾವಿಗೆ ಕಾರಣವಾಗಿದ್ದ ಉರಿ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ ಪ್ರಮುಖ ಕಾರ್ಯಾಚರಣೆ ಇದಾಗಿದೆ.
ಈ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇನೆ ನುಗ್ಗಿ 20 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಬಳಿಕ ಅದನ್ನು ಅಲ್ಲಗಳೆದಿದ್ದ ಸೇನಾಧಿಕಾರಿಗಳ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದರು. ಇದೀಗ ದಿಢೀರನೇ ಇಂದು ಸುದ್ದಿಗೋಷ್ಠಿ ನಡೆಸಿದ ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್ ಅವರು ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯಾಚರಣೆ ನಡೆಸಿ ಅಲ್ಲಿ ನಡೆಯುತ್ತಿದ್ದ ಉಗ್ರ ಚಟುವಟಿಗಳನ್ನು ನಿಯಂತ್ರಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


